ಅಪರಿಚಿತ ವಾಹನವೊಂದು ಆಟೋರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಮೃತಪಟ್ಟಿದ್ದು, ಆರು ಜನರು ಗಾಯಗೊಂಡಿರುವ ಘಟನೆ ಬಿಹಾರದ ಲಖಿಸರಾಯ್ ಜಿಲ್ಲೆಯಲ್ಲಿ ನಡೆದಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಲಖಿಸರಾಯ್-ಸಿಕಂದ್ರ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಆಟೋ ಲಖಿಸರಾಯ್‌ನಿಂದ ಸಿಕಂದ್ರ ಕಡೆಗೆ ಹೋಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ವೇಳೆ ಆಟೋರಿಕ್ಷಾದಲ್ಲಿ 15 ಮಂದಿ ಇದ್ದರು. ಅಪಘಾತದ ರಭಸಕ್ಕೆ ಆಟೊರಿಕ್ಷಾ ಜಖಂಗೊಂಡಿತ್ತು.
ಮೃತ ಒಂಬತ್ತು ಮಂದಿಯಲ್ಲಿ ಒಬ್ಬನನ್ನು ಚಾಲಕ ಮನೋಜ್ ಕುಮಾರ್ ಎಂದು ಗುರುತಿಸಲಾಗಿದೆ. ಅಪಘಾತದ ಮಾಹಿತಿ ಪಡೆದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸದರ್ ಆಸ್ಪತ್ರೆಗೆ ಮೊದಲು ಕಳುಹಿಸಲಾಯಿತು, ಆದರೆ ಅವರ ಸ್ಥಿತಿ ಗಂಭೀರವಾದ ಕಾರಣ ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ. ಉಳಿದ ಎಂಟು ಮಂದಿ ಬಲಿಪಶುಗಳು ಮತ್ತು ಗಾಯಗೊಂಡವರ ಗುರುತು ಪತ್ತೆ ಹಚ್ಚಲಾಗುತ್ತಿದೆ. ಅಪರಿಚಿತ ವಾಹನ ಪತ್ತೆಗೆ ತನಿಖೆ ಮುಂದುವರೆದಿದೆ.
ಮತ್ತೊಂದು ಅಪಘಾತ
ಚನ್ನಪಟ್ಟಣ: ಬೈರಾಪಟ್ಟಣದ ಬಳಿ ಲಾರಿ, ಟಿಟಿ ಭೀಕರ ಅಪಘಾತ, ಸ್ಥಳದಲ್ಲೇ ಮೂವರು ಸಾವು
ಲಾರಿ ಹಾಗೂ ಟಿಟಿ ವಾಹನ ನಡುವೆ ಅಪಘಾತ (Accident) ಸಂಭವಿಸಿದ ಮೂವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಚನ್ನಪಟ್ಟಣದ (Channapatna) ಬೈರಾಪಟ್ಟಣದ ಚಾಮುಂಡೇಶ್ವರಿ ಮೆಡಿಕಲ್ ಕಾಲೇಜು ಬಳಿ ಶನಿವಾರ ಬೆಳಗ್ಗೆ ಸಂಭವಿಸಿದೆ. ಮೈಸೂರು ಕಡೆಗೆ ತೆರಳುತ್ತಿದ್ದ ಲಾರಿ ಹಾಗೂ ಟಿಟಿ ವಾಹನ ಡಿಕ್ಕಿಯಾಗಿವೆ. ಘಟನೆಯಲ್ಲಿ 6 ಜನ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಗಂಭೀರ ಸ್ಥಿತಿಯಲ್ಲಿರುವವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಮತ್ತಷ್ಟು ಓದಿ: ಮಹಾರಾಷ್ಟ್ರ: ಜೈನ ಸನ್ಯಾಸಿ ವಿದ್ಯಾಸಾಗರ ಅಂತ್ಯಕ್ರಿಯೆಗೆ ತೆರಳುತ್ತಿದ್ದ ವೇಳೆ ಕಾರು ಅಪಘಾತ, ಮೂವರು ಸಾವು
ಟಿಟಿಯಲ್ಲಿದ್ದವರು ಮದುವೆ ಸಮಾರಂಭ ಮುಗಿಸಿಕೊಂಡು ವಾಪಸ್ ತೆರಳುತ್ತಿದ್ದರು ಎನ್ನಲಾಗಿದೆ. ಕುಟುಂಬ ಸಮೇತ ವಾಪಸ್ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಟಿಟಿ ವಾಹನ ಹಿಂಬದಿಯಿಂದ ಲಾರಿಗೆ ಡಿಕ್ಕಿ ಹೊಡೆದೆ.
ಮೃತರನ್ನು ಸೋಮಲಿಂಗಪ್ಪ (70), ಶಿವಲಿಂಗಪ್ಪ (66), ರಾಜೇಶ್ವರಿ ಎಂದು ಗುರುತಿಸಲಾಗಿದೆ. ಸದ್ಯ ಆರು ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.