ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಕೇರಳದ ಹಿರಿಯ ನಾಯಕ ಪಿ.ಸಿ.ಚಾಕೊ ಎನ್ಸಿಪಿಗೆ ಸೇರಿದ್ದಾರೆ. ಕಾಂಗ್ರೆಸ್ ನಂತೆಯೇ ಇರುವ ಎನ್ಸಿಪಿ ಪಕ್ಷಕ್ಕೆ ನಾನು ಸೇರುತ್ತೇನೆ. ಬಿಜೆಪಿ, ಕಮ್ಯೂನಿಸ್ಟ್ ಪಕ್ಷಕ್ಕೆ ಸೇರಲು ನನಗೆ ಇಷ್ಟವಿಲ್ಲ ಎಂದು ಚಾಕೊ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಳು ಭಿನ್ನಾಭಿಪ್ರಾಯಗಳನ್ನು ಹೊಂದಿದೆ. ಕೇರಳದಲ್ಲಿ ಕಾಂಗ್ರೆಸ್ ಪಕ್ಷವೆಂಬುದು ಇಲ್ಲ. ಉಮ್ಮನ್ ಚಾಂಡಿ ಮತ್ತು ರಮೇಶ್ ಚೆನ್ನಿತ್ತಲ ಅವರ ನೇತೃತ್ವದಲ್ಲಿರುವ ಗುಂಪುಗಳಷ್ಟೇ ಅಲ್ಲಿರುವುದು ಎಂದು ಚಾಕೊ ಹೇಳಿದ್ದರು. ಕೆ.ಕರಣಾಕರನ್ ಅವರ ಕಾಲದಲ್ಲಿಯೂ ಗುಂಪುಗಳಿದ್ದರೂ ಈಗಿನಂತೆ ಇರಲಿಲ್ಲ ಎಂದಿದ್ದಾರೆ ಚಾಕೊ.
ಗುಂಪು ಆಧರಿಸಿ ಸೀಟು ಹಂಚಿಕೆ ವಿಷಯದಲ್ಲಿ ತನಗೆ ಅಸಮಾಧಾನವಿದೆ ಎಂದು ಬಹಿರಂಗವಾಗಿಯೇ ಪಿ.ಸಿ.ಚಾಕೊ ಹೇಳಿಕೊಂಡಿದ್ದರು. ಮಾರ್ಚ್ 10ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟ ನಂತರ ಮಾತನಾಡಿದ್ದ ಅವರು, ಕೇರಳದಲ್ಲಿ ನಿರ್ಣಾಯಕವಾದ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಧಿಕಾರಕ್ಕೇರಬೇಕು ಎಂದು ಜನರು ಬಯಸುತ್ತಿದ್ದಾರೆ. ಆದರೆ ಕಾಂಗ್ರೆಸ್ ನೇತಾರರ ನಡುವೆ ಗುಂಪುಗಾರಿಕೆ ನಡೆಯುತ್ತಿದೆ. ಈ ಗುಂಪುಗಾರಿಕೆ ನಿಲ್ಲಬೇಕು ಎಂದು ನಾನು ಹೈಕಮಾಂಡ್ ಜತೆ ವಾಗ್ವಾದ ಮಾಡಿದ್ದೇನೆ. ಆದರೆ ಹೈಕಮಾಂಡ್ ಕೂಡಾ ಈ ಎರಡು ಗುಂಪುಗಳು ಮುಂದಿರಿಸಿದ ಪ್ರಸ್ತಾವಗಳನ್ನೇ ಸ್ವೀಕರಿಸಿದೆ ಎಂದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೆಸರು ಉಲ್ಲೇಖಿಸದೆಯೇ ಆರೋಪಿಸಿದ್ದರು.
ಉಮ್ಮನ್ ಚಾಂಡಿ, ರಮೇಶ್ ಚೆನ್ನಿತ್ತಲ ಮತ್ತು ಅವರಿಗೆ ಬೆಂಬಲ ನೀಡುವ ಗುಂಪಿನ ನಾಯಕರ ಇಷ್ಟಾನುಸಾರ ಸೀಟು ಹಂಚಿಕೆ ನಡೆದಿದೆ. ಈ ಎರಡೂ ಗುಂಪುಗಳನ್ನು ಜತೆಯಾಗಿ ಕರೆದೊಯ್ಯುವ ಕೆಲಸವನ್ನಷ್ಟೇ ಕೆಪಿಸಿಸಿ ಮತ್ತು ಹೈಕಮಾಂಡ್ ಮಾಡುತ್ತಿರುವುದು. ರಾಷ್ಟ್ರೀಯ ಮಟ್ಟದಲ್ಲಿಯೂ ಕಾಂಗ್ರೆಸ್ ಬೆಳೆಯುವುದಿಲ್ಲ ಎಂದು ಪಿ.ಸಿ.ಚಾಕೊ ಹೇಳಿದ್ದಾರೆ. 74ರ ಹರೆಯದ ಚಾಕೊ ಕೇರಳದ ತ್ರಿಶ್ಶೂರ್ ಚುನಾವಣಾ ಕ್ಷೇತ್ರದ ಮಾಜಿ ಸಂಸದರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ವಕ್ತಾರರಾಗಿ ಇವರು ಕಾರ್ಯ ನಿರ್ವಹಿಸಿದ್ದರು.
ಕಾಂಗ್ರೆಸ್ ಪಕ್ಷಕ್ಕೆ ಹೊಡೆತ
ಚಾಕೊ ಅವರು ಪಕ್ಷ ತೊರೆದಿರುವುದು ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ನೀಡಿದೆ. ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯೇ ಕೇರಳದಲ್ಲಿ ಸ್ಟಾರ್ ಪ್ರಚಾರಕರಾಗಿರುವಾಗ ಕಾಂಗ್ರೆಸ್ ಪಕ್ಷದಲ್ಲಿನ ಹಿರಿಯ ನಾಯಕ ಹೊರನಡೆದಿರುವುದು ಪಕ್ಷಕ್ಕೆ ಮುಜುಗರವುಂಟು ಮಾಡಿದೆ. ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ನಾಯಕರ ಪೈಕಿ ಚಾಕೊ ಕೂಡಾ ಒಬ್ಬರಾಗಿದ್ದಾರೆ.
ಯೆಚೂರಿ ಜತೆ ಸುದ್ದಿಗೋಷ್ಠಿ
ಕಾಂಗ್ರೆಸ್ ಪಕ್ಷ ತೊರೆದು ಎನ್ಸಿಪಿ ಪಕ್ಷ ಸೇರಿರುವ ಚಾಕೊ ಎಲ್ಡಿಎಫ್ನ ಅಂಗವಾಗಿ ಕೆಲಸ ಮಾಡಲಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಜತೆ ಮಾತುಕತೆ ನಡೆಸಿದ ನಂತರ ಇಬ್ಬರೂ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಮಂಗಳವಾರ ಎನ್ಸಿಪಿ ರಾಷ್ಟ್ರೀಯ ಅಧ್ಯಕ್ಷ ಶರತ್ ಪವಾರ್ ಜತೆ ಮಾತುಕತೆ ನಡೆಸಿದ್ದ ಚಾಕೊ ಸಂಜೆ ಯೆಚೂರಿ ಅವರನ್ನು ಭೇಟಿ ಮಾಡಿದ್ದರು.
ಚೆಂಙನ್ನೂರ್ನಲ್ಲಿ ಬಿಜೆಪಿ ಮತ್ತು ಸಿಪಿಎಂ ಡೀಲ್ ಮಾಡಿಕೊಂಡಿದೆ ಎಂದು ಆರ್ ಎಸ್ಎಸ್ ನಾಯಕ ಆರ್. ಬಾಲಶಂಕರ್ ಅವರ ಹೇಳಿಕೆ ಬಗ್ಗೆ ಮಾಧ್ಯಮದವರು ಯೆಚೂರಿ ಅವರಲ್ಲಿ ಕೇಳಿದಾಗ,ಬಿಜೆಪಿ ಜತೆ ಯಾರು ಡೀಲ್ ಮಾಡುತ್ತಿದ್ದಾರೆ , ಯಾರು ಬಿಜೆಪಿಗೆ ಹೋಗುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಬಿಜೆಪಿಗೆ ಸೇರಿದ ಕಾಂಗ್ರೆಸ್ ನಾಯಕರನ ಬಗ್ಗೆ ಎಣಿಕೆ ಮಾಡಿ ನೋಡಿ. ಇಲ್ಲಿ ಏನು ನಡೆಯುತ್ತಿದೆ ಎಂಬುದು ಜನರಿಗೆ ತಿಳಿದಿದೆ ಎಂದು ಉತ್ತರಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ತನ್ನನ್ನು ಕಡೆಗಣಿಸಿದೆ ಎಂದು ಆರೋಪಿಸಿ ಪಕ್ಷ ತೊರೆದ ಕೇರಳದ ಹಿರಿಯ ನಾಯಕ ಪಿ.ಸಿ.ಚಾಕೊ