ಅಹಮದಾಬಾದ್ ಏರ್ ಇಂಡಿಯಾ ಪತನ ಪ್ರಕರಣ; 2 ವಾರದಲ್ಲಿ ವರದಿ ಸಲ್ಲಿಸುವುದಾಗಿ ಸುಪ್ರೀಂ ಕೋರ್ಟ್ಗೆ ಸರ್ಕಾರ ಮಾಹಿತಿ
ಜೂನ್ 2025ರಲ್ಲಿ ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ಕರಡು ತನಿಖಾ ವರದಿಯನ್ನು ಮುಂದಿನ 2-3 ವಾರಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಇಂದು ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಏರ್ ಇಂಡಿಯಾ ವಿಮಾನ ಅಪಘಾತ ತನಿಖೆಗೆ ಸಂಬಂಧಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮುಂದಿನ 2 ವಾರಗಳಲ್ಲಿ ವಿಚಾರಣೆ ನಡೆಸಲಿದೆ. ತನಿಖೆಯನ್ನು ಪೂರ್ಣಗೊಳಿಸುವಲ್ಲಿನ ವಿಳಂಬದ ಬಗ್ಗೆ ಅರ್ಜಿದಾರರು ಸುಪ್ರೀಂ ಕೋರ್ಟ್ನಲ್ಲಿ ಕಳವಳ ವ್ಯಕ್ತಪಡಿಸಿದ ನಂತರ ಸರ್ಕಾರದಿಂದ ಈ ಭರವಸೆ ಬಂದಿದೆ.

ನವದೆಹಲಿ, ನವೆಂಬರ್ 18: 2015ರ ಜೂನ್ ತಿಂಗಳಲ್ಲಿ ನಡೆದ ಏರ್ ಇಂಡಿಯಾ ವಿಮಾನ ಪತನ ದುರಂತಕ್ಕೆ ಸಂಬಂಧಿಸಿದ ತನಿಖೆಯು ಇದೀಗ ಅಂತಿಮ ಹಂತವನ್ನು ತಲುಪಿದೆ ಎಂದು ಕೇಂದ್ರ ಸರ್ಕಾರವು ಅಧಿಕೃತವಾಗಿ ತಿಳಿಸಿದೆ. ಏರ್ ಇಂಡಿಯಾ ವಿಮಾನ ಪತನದ ತನಿಖೆಯು ಅಂತಿಮ ಹಂತದಲ್ಲಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದ್ದು, ಈ ದುರಂತದ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಉತ್ತರಿಸಲು ಹೆಚ್ಚಿನ ಕಾಲಾವಕಾಶ ನೀಡುವಂತೆ ಸರ್ಕಾರ ಮನವಿ ಮಾಡಿದೆ. “ನಾವು ತನಿಖೆಯ ಅಂತಿಮ ಹಂತದಲ್ಲಿದ್ದೇವೆ” ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಭಾರತದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠಕ್ಕೆ ತಿಳಿಸಿದ್ದಾರೆ. ತನಿಖಾಧಿಕಾರಿಗಳು ಅಂತಾರಾಷ್ಟ್ರೀಯ ಶಿಷ್ಟಾಚಾರಗಳನ್ನು ಪಾಲಿಸಬೇಕಾಗಿರುವುದರಿಂದ ವಿಚಾರಣೆಯನ್ನು 2ರಿಂದ 3 ವಾರಗಳ ಕಾಲ ಮುಂದೂಡುವಂತೆ ಅವರು ನ್ಯಾಯಾಲಯವನ್ನು ಕೋರಿದ್ದಾರೆ.
ಈ ಪ್ರಕರಣದ ವಿಚಾರಣೆಯನ್ನು 2 ವಾರಗಳ ನಂತರ ಕೈಗೆತ್ತಿಕೊಳ್ಳುವುದಾಗಿ ನ್ಯಾಯಪೀಠ ತಿಳಿಸಿತು. ಈ ಪ್ರಕರಣದಲ್ಲಿ ಹಾಜರಾಗಿದ್ದ ವಕೀಲ ಪ್ರಶಾಂತ್ ಭೂಷಣ್ ಅಂತಿಮ ತನಿಖಾ ವರದಿಯನ್ನು ಇನ್ನೂ ಪ್ರಕಟಿಸಲಾಗಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ ಮತ್ತು ಶೀಘ್ರ ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಕಳೆದ ವರ್ಷ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಹಾಗೂ ಸಂಬಂಧಪಟ್ಟ ತಾಂತ್ರಿಕ ತಜ್ಞರ ತಂಡವು ನಡೆಸುತ್ತಿರುವ ತನಿಖೆಯು ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಹಂತದಲ್ಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ. ವಿಮಾನದ ಬ್ಲ್ಯಾಕ್ ಬಾಕ್ಸ್ ಡೇಟಾ, ಕಾಕ್ಪಿಟ್ ವಾಯ್ಸ್ ರೆಕಾರ್ಡರ್ (ಸಿವಿಆರ್), ತಾಂತ್ರಿಕ ವಿಶ್ಲೇಷಣೆ ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಈಗಾಗಲೇ ಪರಿಶೀಲಿಸಲಾಗಿದೆ. ತನಿಖೆಯು ಕೊನೆಯ ಹಂತದಲ್ಲಿರುವುದರಿಂದ, ವಿಮಾನ ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ಒಳಗೊಂಡ ಅಂತಿಮ ತನಿಖಾ ವರದಿಯನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ಎಂಜಿನ್ನಲ್ಲಿ ತಾಂತ್ರಿಕ ದೋಷ: ಜೈಪುರದಲ್ಲಿ ಏರ್ ಇಂಡಿಯಾ ವಿಮಾನ ತುರ್ತು ಲ್ಯಾಂಡಿಂಗ್, ತಪ್ಪಿದ ಭಾರಿ ಅನಾಹುತ
ವಿಮಾನದ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರ ತಂದೆ ಪುಷ್ಕರ್ ರಾಜ್ ಸಭರ್ವಾಲ್ ಈ ದುರಂತದ ಕುರಿತು ಪ್ರತ್ಯೇಕ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯಿಂದ ಈ ಪ್ರಕರಣ ನಡೆಸಲಾಗುತ್ತಿದೆ. 2025ರ ಜೂನ್ 12ರಂದು ಅಹಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು 260 ಮಂದಿ ಸಾವನ್ನಪ್ಪಿದ್ದರು. ವಿಮಾನದಲ್ಲಿದ್ದ 242 ಮಂದಿಯ ಪೈಕಿ 241 ಮಂದಿ ಮೃತಪಟ್ಟಿದ್ದರೆ, ವಿಮಾನ ಪತನಗೊಂಡ ಸ್ಥಳದಲ್ಲಿದ್ದ 19 ಮಂದಿ ಸಹ ಪ್ರಾಣ ಕಳೆದುಕೊಂಡಿದ್ದರು.
2025ರ ಜುಲೈನಲ್ಲಿ ಬಿಡುಗಡೆಯಾದ ಪ್ರಾಥಮಿಕ ತನಿಖಾ ವರದಿಯ ಪ್ರಕಾರ, ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಎಂಜಿನ್ ಇಂಧನ ನಿಯಂತ್ರಣ ಸ್ವಿಚ್ಗಳು “ರನ್” ಸ್ಥಿತಿಯಿಂದ “ಕಟ್ಆಫ್” ಸ್ಥಿತಿಗೆ ಬದಲಾಗಿದ್ದು, ಇದರಿಂದ ಎರಡೂ ಎಂಜಿನ್ಗಳಿಗೆ ಇಂಧನ ಪೂರೈಕೆ ಸ್ಥಗಿತಗೊಂಡಿತ್ತು. ಆದರೆ ಸ್ವಿಚ್ಗಳು ಬದಲಾಗಲು ಕಾರಣವೇನು ಎಂಬುದನ್ನು ವರದಿಯಲ್ಲಿ ವಿವರಿಸಿರಲಿಲ್ಲ. ಇಂಧನ ಪೂರೈಕೆ ಏಕೆ ಸ್ಥಗಿತಗೊಂಡಿತು? ಎಂದು ಒಬ್ಬ ಪೈಲಟ್ ಕೇಳಿರುವುದು ಮತ್ತು ತಾನು ಅದನ್ನು ಮಾಡಿಲ್ಲ ಎಂದು ಇನ್ನೊಬ್ಬ ಪೈಲಟ್ ಉತ್ತರಿಸಿರುವ ಕಾಕ್ಪಿಟ್ ಸಂಭಾಷಣೆಯೂ ವರದಿಯಲ್ಲಿ ದಾಖಲಾಗಿತ್ತು. ಆದರೆ, ಯಾವ ಪೈಲಟ್ ಯಾವ ಮಾತನ್ನು ಹೇಳಿದರು ಎಂಬುದನ್ನು ತನಿಖಾಧಿಕಾರಿಗಳು ಬಹಿರಂಗಪಡಿಸಿರಲಿಲ್ಲ.
ಇದನ್ನೂ ಓದಿ: ಫುಕೆಟ್-ದೆಹಲಿ ಏರ್ ಇಂಡಿಯಾ ವಿಮಾನದ ಪೈಲಟ್ ಡ್ರಗ್ಸ್ ಸೇವಿಸಿದ್ದು ದೃಢ; ಸಂಸ್ಥೆಯ ಸಿಇಒಗೆ ಸರ್ಕಾರದಿಂದ ಸಮನ್ಸ್
ತನಿಖೆಯನ್ನು ಪ್ರಶ್ನಿಸಿರುವ ಪೈಲಟ್ ಕುಟುಂಬ:
ಪೈಲಟ್ನ ತಂದೆ ಪುಷ್ಕರ್ ರಾಜ್ ಸಭರ್ವಾಲ್ ಅವರು ಪ್ರಸ್ತುತ ನಡೆಯುತ್ತಿರುವ ತನಿಖೆಯನ್ನು ಪ್ರಶ್ನಿಸಿದ್ದಾರೆ. ವಿಮಾನ ಅಪಘಾತ ತನಿಖಾ ಬ್ಯೂರೋ ಅಧಿಕಾರಿಗಳು ತಮ್ಮ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಎಂಜಿನ್ಗಳಿಗೆ ಇಂಧನ ಪೂರೈಕೆ ಸ್ಥಗಿತಗೊಳ್ಳಲು ತಮ್ಮ ಪುತ್ರನೇ ಕಾರಣ ಎಂದು ಪರೋಕ್ಷವಾಗಿ ಬಿಂಬಿಸಿದ್ದರು ಎಂದು ಅವರು ಆರೋಪಿಸಿದ್ದಾರೆ. ತನಿಖೆಯ ಭಾಗವಾಗಿ ಕಾಕ್ಪಿಟ್ ವಾಯ್ಸ್ ರೆಕಾರ್ಡರ್ನ (CVR) ಲಿಪ್ಯಂತರವನ್ನು ಸಿದ್ಧಪಡಿಸಲಾಗಿದೆ ಮತ್ತು ಮನೋವೈಜ್ಞಾನಿಕ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ ಎಂದು ಜುಲೈನಲ್ಲಿ ಎಎಐಬಿ ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು. ಅಲ್ಲದೆ, ಅಕ್ಟೋಬರ್ ಸುಮಾರಿಗೆ ಕರಡು ಅಂತಿಮ ವರದಿಯನ್ನು ಸಿದ್ಧಪಡಿಸಿ, ಅಂತಿಮಗೊಳಿಸಿ ಪ್ರಕಟಿಸುವ ಮೊದಲು ಅಭಿಪ್ರಾಯಗಳಿಗಾಗಿ ಭಾಗವಹಿಸುವ ದೇಶಗಳಿಗೆ ಕಳುಹಿಸಲಾಗುವುದು ಎಂದೂ ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು.
ಈ ವರ್ಷ ಅಕ್ಟೋಬರ್ ಮೊದಲ ವಾರದೊಳಗೆ ಅಂತಿಮ ವರದಿಯನ್ನು ಸಲ್ಲಿಸುವುದಾಗಿ ಎಎಐಬಿ ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು. ಆದರೆ ಆ ಗಡುವು ಮೀರಿ ಹೋಗಿದ್ದರೂ ವರದಿ ಇನ್ನೂ ಹೊರಬಂದಿಲ್ಲ. ವಿಮಾನ ಪತನಕ್ಕೆ ಕಾರಣವಾದ ಅಂಶಗಳ ಕುರಿತು ಅಂತಿಮ ವರದಿಯು ಹೆಚ್ಚಿನ ಮಾಹಿತಿಯನ್ನು ನೀಡುವ ನಿರೀಕ್ಷೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




