UP ಕಾನೂನು ಬಾಹಿರ ಮತಾಂತರ ನಿಷೇಧ ಸುಗ್ರೀವಾಜ್ಞೆಗೆ ಸಿಕ್ತು ರಾಜ್ಯಪಾಲರ ಅಂಕಿತ
ಉತ್ತರ ಪ್ರದೇಶ ರಾಜ್ಯಪಾಲ ಆನಂದಿಬೆನ್ ಪಟೇಲ್ ಇಂದು ಬಲವಂತದ ಮತಾಂತರ ನಿಷೇಧಿಸುವ ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ. ಅದರಂತೆ, ಬಲವಂತದ ಮತಾಂತರದಲ್ಲಿ ತೊಡಗಿರುವವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ.ಗಳ ವರೆಗೆ ದಂಡ ಸಹ ವಿಧಿಸಬಹುದಾಗಿದೆ.
ಲಕ್ನೊ: ಉತ್ತರ ಪ್ರದೇಶ ರಾಜ್ಯಪಾಲ ಆನಂದಿಬೆನ್ ಪಟೇಲ್ ಇಂದು ಬಲವಂತದ ಮತಾಂತರ ನಿಷೇಧಿಸುವ ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ. ಅದರಂತೆ, ಬಲವಂತದ ಮತಾಂತರದಲ್ಲಿ ತೊಡಗಿರುವವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ.ಗಳ ವರೆಗೆ ದಂಡ ಸಹ ವಿಧಿಸಬಹುದಾಗಿದೆ.
ಕಳೆದ ಕೆಲ ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಉತ್ತರ ಪ್ರದೇಶ ಸರ್ಕಾರದ ಈ ನಡೆಗೆ ಇದೀಗ ಮತ್ತಷ್ಟು ಬಲ ಸಿಕ್ಕಂತಾಗಿದೆ. ನಾಲ್ಕು ದಿನದ ಹಿಂದೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಸುಗ್ರೀವಾಜ್ಞೆಯ ಕರಡನ್ನು ಅಂಗೀಕರಿಸಿತ್ತು. ವಿವಾಹದ ಕಾರಣಕ್ಕೆ ಮತಾಂತರ ಮಾಡುವುದು ಅಥವಾ ಬಲವಂತದ ಮತಾಂತರವನ್ನು ನಿಷೇಧಿಸಲು ಉತ್ತರ ಪ್ರದೇಶ ಸರ್ಕಾರ ಈ ಸುಗ್ರೀವಾಜ್ಞೆಯನ್ನು ತಂದಿತ್ತು . ಇದೀಗ, ಈ ಸುಗ್ರೀವಾಜ್ಞೆಗೆ ರಾಜ್ಯಪಾಲರಿಂದಲೂ ಒಪ್ಪಿಗೆ ಸಿಕ್ಕಿದೆ.
ಸುಗ್ರೀವಾಜ್ಞೆಯಲ್ಲಿ ಏನಿದೆ? ಕಾನೂನುಬಾಹಿರ ಮತಾಂತರ ನಿಷೇಧ ಸುಗ್ರೀವಾಜ್ಞೆ, 2020ರ ಪ್ರಕಾರ, ಮಹಿಳೆಯೊಬ್ಬಳನ್ನು ಕೇವಲ ಮದುವೆಯ ಕಾರಣಕ್ಕೆ ಮತಾಂತರಗೊಳಿಸಿದರೆ ಆ ವಿವಾಹವನ್ನು ಅನೂರ್ಜಿತ ಎಂದು ಪರಿಗಣಿಸಲಾಗುವುದು. ವಿವಾಹದ ನಂತರ ತಮ್ಮ ಧರ್ಮವನ್ನು ಬದಲಿಸಲು ಇಚ್ಛಿಸುವವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕಿದೆ. ಜೊತೆಗೆ, ತಮ್ಮ ಮೂಲ ಧರ್ಮಕ್ಕೆ ಹಿಂದಿರುಗುವುದನ್ನು ಯಾವುದೇ ಕಾರಣಕ್ಕೂ ಮತಾಂತರ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಗ್ರೀವಾಜ್ಞೆಯಲ್ಲಿ ಉಲ್ಲೇಖಿಸಲಾಗಿದೆ . ಇದಲ್ಲದೆ,ಬಲವಂತವಾಗಿ ಮತಾಂತರ ನಡೆದಿಲ್ಲ ಎಂದು ಮತಾಂತರಗೊಂಡ ವ್ಯಕ್ತಿಯೇ ಸಾಕ್ಷಿ ನೀಡಬೇಕಾಗುತ್ತದೆ ಎಂದು ಸಹ ಉಲ್ಲೇಖಿಸಲಾಗಿದೆ.
ಯಾವುದೇ ವಿಧದ ಮತಾಂತರವನ್ನು ಸುಗ್ರೀವಾಜ್ಞೆಯು ವಿರೋಧಿಸುತ್ತದೆ. ಒಂದು ವೇಳೆ, ನಿಯಮ ಮೀರಿ ಮತಾಂತರ ನಡೆದರೆ, ಆರೋಪಿಯು ಸಂತ್ರಸ್ತರಿಗೆ 5 ಲಕ್ಷ ರೂ. ಪರಿಹಾರ ಮತ್ತು ಪ್ರತ್ಯೇಕ ದಂಡವನ್ನು ತೆರಬೇಕು ಎಂದು ಉಲ್ಲೇಖಿಸಲಾಗಿದೆ. ಜೊತೆಗೆ, ಸಾಮೂಹಿಕವಾಗಿ ಮತಾಂತರ ನಡೆಸಿದರೆ ಮತ್ತು ಎರಡನೇ ಬಾರಿ ಇಂಥ ಚಟುವಟಿಕೆಯಲ್ಲಿ ತೊಡಗಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಲಾಗಿದೆ.
ಕಳೆದ ಕೆಲವು ವಾರಗಳಿಂದ ಬಿಜೆಪಿ ಆಡಳಿತದ UP, ಹರಿಯಾಣ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಮತಾಂತರ ವಿರೋಧಿ ಕಾಯ್ದೆ ತರುವಂತೆ ಕೂಗು ಕೇಳಿಬಂದಿದ್ದು, ಹಿಂದೂ ಯುವತಿಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುವುದನ್ನು ತಡೆಯಲು ಸೂಕ್ತ ಕಾನೂನು ಜಾರಿಗೆ ತಿರುವಂತೆ ಹಲವು ಕಡೆಗಳಿಂದ ಬೇಡಿಕೆ ಸಹ ಕೇಳಿಬಂದಿತ್ತು. ಈ ನಡುವೆ, ಇದಕ್ಕೆ ಲವ್ ಜಿಹಾದ್ ಎಂಬ ಪದವನ್ನು ಸಹ ಚಾಲ್ತಿಗೆ ತರಲಾಗಿತ್ತು. (ಪಿಟಿಐ)
ಇದನ್ನೂ ಓದಿ ಲವ್ ಜಿಹಾದ್ ತಡೆಗೆ ಕಾನೂನು ಬೇಕಾ? ಧರ್ಮದ ಹೆಸರಲ್ಲಿ ಅಸಲಿ ಪ್ರೇಮಿಗಳಿಗೂ ತೊಂದರೆಯಾಗುತ್ತಿದೆಯಾ? ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ಗೆ ಬಿತ್ತು ಕಡಿವಾಣ.. ಮತಾಂತರ ನಿಷೇಧ ಸುಗ್ರೀವಾಜ್ಞೆಗೆ ಯೋಗಿ ಸಂಪುಟ ಅಸ್ತು
Published On - 8:15 pm, Sat, 28 November 20