Aero India 2023: ಫೆ 13ರಿಂದ ಬೆಂಗಳೂರು ಏರ್​ ಶೋ; ಈ ಬಾರಿಯ ವೈಶಿಷ್ಟ್ಯ, ಟಿಕೆಟ್ ದರ, ಟಿಕೆಟ್ ಖರೀದಿ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ

| Updated By: Digi Tech Desk

Updated on: Jan 25, 2023 | 1:34 PM

Bangalore Air Show Ticket Booking: ವಾಯುನೆಲೆಯ ಪ್ರವೇಶ ದ್ವಾರದ ಬಳಿ ಸಾಕಷ್ಟು ಭದ್ರತಾ ತಪಾಸಣೆಗಳು ಇರುತ್ತವೆ. ಇದನ್ನು ಗಮನದಲ್ಲಿರಿಸಿಕೊಂಡೇ ಏರ್ ಶೋ ಟಿಕೆಟ್ ಬುಕ್ ಮಾಡಿ.

Aero India 2023: ಫೆ 13ರಿಂದ ಬೆಂಗಳೂರು ಏರ್​ ಶೋ; ಈ ಬಾರಿಯ ವೈಶಿಷ್ಟ್ಯ, ಟಿಕೆಟ್ ದರ, ಟಿಕೆಟ್ ಖರೀದಿ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ
ಏರ್​ ಶೋದಲ್ಲಿ ಕಸರತ್ತು ತೋರುತ್ತಿರುವ ಹೆಲಿಕಾಪ್ಟರ್
Follow us on

ದೆಹಲಿ / ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಫೆ 13ರಿಂದ ನಡೆಯಲಿರುವ ‘ಏರೋ ಇಂಡಿಯಾ ಏರ್​ಶೋ’ ವೈಮಾನಿಕ ಪ್ರದರ್ಶನದ (Air Show) 14ನೇ ಆವೃತ್ತಿಗಾಗಿ 731 ಎಕ್ಸಿಬಿಟರ್​ಗಳು ನೋಂದಣಿ ಮಾಡಿಕೊಂಡಿದ್ದಾರೆ. ಏರ್​ ಶೋ ಫೆ 17ರವರೆಗೆ ನಡೆಯಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿದರು. ಏರ್​ ಶೋ ಸಿದ್ಧತೆಯನ್ನು ಪರಿಶೀಲಿಸಿ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ರಾಜನಾಥ್ ಸಿಂಗ್ ಮಾತನಾಡಿದರು. ‘ಕೋಟ್ಯಂತರ ಅವಕಾಶಗಳ ರನ್​ವೇ’ (The runway to a billion opportunities) ಘೋಷವಾಕ್ಯದೊಂದಿಗೆ ಏರ್​ಶೋ ನಡೆಯಲಿದೆ. ‘ಮಂಥನ್​’ ಹೆಸರಿನ ಸ್ಟಾರ್ಟ್​ಅಪ್​ ಮತ್ತು ‘ಬಂಧನ್’ ಕಾರ್ಯಕ್ರಮದಲ್ಲಿ ಹಲವು ಒಡಂಬಡಿಕೆಗಳಿಗೆ ಉದ್ಯಮಿಗಳು ಸಹಿಹಾಕಲಿದ್ದಾರೆ. ವಿವಿಧ ದೇಶಗಳ ರಕ್ಷಣಾ ಸಚಿವರೊಂದಿಗೆ ಸಂವಾದ ನಡೆಯಲಿದೆ. ‘ರಕ್ಷಣಾ ವಿದ್ಯಮಾನಗಳಲ್ಲಿ ಸಹಯೋಗದಿಂದ ಸಮೃದ್ಧಿಯ ವಿನಿಮಯ’ (shared prosperity through enhanced engagement in defence – SPEED) ಎನ್ನುವುದು ಈ ಬಾರಿಯ ಸಂವಾದದ ಘೋಷವಾಕ್ಯವಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವಿವಿಧ ಕಂಪನಿಗಳ ಸಿಇಒಗಳೊಂದಿಗೆ ವಿಶೇಷ ಸಭೆಯೂ ನಡೆಯಲಿದೆ.

ಯುದ್ಧೋಪಕರಣಗಳನ್ನು ಆಮದು ಮಾಡಿಕೊಳ್ಳುವ ಉದ್ದೇಶದಿಂದ ಮಾತುಕತೆ ನಡೆಸುವುದಕ್ಕಷ್ಟೇ ಸಂವಾದಗಳು ಸೀಮಿತವಾಗುವುದಿಲ್ಲ. ಯುದ್ಧೋಪಕರಣಗಳ ರಫ್ತು ಮತ್ತು ಸಹಯೋಗಗಳ ಬಗ್ಗೆ ಹೆಚ್ಚು ಗಮನ ಹರಿಸಲಾಗುವುದು ಎಂದು ರಕ್ಷಣಾ ಇಲಾಖೆಯು ಹೇಳಿಕೆಯಲ್ಲಿ ತಿಳಿಸಿದೆ. ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಏರ್​ ಶೋ ಸಿದ್ಧತೆಗಳನ್ನು ಪರಾಮರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಯಾವುದೇ ಲೋಪಗಳು ಆಗದಂತೆ ಕ್ರಮವಹಿಸಬೇಕು ಎಂದು ಸಚಿವರು ಸಂಬಂಧಿಸಿದ ಎಲ್ಲರಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದರು. ‘ಏರ್​ಶೋ ಎನ್ನುವುದು ಕೇವಲ ಒಂದು ಕಾರ್ಯಕ್ರಮ ಅಷ್ಟೇ ಆಗಿರುವುದಿಲ್ಲ. ಇದು ರಕ್ಷಣೆ ಮತ್ತು ವೈಮಾನಿಕ ಕ್ಷೇತ್ರದಲ್ಲಿ ಭಾರತದ ಸತತ ಬೆಳವಣಿಗೆಯ ದ್ಯೋತಕವಾಗಿದೆ. ಖಾಸಗಿ ಸಹಭಾಗಿತ್ವವು ವೈಮಾನಿಕ ಕ್ಷೇತ್ರದ ಬೆಳವಣಿಗೆಯ ವೇಗವರ್ಧಕವಾಗಲಿದೆ’ ಎಂದು ಅವರು ತಿಳಿಸಿದರು.

ಟಿಕೆಟ್ ದರಗಳೆಷ್ಟು?

ಸಾರ್ವಜನಿಕರಿಗೂ ಏರ್​ ಶೋ ಕಣ್ತುಂಬಿಕೊಳ್ಳಲು ಅವಕಾಶವಿದೆ. ಅಧಿಕೃತ ವೆಬ್​ಸೈಟ್​ ಮೂಲಕ ಟಿಕೆಟ್​ಗಳನ್ನು ಖರೀದಿಸಬಹುದಾಗಿದೆ. ಬ್ಯುಸಿನೆಸ್ ಟಿಕೆಟ್​ಗೆ ₹ 5,000 ಶುಲ್ಕ ನಿಗದಿಪಡಿಸಲಾಗಿದೆ. ವಿದೇಶೀಯರಿಗೆ 150 ಡಾಲರ್ ಶುಲ್ಕವಿದೆ. ವಿಮಾನಗಳು ಹಾಗೂ ಎಕ್ಸಿಬಿಷನ್ ನೋಡಲು ಅವಕಾಶ ಕಲ್ಪಿಸುವ ಟಿಕೆಟ್​ಗೆ ₹ 2,500 ಶುಲ್ಕವಿದೆ. ಕೇವಲ ವಿಮಾನಗಳನ್ನು ನೋಡುವ ಸ್ಥಳದ ಪ್ರವೇಶಕ್ಕೆ ₹ 1,000 ಶುಲ್ಕ ನಿಗದಿಪಡಿಸಲಾಗಿದೆ. ಮೊದಲು ಎರಡು ದಿನ ಉದ್ಯಮಕ್ಕೆ ಸಂಬಂಧಿಸಿದವರಿಗೆ (ಬ್ಯುಸಿನೆಸ್) ಮಾತ್ರವೇ ಪ್ರವೇಶ ಇರುತ್ತದೆ. ಕೊನೆಯ ಎರಡು ದಿನ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಟಿಕೆಟ್ ಬುಕ್ ಮಾಡುವುದು ಹೇಗೆ?

ಟಿಕೆಟ್ ಬುಕ್ ಮಾಡಲು http://aeroindia.gov.in/ ವೆಬ್​ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ಟಿಕೆಟ್ಸ್​ ಟ್ಯಾಬ್ ಕ್ಲಿಕ್ ಮಾಡಿ. ಅಗತ್ಯ ಮಾಹಿತಿ ಭರ್ತಿ ಮಾಡಿದ ನಂತರ ನಿಮಗೆ ಬೇಕಿರುವ ಸ್ವರೂಪದ ಟಿಕೆಟ್ ಆಯ್ಕೆ ಮಾಡಿಕೊಳ್ಳಿ. ಪೇಮೆಂಟ್ ಗೇಟ್​ವೇ ಮೂಲಕ ಹಣ ಪಾವತಿಸಿದ ನಂತರ ನಿಮ್ಮ ಟಿಕೆಟ್ ಖಾತ್ರಿಯಾಗುತ್ತದೆ. ವಾಯುನೆಲೆಯ ಪ್ರವೇಶ ದ್ವಾರದ ಬಳಿ ಸಾಕಷ್ಟು ಭದ್ರತಾ ತಪಾಸಣೆಗಳು ಇರುತ್ತವೆ. ಅಲ್ಲಿ ನಿಮ್ಮ ಗುರುತಿನ ಚೀಟಿ ಕೇಳುತ್ತಾರೆ. ಇದಕ್ಕೆ ಸಿದ್ಧರಾಗಿಯೇ ಏರ್ ಶೋ ಟಿಕೆಟ್ ಬುಕ್ ಮಾಡಿ.

ಇದನ್ನೂ ಓದಿ: ಏರ್ ಶೋ ಸಮಯದಲ್ಲಿ ನೀರಿಗಿಳಿದ ವಿಮಾನ; ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ವಿಡಿಯೋ

ಮತ್ತಷ್ಟು ರಾಷ್ಟ್ರೀಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:52 am, Wed, 25 January 23