ಅಯೋಧ್ಯೆಯ ರಾಮನಿಗೆ ಉಡುಗೊರೆಗಳ ಮಹಾಪೂರ: ರಾಮ ಲಲ್ಲಾಗೆ ಅತಿದೊಡ್ಡ ಗಿಫ್ಟ್ ಕೊಟ್ಟಿದ್ಯಾರು ಗೊತ್ತಾ?

|

Updated on: Jan 24, 2024 | 6:51 AM

ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆಯಾಗಿದ್ದು, ಭಕ್ತರ ದರ್ಶನಕ್ಕೆ ಮಂದಿರ ಮುಕ್ತವಾಗಿದೆ. ರಾಮ ಮಂದಿರ ಭವ್ಯವಾಗಿ ತಲೆಯೆತ್ತುವಂತಾಗಲು ಅನೇಕರು ಕೊಡುಗೆ ನೀಡಿದ್ದಾರೆ. ಆದರೆ, ಅತಿ ಹೆಚ್ಚಿನ ಮೊತ್ತ ದೇಣಿಗೆ ನೀಡಿದವರು ಯಾರು ಎಂಬ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ. ಆ ವಿವರ ಇಲ್ಲಿದೆ.

ಅಯೋಧ್ಯೆಯ ರಾಮನಿಗೆ ಉಡುಗೊರೆಗಳ ಮಹಾಪೂರ: ರಾಮ ಲಲ್ಲಾಗೆ ಅತಿದೊಡ್ಡ ಗಿಫ್ಟ್ ಕೊಟ್ಟಿದ್ಯಾರು ಗೊತ್ತಾ?
ಅಯೋಧ್ಯೆಯ ರಾಮಮಂದಿರ
Follow us on

ಅಯೋಧ್ಯೆ, ಜನವರಿ 24: ಅಯೋಧ್ಯೆಯ ರಾಮಮಂದಿರ (Ayodhya Ram Mandir) ಶತಶತಮಾನಗಳ ಭಾರತೀಯರ ಕನಸು. ರಾಮಮಂದಿರ ನಿರ್ಮಾಣಕ್ಕಾಗಿ ದೇಶದ ಮೂಲೆ ಮೂಲೆಯಿಂದಲೂ ಭಕ್ತರು ತಮ್ಮ ಶಕ್ತ್ಯಾನುಸಾರ ಕಾಣಿಕೆ ಅರ್ಪಿಸಿದ್ದಾರೆ. ಹಣ ಮಾತ್ರವಲ್ಲ ಕಬ್ಬಿಣ, ಇಟ್ಟಿಗೆ ಹೀಗೆ ಅನೇಕ ವಸ್ತುಗಳನ್ನು ಸಮರ್ಪಿಸಿದ್ದಾರೆ. ಈಗ ಭವ್ಯ ರಾಮಮಂದಿರ ತಲೆ ಎತ್ತಿ ನಿಂತಿದೆ. ಈ ರಾಮಮಂದಿರಕ್ಕೆ ಅತಿಹೆಚ್ಚು ದೇಣಿಗೆ ನೀಡಿದವರು, ಅತಿದೊಡ್ಡ ಕಾಣಿಕೆ ನೀಡಿದರು ಯಾರು ಎಂದರೆ, ಭಾರತದ ಶ್ರೀಮಂತ ಉದ್ಯಮಿ ಅಂಬಾನಿಯೋ, ಟಾಟಾ ಬಿರ್ಲಾ ಅವರೋ? ಯಾರೂ ಅಲ್ಲ. ಗುಜರಾತ್‌ನ ಖ್ಯಾತ ವಜ್ರದ ವ್ಯಾಪಾರಿ ದಿಲೀಪ್ ಕುಮಾರ್ ವಿ ಲಖಿ ಎಂಬವರು.

ರಾಮನಿಗೆ 101 ಕೆಜಿ ಚಿನ್ನ ಅರ್ಪಣೆ

ದಿಲೀಪ್ ಕುಮಾರ್ ವಿ ಲಖಿ ಉದಾತ್ತ ಮನಸ್ಸಿನಿಂದ ರಾಮನ ಸೇವೆಗಾಗಿ ಬರೋಬ್ಬರಿ 101 ಕೆಜಿ ಚಿನ್ನವನ್ನು ಸಮರ್ಪಿಸಿದ್ದಾರೆ. ಗುಜರಾತ್‌ ದಿಲೀಪ್ ಕುಮಾರ ವಿ ಲಖಿ ಅವರದ್ದು ವಜ್ರ ವ್ಯಾಪಾರದ ಕುಟುಂಬ. ರಾಮನ ಪರಮಭಕ್ತರಾಗಿರುವ ಅವರು 101 ಕೆಜಿ ಚಿನ್ನವನ್ನ ಕಾಣಿಕೆಯಾಗಿ ನೀಡಿದ್ದಾರೆ. ಸದ್ಯ 10 ಗ್ರಾಮ್ ಚಿನ್ನಕ್ಕೆ 68 ಸಾವಿರ ರೂಪಾಯಿ ಇದ್ದು, 101 ಕೆಜಿಗೆ ಅಂದಾಜು 68 ಕೋಟಿ ರೂಪಾಯಿಗಳಷ್ಟು ಆಗುತ್ತದೆ.

ದಿಲೀಪ್ ಕೊಟ್ಟ ಚಿನ್ನವನ್ನು ಯಾವುದಕ್ಕೆಲ್ಲ ಬಳಕೆ?

ವಜ್ರದ ವ್ಯಾಪಾರಿ ದಿಲೀಪ್ ಕುಮಾರ್ ಕೊಟ್ಟಿರುವ 101 ಕೆಜಿ ಬಂಗಾರವನ್ನು ರಾಮಮಂದಿರದ ಬಾಗಿಲುಗಳಿಗೆ ಬಳಸಿಕೊಳ್ಳಲಾಗಿದೆ. ಗರ್ಭಗುಡಿಗೆ ಬಳಸಿಕೊಳ್ಳಲಾಗಿದೆ. ಚಿನ್ನದ ತ್ರಿಶೂಲ, ಚಿನ್ನ ಢಮರುಗ, ಹಾಗೇ ಗರ್ಭಗುಡಿ ಮುಂಭಾಗದ ಸ್ತಂಭಗಳಿಗೆ ಈ ಚಿನ್ನವನ್ನು ಬಳಸಿಕೊಳ್ಳಲಾಗಿದೆ.

ಹೆಚ್ಚುವರಿಯಾಗಿ, ಸೂರತ್‌ನ ಮತ್ತೊಬ್ಬ ವಜ್ರದ ಉದ್ಯಮಿ ಗೋವಿಂದಭಾಯ್ ಧೋಲಾಕಿಯಾ ಅವರು 11 ಕೋಟಿ ರೂ. ನೀಡಿದ್ದಾರೆ. ಧೋಲಾಕಿಯಾ ಅವರು ಶ್ರೀ ರಾಮಕೃಷ್ಣ ಎಕ್ಸ್‌ಪೋರ್ಟ್ಸ್ ಸ್ಥಾಪಕರು.

ಬಾಲರಾಮನಿಗೆ 11ಕೋಟಿ ರೂ.ನ ವಜ್ರ ಖಚಿತ ಕಿರೀಟ

ಗುಜರಾತ್‌ನ ಮತ್ತೊಬ್ಬ ವಜ್ರದ ವ್ಯಾಪಾರಿ ಮುಖೇಶ್ ಪಟೇಲ್ ಎಂಬವರು 11 ಕೋಟಿ ರೂಪಾಯಿ ಬೆಲೆಬಾಳುವ 6 ಕೆಿಜಿ ತೂಕದ ವಜ್ರಖಚಿತ ಕಿರೀಟವನ್ನು ಬಾಲರಾಮನಿಗೆ ಅರ್ಪಿಸಿದ್ದಾರೆ. ಬಂಗಾರ, ವಜ್ರ, ಅಮೂಲ್ಯ ರತ್ನದ ಕಲ್ಲುಗಳನ್ನು ಈ ಕಿರೀಟ ಒಳಗೊಂಡಿದೆ.

ಇದನ್ನೂ ಓದಿ: ಅಯೋಧ್ಯೆಯ ರಾಮಲಲ್ಲಾಗೆ 11 ಕೋಟಿ ರೂ. ಮೌಲ್ಯದ ವಜ್ರದ ಕಿರೀಟ ದಾನ ಮಾಡಿದ ಗುಜರಾತ್​ನ ವಜ್ರ ವ್ಯಾಪಾರಿ

ರಾಮಾಯಣ ಪ್ರಚಾರಕನಿಂದ 18.3 ಕೋಟಿ ರೂಪಾಯಿ ದೇಣಿಗೆ

ಕಳೆದ 6 ದಶಕಗಳಿಂದ ದೇಶ, ವಿದೇಶದಲ್ಲಿ ರಾಮಾಯಣ ಪ್ರಚಾರದಲ್ಲಿ ತಮ್ಮ ತೊಡಗಿಸಿಕೊಂಡಿರುವ ಮೊರಾರಿ ಬಾಪು ಎಂಬವರು ರಾಮಮಂದಿರ ನಿರ್ಮಾಣ ಕಾರ್ಯಕ್ಕೆ 18.3 ಕೋಟಿ ರೂಪಾಯಿ ಸಂಗ್ರಹಿಸಿ ಕೊಟ್ಟಿದ್ದಾರೆ.

ಅಯೋಧ್ಯೆಯ ರಾಮ ಮಂದಿರ ಗರ್ಭಗುಡಿಯ ಚಿನ್ನಲೇಪಿತ ದ್ವಾರ

ಅಮೆರಿಕ, ಬ್ರಿಟನ್, ಯುರೋಪ್, ಕೆನಡಾ ಹೀಗೆ ವಿವಿಧ ದೇಶಗಳಲ್ಲಿ ಕಾರ್ಯಕ್ರಮ ನೀಡಿ ಈ ದೇಣಿಗೆ ಸಂಗ್ರಹಿಸಿದ್ದಾರೆ. ಈಗಾಗಲೇ 11.30ಕೋಟಿ ರೂಪಾಯಿಯನ್ನು ಅಯೋಧ್ಯೆ ಟ್ರಸ್ಟ್‌ಗೆ ಹಸ್ತಾಂತರಿಸಿದ್ದು, ಉಳಿದ ಹಣವನ್ನು ಫೆಬ್ರವರಿಯನ್ನು ನೀಡುವುದಾಗಿ ಹೇಳಿದ್ದಾರೆ.

ವಿದೇಶಗಳಿಂದ ರಾಮನಿಗೆ ಹರಿದು ಬಂತು 8 ಕೋಟಿ ರೂ.

ಸೋಮವಾರ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ರಾಮಮಂದಿರಕ್ಕೆ 2.51 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಇನ್ನು ಅಮೆರಿಕ, ಕೆನಡಾ, ಬ್ರಿಟನ್ ಸೇರಿ ವಿದೇಶಗಳಲ್ಲಿರುವ ಅನಿವಾಸಿ ಭಾರತೀಯರು, ರಾಮನ ಭಕ್ತರು 8 ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆಯನ್ನು ರಾಮಮಂದಿರಕ್ಕೆ ಸಮರ್ಪಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ