ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಆಮ್ ಆದ್ಮಿ ಪಕ್ಷದ (AAP) ಸಚಿವ ಸತ್ಯೇಂದ್ರ ಜೈನ್ (Satyendar Jain) ತಿಹಾರ್ ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋವನ್ನು ಬಿಜೆಪಿ (BJP) ಬಿಡುಗಡೆ ಮಾಡಿದೆ. ಸತ್ಯೇಂದ್ರ ಜೈನ್‌ಗೆ ವಿಐಪಿ ಟ್ರೀಟ್ಮೆಂಟ್ ನೀಡಿದ್ದಕ್ಕಾಗಿ ತಿಹಾರ್ ಜೈಲಿನ ಸೂಪರಿಂಟೆಂಡೆಂಟ್ ಅಜಿತ್ ಕುಮಾರ್ ಅವರನ್ನು ಅಮಾನತುಗೊಳಿಸಿದ ಕೆಲವು ದಿನಗಳ ನಂತರ ಇದೀಗ ಬಿಜೆಪಿ ಹಳೆಯ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.
ತಿಹಾರ್ ಜೈಲಿನ ಮೂಲಗಳ ಪ್ರಕಾರ, ಈ ವಿಡಿಯೋ ಹಳೆಯದು. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜೈಲು ಸಿಬ್ಬಂದಿ ವಿರುದ್ಧ ಜೈಲು ಅಧಿಕಾರಿಗಳು ಈಗಾಗಲೇ ಈ ಬಗ್ಗೆ ಕ್ರಮ ಕೈಗೊಂಡಿದ್ದಾರೆ.
#WATCH | CCTV video emerges of jailed Delhi minister Satyendar Jain getting a massage inside Tihar jail. pic.twitter.com/VMi8175Gag
— ANI (@ANI) November 19, 2022
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಸತ್ಯೇಂದ್ರ ಜೈನ್‌ಗೆ ತಿಹಾರ್ ಜೈಲಿನಲ್ಲಿ ವಿಐಪಿ ಚಿಕಿತ್ಸೆ ನೀಡಲಾಗಿದ್ದು, ತಲೆಗೆ ಮಸಾಜ್, ಪಾದಕ್ಕೆ ಮಸಾಜ್ ಮತ್ತು ಬೆನ್ನಿಗೆ ಮಸಾಜ್ ಮಾಡುತ್ತಿರುವುದನ್ನು ಸಿಸಿಟಿವಿಯ ವಿಡಿಯೋದಲ್ಲಿ ನೋಡಬಹುದು. ಆಪ್ ದೆಹಲಿ ಸಚಿವರಿಗೆ ಜೈಲಿನಲ್ಲಿ ಐಷಾರಾಮಿ ವ್ಯಸ್ಥೆ ಕಲ್ಪಿಸಿಕೊಟ್ಟಿರುವುದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಇಡಿ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಇದನ್ನೂ ಓದಿ: ಸತ್ಯೇಂದ್ರ ಜೈನ್‌ಗೆ ವಿವಿಐಪಿ ವ್ಯವಸ್ಥೆ ಮಾಡಿದ ಆರೋಪ: ದೆಹಲಿಯ ತಿಹಾರ್ ಸೆಂಟ್ರಲ್ ಜೈಲಿನ ಡಿಜಿ ವರ್ಗಾವಣೆ
58 ವರ್ಷದ ದೆಹಲಿ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ ಅವರನ್ನು ಮೇ 30ರಂದು ಬಂಧಿಸಲಾಗಿತ್ತು. ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಬಿಜೆಪಿ, “ಜೈಲಿನಲ್ಲಿ ವಿವಿಐಪಿ ಚಿಕಿತ್ಸೆ! ಕೇಜ್ರಿವಾಲ್ ಇಂತಹ ಮಂತ್ರಿಯನ್ನು ಸಮರ್ಥಿಸಿಕೊಳ್ಳುತ್ತಾರಾ? ಅವರನ್ನು ವಜಾ ಮಾಡಬೇಕಲ್ಲವೇ? ಇದು ಎಎಪಿಯ ನಿಜವಾದ ಮುಖವನ್ನು ತೋರಿಸುತ್ತದೆ!” ಎಂದು ಬಿಜೆಪಿಯ ಶೆಹಜಾದ್ ಜೈ ಹಿಂದ್ ಅವರು ಟ್ವಿಟ್ಟರ್ನಲ್ಲಿ ಸತ್ಯೇಂದ್ರ ಜೈನ್ ಕಾಲಿಗೆ ಮಸಾಜ್ ಮಾಡಿಸಿಕೊಳ್ಳುತ್ತಿರುವ ಮತ್ತೊಂದು ಸಿಸಿಟಿವಿ ದೃಶ್ಯವನ್ನು ಹಂಚಿಕೊಂಡಿದ್ದಾರೆ.
ಈ ಹಿಂದೆ ಜೈನ್‌ಗೆ ಜೈನ್‌ಗೆ ವಿಶೇಷ ಚಿಕಿತ್ಸೆ ನೀಡಿದ ಆರೋಪಗಳನ್ನು ಆಮ್ ಆದ್ಮಿ ಪಕ್ಷವು ತಳ್ಳಿಹಾಕಿತ್ತು. ಆಧಾರರಹಿತವಾಗಿ ಬಿಜೆಪಿ ಆರೋಪ ಮಾಡುತ್ತಿದೆ ಎಂದು ಹೇಳಿತ್ತು.