ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಸೂಚನೆಯಂತೆ ರೈಲ್ವೆ ಇಲಾಖೆ ಆರಂಭಿಸಿರುವ ‘ವಂದೇ ಭಾರತ್’ ಎಕ್ಸ್ಪ್ರೆಸ್ (Vandre Bharat) ರೈಲುಗಳು ಭಾರತದಾದ್ಯಂತ ಹಲವು ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಬಹುತೇಕ ಮಾರ್ಗಗಳಲ್ಲಿ ‘ವಂದೇ ಭಾರತ್’ ರೈಲುಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಬಹುತೇಕ ಸೀಟುಗಳು ಭರ್ತಿಯಾಗಿರುತ್ತವೆ. ‘ವಂದೇ ಭಾರತ್’ ಯಶಸ್ಸಿನ ಬೆನ್ನಿಗೇ ರೈಲ್ವೆ ಇಲಾಖೆಗೆ (Indian Railways) ಪ್ರಧಾನಿ ಪ್ರಧಾನಿ ಮತ್ತೊಂದು ಮಹತ್ವದ ಸೂಚನೆ ನೀಡಿದ್ದಾರೆ. ಈ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೈದರಾಬಾದ್ನಲ್ಲಿ ಮಾಹಿತಿ ನೀಡಿದ್ದಾರೆ. ‘ಎರಡು ಪ್ರಮುಖ ನಗರಗಳನ್ನು ಬೆಸೆಯುವ ‘ವಂದೇ ಮೆಟ್ರೊ’ ರೈಲುಗಳನ್ನು ಆರಂಭಿಸುವಂತೆ ಮೋದಿ ಸೂಚನೆ ನೀಡಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಆಹಾರ ಧಾನ್ಯ, ರಸಗೊಬ್ಬರ ಮತ್ತು ಇತರ ಅತ್ಯಗತ್ಯ ವಸ್ತುಗಳ ಸಾಗಾಟಕ್ಕೆಂದು ಭಾರತೀಯ ರೈಲ್ವೆಯು ₹ 59,000 ಕೋಟಿಗಳಷ್ಟು ಸಹಾಯಧನ ಒದಗಿಸಿದೆ. ಇದು ಎಲ್ಲ ಪ್ರಯಾಣಿಕರಿಗೆ ಶೇ 55ರಷ್ಟು ರಿಯಾಯ್ತಿ ಕೊಟ್ಟಂತೆ ಆಗುತ್ತದೆ’ ಎಂದು ತಿಳಿಸಿದರು. ‘ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷ ನಮಗೆ ಟಾರ್ಗೆಟ್ ಕೊಟ್ಟಿದ್ದಾರೆ. ವಂದೇ ಭಾರತ್ ರೈಲುಗಳ ಯಶಸ್ಸಿನ ನಂತರ ಭಾರತದಲ್ಲಿ ವಿಶ್ವಮಟ್ಟದ ಪ್ರಾದೇಶಿಕ ರೈಲುಗಳನ್ನು ಆರಂಭಿಸಲು ಹೇಳಿದ್ದಾರೆ. ಅವನ್ನು ವಂದೇ ಮೆಟ್ರೋ ಹೆಸರಿನಡಿ ಪರಿಚಯಿಸಲಾಗುವುದು’ ಎಂದು ಹೇಳಿದರು.
ಮುಂದಿನ 12ರಿಂದ 16 ತಿಂಗಳಲ್ಲಿ ಪ್ರಾಯೋಗಿಕ ಮಾದರಿಗಳನ್ನು ಪರಿಚಯಿಸಲಾಗುವುದು. ಇಂಥ ರೈಲುಗಳನ್ನು ಪ್ರಾಯೋಗಿಕವಾಗಿ ಕನಿಷ್ಠ 1 ವರ್ಷ ಓಡಿಸಲಾಗುವುದು. ನಂತರ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ‘ವಂದೇ ಮೆಟ್ರೊ’ ರೈಲುಗಳ ಬಗ್ಗೆ ಮತ್ತಷ್ಟು ವಿವರ ನೀಡಿದ ಅವರು, ಈ ರೈಲುಗಳು ಗರಿಷ್ಠ 100 ಕಿಮೀ ಅಂತರದ ಒಳಗಿರುವ ಎರಡು ಪ್ರಮುಖ ನಗರಗಳ ನಡುವೆ ಅತ್ಯಂತ ವೇಗವಾಗಿ ಸಂಚರಿಸಲಿವೆ. ಯೂರೋಪ್ನಲ್ಲಿ ಇಂಥ ರೈಲುಗಳನ್ನು ‘ರೀಜನಲ್ ಟ್ರಾನ್ಸ್’ (Regional Trans) ಎನ್ನುತ್ತಾರೆ ಎಂದರು.
‘ವಂದೇ ಭಾರತ್’ ರೈಲುಗಳ ಯಶಸ್ಸಿನ ಕುರಿತು ಪ್ರಸ್ತಾಪಿಸಿದ ಅವರು, ಕಳೆದ ಎರಡೂವರೆ ವರ್ಷಗಳಲ್ಲಿ 12 ಲಕ್ಷ ಕಿಮೀಗಳಷ್ಟು ಅಂತರವನ್ನು ವಂದೇ ಭಾರತ್ ರೈಲುಗಳು ಕ್ರಮಿಸಿವೆ. ಸರಾಸರಿ 8 ದಿನಕ್ಕೊಮ್ಮೆ ಹೊಸ ರೈಲುಗಳನ್ನು ಪರಿಚಯಿಸಲಾಗಿದೆ’ ಎಂದು ತಿಳಿಸಿದರು. ಸಿಕಂದ್ರಾಬಾದ್-ವಿಶಾಖಪಟ್ಟಣಂ ಮಾರ್ಗದಲ್ಲಿ ಸಂಚರಿಸುತ್ತಿರುವ ವಂದೇ ಭಾರತ್ ರೈಲಿಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪ್ರತಿದಿನ ಎಲ್ಲ ಸೀಟ್ಗಳು ಭರ್ತಿಯಾಗುತ್ತಿವೆ. ತೆಲಂಗಾಣದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ವಂದೇ ಭಾರತ್ ರೈಲುಗಳನ್ನು ಪರಿಚಯಿಸಲಾಗುವುದು ಎಂದು ತಿಳಿಸಿದರು.
ರೈಲ್ವೆ ಇಲಾಖೆಯನ್ನು ಖಾಸಗೀಕರಣಗೊಳಿಸಲಾಗುತ್ತದೆ ಎಂಬ ವರದಿಗಳನ್ನು ಆಧಾರ ರಹಿತ ಎಂದು ಅವರು ತಳ್ಳಿಹಾಕಿದರು. ‘ರೈಲ್ವೆ ಇಲಾಖೆಯನ್ನು ಖಾಸಗೀಕರಣಗೊಳಿಸುವ ಯಾವುದೇ ಪ್ರಸ್ತಾವ ನಮ್ಮೆದುರು ಇಲ್ಲ’ ಎಂದು ಸ್ಪಷ್ಟಪಡಿಸಿದ ಅವರು, ‘ಹೈದರಾಬಾದ್ ನಗರವನ್ನು ವಿಶ್ವಮಟ್ಟದ ನಗರವಾಗಿ ಅಭಿವೃದ್ಧಿಪಡಿಸುತ್ತೇವೆ. 6ಜಿ ಸಾಮರ್ಥ್ಯದ ಹಬ್ ಆಗಿ ರೂಪಿಸುವುದಷ್ಟೇ ಅಲ್ಲದೇ, ಅತ್ಯಾಧುನಿಕ ರೈಲ್ವೆ ತಂತ್ರಜ್ಞಾನವನ್ನು ಇಲ್ಲಿ ಪರಿಚಯಿಸಲಾಗುವುದು. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI), ಮಷೀನ್ ಲರ್ನಿಂಗ್ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (IoT) ಬಳಸುವ ಮೂಲಕ ಹೈದರಾಬಾದ್ ನಗರವನ್ನು ಅತ್ಯಾಧುನಿಕ ರೀತಿಯಲ್ಲಿ ಬೆಳೆಸಲಾಗುವುದು’ ಎಂದು ಹೇಳಿದರು. ‘ಉತ್ಕೃಷ್ಟತಾ ಕೇಂದ್ರವನ್ನು ಹೈದರಾಬಾದ್ ನಗರದಲ್ಲಿಯೇ ಆರಂಭಿಸಲಾಗುವುದು. ಭವಿಷ್ಯದ ತಂತ್ರಜ್ಞಾನಗಳು ಇಲ್ಲಿಯೇ ವಿಕಸನಗೊಳ್ಳಲಿವೆ’ ಎಂದು ಅವರು ಭರವಸೆ ನೀಡಿದರು.
ಇತ್ತೀಚೆಗೆ ಮಂಡಿಸಿದ ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಅವರು, ‘ಇದು ಭಾರತದಲ್ಲಿ ಮಂಡನೆಯಾದ ಅತ್ಯಂತ ಮುಖ್ಯ ಬಜೆಟ್. ಇಡೀ ಜಗತ್ತು ಇಂದು ಕಷ್ಟ ಎದುರಿಸುತ್ತಿದೆ. ಭವಿಷ್ಯ ಅಸ್ಪಷ್ಟವಾಗಿದೆ. ಇಂಥ ಸಂದಿಗ್ಧ ಸಂದರ್ಭದಲ್ಲಿ ಭಾರತದಲ್ಲಿ ಆಶಾದಾಯಕ ಬಜೆಟ್ ಮಂಡನೆಯಾಗಿದೆ ಎಂದರು. ಈ ಬಾರಿಯ ಬಜೆಟ್ನಲ್ಲಿ ತೆಲಂಗಾಣದ ರೈಲ್ವೆ ಯೋಜನೆಗಳಿಗೆ ಸಾಕಷ್ಟು ಅನುದಾನ ಒದಗಿಸಲಾಗಿದೆ. ರಾಜ್ಯ ಸರ್ಕಾರವು ಸಹಕರಿಸಿದರೆ ಎಲ್ಲ ಯೋಜನೆಗಳನ್ನು ಜಾರಿಗೊಳಿಸಬಹುದು. ಮತ್ತಷ್ಟು ಅನುದಾನವೂ ಸಿಗಬಹುದು ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: Vande Bharat Express: ಬೆಂಗಳೂರಿಗೆ ಶೀಘ್ರ ಮತ್ತೊಂದು ವಂದೇ ಭಾರತ್ ರೈಲು: ಬೆಂಗಳೂರಿನಿಂದ ಹೈದರಾಬಾದ್ಗೆ ಸಂಚಾರ
ರೈಲ್ವೆಗೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:45 pm, Sun, 5 February 23