ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ; ಇಂದು ಸರ್ವಪಕ್ಷಗಳ ಸಭೆ ಕರೆದ ಸಚಿವ ಪ್ರಲ್ಹಾದ್ ಜೋಶಿ, ಪ್ರಧಾನಿ ಮೋದಿ ಭಾಗಿ
Monsoon Session Of Parliament: ದೇಶಾದ್ಯಂತ ಕೊವಿಡ್ 19 ಭೀಕರತೆ ಸೃಷ್ಟಿಸಿದೆ. ಅನೇಕ ನಾಗರಿಕರು ಸಂಕಷ್ಟಕ್ಕೀಡಾಗಿದ್ದಾರೆ. ಈ ಹೊತ್ತಲ್ಲಿ ಸದನದಲ್ಲಿ ಚರ್ಚೆಯಾಗುವ ವಿಷಯಗಳು ಜನರಿಗೆ ಸಂಬಂಧಪಟ್ಟದ್ದಾಗಿರಬೇಕು ಎಂದು ರಾಜ್ಯಸಭಾ ಅಧ್ಯಕ್ಷ ವೆಂಕಯ್ಯನಾಯ್ಡು ಹೇಳಿದ್ದಾರೆ.
ನವದೆಹಲಿ: ನಾಳೆಯಿಂದ ಸಂಸತ್ತಿನ ಮುಂಗಾರು ಅಧಿವೇಶನ (Monsoon Session Of Parliament) ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಯವರು ಸರ್ವಪಕ್ಷ (All Party Meeting) ಗಳ ಸಭೆ ಕರೆದಿದ್ದಾರೆ. ಮುಂಗಾರು ಅಧಿವೇಶನವನ್ನು ಸುಗಮವಾಗಿ ನಡೆಸಲು ಪ್ರತಿಪಕ್ಷಗಳ ಸಹಕಾರ ಕೋರಲು, ಅಭಿವೃದ್ಧಿ ಕಾರ್ಯಗಳು, ಜನರ ಅಗತ್ಯಗಳ ಬಗ್ಗೆ ಚರ್ಚೆ ನಡೆಸಲು ಪ್ರತಿಪಕ್ಷಗಳು ಬೆಂಬಲ ನೀಡಬೇಕು ಎಂಬ ವಿಚಾರದ ಬಗ್ಗೆ ಚರ್ಚಿಸಲು ಪ್ರಲ್ಹಾದ್ ಜೋಶಿ ಇಂದು ಎಲ್ಲ ಪಕ್ಷಗಳ ಸಭೆ ಕರೆದಿದ್ದಾರೆ ಎನ್ನಲಾಗಿದೆ. ಹಾಗೇ ಈ ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಯವರೂ ಭಾಗವಹಿಸಲಿದ್ದಾರೆ.
ಪ್ರಸ್ತುತ ಸಂಸತ್ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರ 30 ಮಸೂದೆಗಳನ್ನು ಮಂಡಿಸಲಿದೆ..ಮತ್ತು ಆ ಎಲ್ಲ ವಿಚಾರಗಳ ಬಗ್ಗೆಯೂ ವಿಸ್ತೃತ ಚರ್ಚೆಗೆ ಸಿದ್ಧವಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇನ್ನೊಂದೆಡೆ ಪ್ರತಿಪಕ್ಷಗಳೂ ಕೇಂದ್ರ ಸರ್ಕಾರವನ್ನು ಸಿಲುಕಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿವೆ. ಅದರಲ್ಲಿ ಮುಖ್ಯವಾಗಿ ಕೊವಿಡ್ 19 ಎರಡನೇ ಅಲೆ ಸಂದರ್ಭದಲ್ಲಿ ಉಂಟಾದ ಅವ್ಯವಸ್ಥೆಗಳು, ರೈತರ ನಿಲ್ಲದ ಹೋರಾಟಗಳನ್ನು ಉಲ್ಲೇಖಿಸಲಿವೆ ಎನ್ನಲಾಗಿದೆ. ಒಟ್ಟಿನಲ್ಲಿ ನಾಳೆ ಪ್ರಾರಂಭವಾಗಲಿರುವ ಅಧಿವೇಶನಕ್ಕೆ ಎಲ್ಲ ಪಕ್ಷಗಳೂ ಸಜ್ಜುಗೊಂಡಿವೆ. ಹಾಗೇ, ಬಿಜೆಪಿ ಸಂಸದೀಯ ಪಕ್ಷದ ಮತ್ತು ಎನ್ಡಿಎ ಸಂಸದೀಯ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ಕೂಡ ಇಂದೇ ನಡೆಯಲಿದೆ.
ಚರ್ಚೆಗಳು ನಾಗರಿಕರಿಗೆ ಸಂಬಂಧಪಟ್ಟದ್ದಾಗಿರಲಿ ದೇಶಾದ್ಯಂತ ಕೊವಿಡ್ 19 ಭೀಕರತೆ ಸೃಷ್ಟಿಸಿದೆ. ಅನೇಕ ನಾಗರಿಕರು ಸಂಕಷ್ಟಕ್ಕೀಡಾಗಿದ್ದಾರೆ. ಈ ಹೊತ್ತಲ್ಲಿ ಸದನದಲ್ಲಿ ಚರ್ಚೆಯಾಗುವ ವಿಷಯಗಳು ಜನರಿಗೆ ಸಂಬಂಧಪಟ್ಟದ್ದಾಗಿರಬೇಕು. ನಾಗರಿಕರ ಸಮಸ್ಯೆಗಳನ್ನು ಬಗೆಹರಿಸುವ ದೃಷ್ಟಿಯಿಂದ ವಿಸ್ತೃತ ಚರ್ಚೆಗಳಾಗಬೇಕು ಎಂದು ಉಪರಾಷ್ಟ್ರಪತಿ ಮತ್ತು ರಾಜ್ಯಸಭೆ ಅಧ್ಯಕ್ಷ ಎಂ.ವೆಂಕಯ್ಯನಾಯ್ಡು ಸಭೆಯಲ್ಲಿ ಹೇಳಿದ್ದಾರೆ.
ಲೋಕಸಭೆ ಮತ್ತು ರಾಜ್ಯಸಭೆ ಅಧಿವೇಶನಗಳು ನಾಳೆಯಿಂದ (ಜುಲೈ 19) ಆಗಸ್ಟ್ 13ರವರೆಗೆ ನಡೆಯಲಿದ್ದು, ಶೂನ್ಯವೇಳೆ, ಪ್ರಶ್ನೋತ್ತರ ವೇಳೆಗಳನ್ನೆಲ್ಲ ಸೇರಿಸಿ ಬೆಳಗ್ಗೆ 11ರಿಂದ ಸಂಜೆ 6ಗಂಟೆವರೆಗೆ ನಡೆಯಲಿವೆ. ಇಲ್ಲಿ ಕೊವಿಡ್ 19 ಮುನ್ನೆಚ್ಚರಿಕೆ ಸಂಬಂಧ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಹಾಗೇ, ಸೀಮಿತ ಸಂಖ್ಯೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಮತ್ತು ಮಾಧ್ಯಮದವರಿಗೆ ಅವಕಾಶ ಇದೆ.
ಇದನ್ನೂ ಓದಿ: ಮುಂಬೈನ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಗೋಡೆ ಕುಸಿತ; 15 ಮಂದಿ ಸಾವು, ಎನ್ಡಿಆರ್ಎಫ್ನಿಂದ ರಕ್ಷಣಾ ಕಾರ್ಯಾಚರಣೆ
Ahead Of Monsoon Session Of Parliament All Party Meet Today Called By Minister Pralhad Joshi