ಗುಜರಾತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿಂದಿಕ್ಕಿದ ಆಮ್ ಆದ್ಮಿ ಪಕ್ಷ

Gujarat Municipal Election Results 2021: ಕೇಜ್ರಿವಾಲ್ ಅವರ ದೆಹಲಿ ಮಾದರಿಯು ಗುಜರಾತಿನಲ್ಲಿ ಭರವಸೆ ಮೂಡಿಸಿದೆ ಎಂದು ಎಎಪಿ ಟ್ವೀಟ್ ಮಾಡಿದೆ. ದೆಹಲಿಯ ಆಡಳಿತಾರೂಢ ಪಕ್ಷವಾದ ಎಎಪಿ ಈಗ ದೇಶದಾದ್ಯಂತ ತಮ್ಮ ಬಾಹುಗಳನ್ನು ವಿಸ್ತರಿಸುತ್ತಿದೆ.

  • TV9 Web Team
  • Published On - 19:09 PM, 23 Feb 2021
ಗುಜರಾತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿಂದಿಕ್ಕಿದ ಆಮ್ ಆದ್ಮಿ ಪಕ್ಷ
ಸೂರತ್ ಜನತೆಗೆ ಧನ್ಯವಾದ ಹೇಳಿದ ಆಮ್ ಆದ್ಮಿ ಪಕ್ಷ

ಅಹಮದಾಬಾದ್: ಗುಜರಾತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಮತ್ತೊಮ್ಮೆ ಅಧಿಕಾರಕ್ಕೇರಲು ಸಿದ್ಧತೆ ನಡೆಸುತ್ತಿರುವಾಗ ಆಮ್ ಆದ್ಮಿ ಪಕ್ಷ (AAP) ಕಾಂಗ್ರೆಸ್ ಪಕ್ಷವನ್ನುಹಿಂದಿಕ್ಕಿದೆ. ಮತಎಣಿಕೆ ಪ್ರಕ್ರಿಯೆ ಕೊನೆಯ ಹಂತಕ್ಕೆ ತಲುಪಿದ್ದು ಸೂರತ್ ಮಹಾನಗರ ಪಾಲಿಕೆಯಲ್ಲಿ 120 ಸೀಟುಗಳ ಪೈಕಿ ಬಿಜೆಪಿ 93 ಮತ್ತು ಆಮ್ ಆದ್ಮಿ ಪಕ್ಷ 27 ಸೀಟುಗಳನ್ನು ಗೆದ್ದುಕೊಂಡಿದೆ. ಸೂರತ್ ಮಾತ್ರವಲ್ಲ ಇತರ ಮುನ್ಸಿಪಲ್ ಕಾರ್ಪರೇಷನ್ ಗಳಲ್ಲಿಯೂ ಆಮ್ ಆದ್ಮಿ ಪಕ್ಷ ಉತ್ತಮ ಪ್ರದರ್ಶನ ನೀಡಿದೆ. ಕೇಜ್ರಿವಾಲ್ ಅವರ ದೆಹಲಿ ಮಾದರಿಯು ಗುಜರಾತಿನಲ್ಲಿ ಭರವಸೆ ಮೂಡಿಸಿದೆ ಎಂದು ಎಎಪಿ ಟ್ವೀಟ್ ಮಾಡಿದೆ. ಗುಜರಾತಿನ ಆಮ್ ಆದ್ಮಿ ಪಕ್ಷದ ಟ್ವಿಟರ್ ಖಾತೆಯಲ್ಲಿ ಪಕ್ಷ ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದೆ.

ದೆಹಲಿಯ ಆಡಳಿತಾರೂಢ ಪಕ್ಷವಾದ ಎಎಪಿ ಈಗ ದೇಶದಾದ್ಯಂತ ತಮ್ಮ ಬಾಹುಗಳನ್ನು ವಿಸ್ತರಿಸುತ್ತಿದೆ. ಈ ಹಿಂದೆ ಗೋವಾ ಮತ್ತು ಕಾಶ್ಮೀರದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಎಪಿ ಉತ್ತಮ ಪ್ರದರ್ಶನ ನೀಡಿತ್ತು. ಎಎಪಿ ಅಭ್ಯರ್ಥಿ ಹೇಜೆಲ್ ಫರ್ನಾಂಡಿಸ್ ಗೋವಾದ ಪಂಚಾಯತ್ ಚುನಾವಣೆಯಲ್ಲಿ ಗೆದ್ದಿದ್ದರು. ಆಮ್ ಆದ್ಮಿ ಪಕ್ಷದ ನಾಯಕ ಮೆಹರಾಜ್ ಮಲಿಕ್ ಜಮ್ಮುವಿನ ದೋಡಾ ಜಿಲ್ಲೆಯ ಕಹರಾ ಚುನಾವಣಾ ಕ್ಷೇತ್ರದಲ್ಲಿ ಡಿಡಿಸಿ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು.

ಗುಜರಾತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇದೇ ಮೊದಲ ಬಾರಿ ಆಮ್ ಆದ್ಮಿ ಪಕ್ಷ ಎಲ್ಲ ಸೀಟುಗಳಲ್ಲಿ ಸ್ಪರ್ಧಿಸಿದೆ. ಎಎಪಿಯ ಪ್ರಮುಖ ನಾಯಕರಿಗೆ ನಿರ್ದಿಷ್ಟ ರಾಜ್ಯದಲ್ಲಿ ಚುನಾವಣೆಯ ಉಸ್ತುವಾರಿಯನ್ನು ನೀಡಲಾಗಿತ್ತು. ಈ ಬಾರಿ ಗುಜರಾತಿನಲ್ಲಿ ಅತಿಷಿ ಅವರು ಚುನಾವಣೆಯ ಉಸ್ತುವಾರಿ ವಹಿಸಿದ್ದರು. ಉತ್ತರ ಪ್ರದೇಶ, ಉತ್ತರಾಖಂಡ್, ಗೋವಾ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಗುಜರಾತ್ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಸ್ಪರ್ಧಿಸುವ ಯೋಜನೆ ಇದೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.


ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್
ಹೊಸ ರಾಜಕಾರಣಕ್ಕೆ ನಾಂದಿ ಹಾಡಿದ ಗುಜರಾತಿನ ಜನರಿಗೆ ಶುಭಾಶಯಗಳು ಎಂದು ಅರವಿಂದ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.


ಫೆಬ್ರವರಿ 26ಕ್ಕೆ ಸೂರತ್ ನಲ್ಲಿ ರೋಡ್ ಶೋ
ಆಮ್ ಆದ್ಮಿ ಪಕ್ಷದ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಫೆಬ್ರವರಿ 26ರಂದು ಗುಜರಾತ್ ಗೆ ಭೇಟಿ ನೀಡಿ ರೋಡ್ ಶೋ ನಡೆಸಲಿದ್ದಾರೆ.


ಗುಜರಾತಿನಲ್ಲಿ ನಿಮಗೆ ಹೆಚ್ಚಿನ ಸೀಟುಗಳನ್ನು ಗೆಲ್ಲಲು ಸಹಕಾರಿಯಾಗಿದ್ದು ಏನು ಎಂಬುದಕ್ಕೆ ಉತ್ತರಿಸಿದ ಆಮ್ ಅದ್ಮಿ ಪಕ್ಷದ ಗುಜರಾತ್ ಉಸ್ತುವಾರಿ, ಮತಿಯಾಲಾ ಶಾಸಕ ಗುಲಾಬ್ ಸಿಂಗ್, ಜನರು ದೆಹಲಿಯ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ. ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಸಿಗುವ ಶಿಕ್ಷಣ ಉತ್ತಮವಾಗಿರುವಾಗ ಇಲ್ಲಿಯೂ ಅದನ್ನು ಜನರು ಬಯಸುತ್ತಿದ್ದಾರೆ. ದೆಹಲಿಯಲ್ಲಿ ಮೊಹಲ್ಲಾ ಕ್ಲಿನಿಕ್ ಇರುವುದಾದರೆ ಗುಜರಾತಿನಲ್ಲಿ ಯಾಕೆ ಇರಬಾರದು? ಮಹಿಳೆಯರು ದೆಹಲಿಯಲ್ಲಿ ಉಚಿತವಾಗಿ ಪ್ರಯಾಣಿಸುವಾದರೆ ಗುಜರಾತಿನಲ್ಲಿಯೂ ಅದು ಸಾಧ್ಯ, ಕಡಿಮೆ ದರದಲ್ಲಿ ದೆಹಲಿಯಲ್ಲಿ ವಿದ್ಯುತ್ ಸಿಗುವುದಾದರೆ, ಇಲ್ಲಿ ಯಾಕೆ ಆಗಲ್ಲ? ಈ ಎಲ್ಲ ಪ್ರಶ್ನೆಗಳು ಗುಜರಾತಿನ ಜನರ ಮನಸ್ಸಿನಲ್ಲಿ ಮೂಡಿದ್ದವು. ಈ ಕಾರಣದಿಂದಲೇ ನಮಗೆ ಹೆಚ್ಚಿನ ಮತ ಸಿಕ್ಕಿತು ಎಂದಿದ್ದಾರೆ.

ಇದನ್ನೂ ಓದಿ: Gujarat Civic Poll Results 2021: ಗುಜರಾತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 294 ಸೀಟು ಗೆದ್ದ ಬಿಜೆಪಿ, ಸಂಭ್ರಮಾಚರಣೆ ಶುರು