ಅಹ್ಮದ್ ಪಟೇಲ್ ನಿಧನದಿಂದ ತೆರವಾದ AICC ಖಜಾಂಚಿ ಸ್ಥಾನಕ್ಕೆ ಪವನ್ ಕುಮಾರ್ ಬನ್ಸಲ್ ನೇಮಕ
ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ನಿಧನದಿಂದ ತೆರವಾಗಿದ್ದ AICC ಖಜಾಂಚಿ ಸ್ಥಾನಕ್ಕೆ ರಾಜ್ಯಸಭಾ ಮಾಜಿ ಸಂಸದ ಪವನ್ ಕುಮಾರ್ ಬನ್ಸಲ್ರನ್ನು ಮಧ್ಯಂತರ ಅವಧಿಗೆ ನೇಮಕ ಮಾಡಲಾಗಿದೆ.
ದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ನಿಧನದಿಂದ ತೆರವಾಗಿದ್ದ AICC ಖಜಾಂಚಿ ಸ್ಥಾನಕ್ಕೆ ರಾಜ್ಯಸಭಾ ಮಾಜಿ ಸಂಸದ ಪವನ್ ಕುಮಾರ್ ಬನ್ಸಲ್ರನ್ನು ಮಧ್ಯಂತರ ಅವಧಿಗೆ ನೇಮಕ ಮಾಡಲಾಗಿದೆ.
ಪವನ್ ಕುಮಾರ್ ಚಂಡೀಗಢ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಚುನಾಯಿತರಾಗಿದ್ದವರು ಹಾಗೂ ಅಂದಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಸಚಿವರಾಗಿದ್ದರು. ಜೊತೆಗೆ, ಒಂದು ಬಾರಿ ಪಂಜಾಬ್ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಅಷ್ಟೇ ಅಲ್ಲ, AICCಯ ರಾಷ್ಟ್ರೀಯ ವಕ್ತಾರ ಹಾಗೂ ಪಕ್ಷದ ರಿಸರ್ಚ್ ಮತ್ತು ರೆಫರೆನ್ಸ್ ಕೋಶದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
AICCಯ ಮಧ್ಯಂತರ ಖಜಾಂಚಿಯಾಗಿ ತಮ್ಮನ್ನು ನೇಮಕ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಬನ್ಸಲ್, ನನ್ನ ಮೇಲೆ ನಂಬಿಕೆಯಿಟ್ಟು ಅಧಿಕಾರ ನೀಡಿದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ ಧನ್ಯವಾದಗಳು. ಈ ಹುದ್ದೆಯಲ್ಲಿ ನಾನು ಸಂಪೂರ್ಣ ಜವಾಬ್ದಾರಿಯೊಂದಿಗೆ ಕಾರ್ಯ ನಿರ್ವಹಿಸುತ್ತೇನೆ ಎಂದಿದ್ದಾರೆ. ದಿವಂಗತ ಅಹ್ಮದ್ ಪಟೇಲ್ 2018ರಿಂದಲೂ AICC ಖಜಾಂಚಿಯಾಗಿದ್ದರು. ಕೊರೊನಾ ಸೋಂಕಿಗೆ ತುತ್ತಾಗಿ ಹರಿಯಾಣದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನವೆಂಬರ್ 25ರಂದು ಬಹುಅಂಗಾಂಗ ವೈಫಲ್ಯದಿಂದ ನಿಧನರಾದರು.