ವಯನಾಡ್: ಕೇರಳದಲ್ಲಿ ಕೆಲವು ದಿನಗಳ ಹಿಂದಷ್ಟೇ ಭಾರತದ ಮೊದಲ ಮಂಕಿಪಾಕ್ಸ್ (Monkeypox) ಪತ್ತೆಯಾಗಿ ದೇಶಾದ್ಯಂತ ಆತಂಕ ಸೃಷ್ಟಿಸಿತ್ತು. ಅದರ ಬೆನ್ನಲ್ಲೇ ಕೇರಳದ ವಯನಾಡು (Wayanad) ಜಿಲ್ಲೆಯ ಮಾನಂತವಾಡಿಯಲ್ಲಿ ಎರಡು ಫಾರ್ಮ್ಗಳಲ್ಲಿ ಆಫ್ರಿಕನ್ ಹಂದಿ ಜ್ವರ (African Swine Fever) ಪತ್ತೆಯಾಗಿದೆ. ಭೋಪಾಲ್‌ನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ-ಸೆಕ್ಯುರಿಟಿ ಅನಿಮಲ್ ಡಿಸೀಸ್‌ನಲ್ಲಿ ಮಾದರಿಗಳನ್ನು ಪರೀಕ್ಷಿಸಿದ ನಂತರ ವಯನಾಡ್ ಜಿಲ್ಲೆಯ ಎರಡು ಫಾರ್ಮ್‌ಗಳಲ್ಲಿರುವ ಹಂದಿಗಳಲ್ಲಿ ಈ ಹೊಸ ರೋಗ ದೃಢಪಟ್ಟಿದೆ.
ಕೇರಳದ ವಯನಾಡ್ ಜಿಲ್ಲೆಯ ಮಾನಂತವಾಡಿಯಲ್ಲಿನ ಎರಡು ಫಾರ್ಮ್ಗಳಲ್ಲಿ ಆಫ್ರಿಕನ್ ಹಂದಿ ಜ್ವರ ವರದಿಯಾಗಿದೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ. ಇಲ್ಲಿನ ಫಾರ್ಮ್ ಒಂದರಲ್ಲಿ ಹಂದಿಗಳು ಸಾಮೂಹಿಕವಾಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಹಂದಿಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಆಗ ಅವುಗಳಿಗೆ ಆಫ್ರಿಕನ್ ಹಂದಿ ಜ್ವರ ತಗುಲಿರುವುದು ಖಚಿತವಾಗಿದೆ ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: Nipah Virus: ಕೇರಳದಲ್ಲಿ ಮತ್ತೆ ನಿಫಾ ವೈರಸ್ ಆತಂಕ, ಕೊರೊನಾದಷ್ಟೇ ಅಪಾಯಕಾರಿಯೇ?
”ಹಂದಿಗಳ ಮಾದರಿಗಳ ಪರೀಕ್ಷಾ ಫಲಿತಾಂಶದಲ್ಲಿ ಅವುಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ, 2ನೇ ಫಾರಂನ 300 ಹಂದಿಗಳನ್ನು ಕೊಲ್ಲಲು ನಿರ್ದೇಶನ ನೀಡಲಾಗಿದೆ” ಎಂದು ಅಧಿಕಾರಿ ತಿಳಿಸಿದ್ದಾರೆ. ಈ ರೋಗ ಹರಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ಬಿಹಾರ ಮತ್ತು ಕೆಲವು ಈಶಾನ್ಯ ರಾಜ್ಯಗಳಲ್ಲಿ ಆಫ್ರಿಕನ್ ಹಂದಿ ಜ್ವರ ವರದಿಯಾಗಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿತ್ತು. ಅದಾದ ನಂತರ ಕೇರಳದಲ್ಲಿ ಈ ತಿಂಗಳ ಆರಂಭದಲ್ಲಿ ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಲಾಗಿತ್ತು. ಆಫ್ರಿಕನ್ ಹಂದಿ ಜ್ವರವು ದೇಶೀಯ ಹಂದಿಗಳ ಮೇಲೆ ಪರಿಣಾಮ ಬೀರುವ ಅತ್ಯಂತ ಸಾಂಕ್ರಾಮಿಕ ಮತ್ತು ಮಾರಣಾಂತಿಕ ವೈರಲ್ ಕಾಯಿಲೆಯಾಗಿದೆ.
Published On - 11:16 am, Fri, 22 July 22