ಪುಣೆ: ಮುಂದಿನ 2 ವಾರಗಳಲ್ಲಿ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗಾಗಿ ಜನರಿಗೆ ಲಭ್ಯವಾಗಲು ಅನುಮತಿ ಪಡೆಯುವ ಪ್ರಕ್ರಿಯೆಯಲ್ಲಿ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಾರ್ಯೋನ್ಮುಖವಾಗಿದೆ ಎಂದು ಸಂಸ್ಥೆಯ ಸಿಇಒ ಅದಾರ್ ಪೂನಾವಾಲಾ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಬೆನ್ನಲ್ಲೇ ಪತ್ರಿಕಾಗೋಷ್ಠಿ ಕರೆದ ಪೂನಾವಾಲಾ ಈ ವಿಷಯ ತಿಳಿಸಿದರು. ಲಸಿಕೆ ತಯಾರಿಕೆಯ ಕುರಿತು ಪ್ರಧಾನಿಯವರಿಗಿರುವ ಮಾಹಿತಿ ಕಂಡು ನಮಗೇ ಆಶ್ಚರ್ಯವಾಯಿತು. ಕೇಂದ್ರ ಸರ್ಕಾರ ಎಷ್ಟು ಲಸಿಕೆಗಳನ್ನು ಖರೀದಿಸಲಿದೆ ಎಂಬ ಮಾಹಿತಿ ಅಧಿಕೃತವಾಗಿ ದೊರೆತಿಲ್ಲ. ಆದರೆ, 2021ರ ಜುಲೈ ಹೊತ್ತಿಗೆ 300ರಿಂದ 400ಮಿಲಿಯನ್ ಡೋಸೇಜ್ಗಳನ್ನು ಕೇಂದ್ರ ಸರ್ಕಾರ ಖರೀದಿಸಬಹುದು ಎಂದು ಅದಾರ್ ತಿಳಿಸಿದರು.
‘ದೇಶದ ಜನರಿಗೆ ಮೊದಲ ಆದ್ಯತೆ’
ಲಸಿಕೆಯನ್ನು ಮೊದಲು ದೇಶದ ಜನತೆಗಾಗಿ ಬಳಸಲಾಗುವುದು. ನಂತರ, ಆಫ್ರಿಕಾದ ದೇಶಗಳಿಗೆ ವಿತರಿಸಲಾಗುವುದು. ಅಮೆರಿಕ ಮತ್ತು ಯೂರೋಪ್ನ ದೇಶಗಳಿಗೆ ಆಸ್ಟ್ರಾಜೆನೆಕಾ ಮತ್ತು ಆಕ್ಸ್ಫರ್ಡ್ ವಿವಿಯ ಲಸಿಕೆ ಲಭಿಸಲಿದೆ. ಪುಣೆ ಮತ್ತು ಮಾಂಡ್ರಿಯಲ್ಲಿ ಅತ್ಯಾಧುನಿಕ ಸಾಂಕ್ರಾಮಿಕ ಪಿಡುಗು ನಿರ್ವಹಣಾ ಕೇಂದ್ರವನ್ನು ನಿರ್ಮಿಸಲಾಗಿದೆ. ಈ ಕುರಿತು ಪ್ರಧಾನಿಯವರಿಗೆ ವಿವರಿಸಿದ್ದೇವೆ ಎಂದು ಅವರು ತಿಳಿಸಿದರು.
Published On - 8:36 pm, Sat, 28 November 20