Tamil Nadu Assembly Elections 2021: ತಮಿಳುನಾಡು ಚುನಾವಣೆಯಲ್ಲಿ ಎಐಎಡಿಎಂಕೆ, ಬಿಜೆಪಿ, ಪಿಎಂಕೆ ಮೈತ್ರಿ ಕೂಟಕ್ಕೆ ಗೆಲುವು ನಿಶ್ಚಿತ: ಅಮಿತ್ ಶಾ

|

Updated on: Mar 07, 2021 | 3:16 PM

Amit Shah in Kanyakumari: ಕನ್ಯಾಕುಮಾರಿಯಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ಅಮಿತ್ ಶಾ, ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ- ಬಿಜೆಪಿ-ಪಿಎಂಕೆ ಭರ್ಜರಿ ಗೆಲುವು ಸಾಧಿಸಿ, ಸರ್ಕಾರ ರಚನೆ ಮಾಡಲಿದೆ ಎಂದು ಹೇಳಿದ್ದಾರೆ.

Tamil Nadu Assembly Elections 2021: ತಮಿಳುನಾಡು ಚುನಾವಣೆಯಲ್ಲಿ ಎಐಎಡಿಎಂಕೆ, ಬಿಜೆಪಿ, ಪಿಎಂಕೆ ಮೈತ್ರಿ ಕೂಟಕ್ಕೆ ಗೆಲುವು ನಿಶ್ಚಿತ: ಅಮಿತ್ ಶಾ
ಕನ್ಯಾಕುಮಾರಿಯಲ್ಲಿ ಅಮಿತ್ ಶಾ
Follow us on

ಕನ್ಯಾಕುಮಾರಿ: ತಮಿಳುನಾಡು ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದ ಅಂಗವಾಗಿ ಭಾನುವಾರ ಕನ್ಯಾಕುಮಾರಿಗೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಮನೆ-ಮನೆ ಅಭಿಯಾನವಾದ ವೆಟ್ರಿ ಕೊಡಿ ಏಂದ್​ಗೆ (ವಿಜಯಪತಾಕೆ ಹಾರಿಸಿ) ಚಾಲನೆ ನೀಡಿದ್ದಾರೆ. ವಿಜಯ್ ಸಂಕಲ್ಪ್ ಮಹಾಸಂಪರ್ಕ್ ಅಭಿಯಾನ್ ಅಂಗವಾಗಿ ಅಮಿತ್ ಶಾ 11 ಮನೆಗಳಿಗೆ ಭೇಟಿ ನೀಡಿದ್ದಾರೆ.

ಕನ್ಯಾಕುಮಾರಿಯಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ಅಮಿತ್ ಶಾ, ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ- ಬಿಜೆಪಿ-ಪಿಎಂಕೆ ಭರ್ಜರಿ ಗೆಲುವು ಸಾಧಿಸಿ, ಸರ್ಕಾರ ರಚನೆ ಮಾಡಲಿದೆ ಎಂದು ಹೇಳಿದ್ದಾರೆ. ಕನ್ಯಾಕುಮಾರಿಯಲ್ಲಿ ಲೋಕಸಭಾ ಉಪಚುನಾವಣೆಯಲ್ಲಿಯೂ ಬಿಜೆಪಿ ಸ್ಪರ್ಧಿಸುತ್ತಿದೆ. ಇಲ್ಲಿ ಸ್ಪರ್ಧಿಸುತ್ತಿರುವ ಎನ್ ಡಿಎ ಅಭ್ಯರ್ಥಿ, ಮಾಜಿ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರನ್ನು ಗೆಲ್ಲಿಸಬೇಕು ಎಂದು ಶಾ ಜನರಲ್ಲಿ ಮನವಿ ಮಾಡಿದ್ದಾರೆ. ಕನ್ಯಾಕುಮಾರಿ ಸಂಸದ ಎಚ್.ವಸಂತ ಕುಮಾರ್ ಅವರು ಕಳೆದ ವರ್ಷ ಕೊವಿಡ್ ನಿಂದ  ಮೃತಪಟ್ಟಿದ್ದರು.  ಇದರಿಂದ ತೆರವಾಗಿರುವ ಸಂಸದ ಸ್ಥಾನಕ್ಕೆ ಈ ಬಾರಿ ಉಪ ಚುನಾವಣೆ ನಡೆಯಲಿದೆ.

ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು ಮೇ.2ರಂದು ಫಲಿತಾಂಶ ಪ್ರಕಟವಾಗಲಿದೆ. 16 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು 6,28,23,749 ಮತದಾರರು ಮತ ಚಲಾಯಿಸಲಿದ್ದಾರೆ. ಅಮಿತ್ ಶಾ ಒಂದೇ ವಾರದಲ್ಲಿ ಎರಡು ಬಾರಿ ತಮಿಳುನಾಡಿಗೆ ಭೇಟಿ ನೀಡಿದ್ದಾರೆ.  ಕಳೆದ ಬಾರಿ ಚೆನ್ನೈಗೆ ಭೇಟಿ ನೀಡಿದ ಅಮಿತ್ ಶಾ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಡಿ.ಕೆ.ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರ ಜತೆ ಮಾತುಕತೆ ನಡೆಸಿದ್ದರು.


ಇಲ್ಲಿನ ಸುಚೀಂದ್ರಮ್ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಅಮಿತ್ ಶಾ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.


ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಅಣ್ಣಾ ದ್ರಾವಿಡ ಮುನ್ನೇಟ್ರ ಕಳಗಂ (AIADMK)- ಬಿಜೆಪಿ ಮೈತ್ರಿಕೂಟ ಸ್ಪರ್ಧಿಸುತ್ತಿದ್ದು 20 ಸೀಟುಗಳಲ್ಲಿ ಬಿಜೆಪಿ ಸ್ಪರ್ಧಿಸಲಿದೆ. 234 ಸ್ಥಾನಗಳಿಗೆ ಇಲ್ಲಿ ಚುನಾವಣೆ ನಡೆಯಲಿದ್ದು, ಮತದಾನ ಕೇಂದ್ರಗಳಲ್ಲಿ ಕೊವಿಡ್ ರೋಗ ನಿಯಂತ್ರಣಕ್ಕೆ ಕಟ್ಟೆಚ್ಚರ ವಹಿಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.

ಕನ್ಯಾಕುಮಾರಿ ಲೋಕಸಭಾ ಉಪಚುನಾವಣೆ
ಕಾಂಗ್ರೆಸ್ ಸಂಸದ ವಸಂತ ಕುಮಾರ್ ನಿಧನದಿಂದ ತೆರವಾಗಿರುವ ಕನ್ಯಾಕುಮಾರಿ ಸಂಸದ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಕೊವಿಡ್​ನಿಂದ ವಸಂತ ಕುಮಾರ್ ನಿಧನರಾಗಿದ್ದರು. ಉಪಚುನಾವಣೆಯಲ್ಲಿ ಎನ್​​ಡಿಎ ಅಭ್ಯರ್ಥಿಯಾಗಿ ಪೊನ್ ರಾಧಾಕೃಷ್ಣನ್ ಕಣಕ್ಕಿಳಿಯಲಿದ್ದಾರೆ.

ಬಿಜೆಪಿಯ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ನೇತೃತ್ವದಲ್ಲಿ ನಡೆದ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ಪೊನ್ ರಾಧಾಕೃಷ್ಣನ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿತ್ತು. ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿಯಾಗಿದ್ದರು.


ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ತಿಳಿಸಿದ ಪೊನ್ ರಾಧಾಕೃಷ್ಣನ್, ನಾನು ಕಠಿಣ ಪ್ರಯತ್ನದಿಂದ ಈ ಬಾರಿ ಚುನಾವಣೆ ಗೆಲ್ಲುವೆ ಎಂದಿದ್ದಾರೆ. ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟವು ಪಾಟ್ಟಾಳಿ ಮಕ್ಕಳ್ ಕಾಟ್ಚಿ (PMK) ಪಕ್ಷಕ್ಕೆ 23 ಸೀಟುಗಳನ್ನು ನೀಡಿದೆ.

ಇದನ್ನೂ ಓದಿ: Tamil Nadu Assembly Elections 2021: ತಮಿಳುನಾಡು ಚುನಾವಣೆಗೆ ಸೀಟು ಹಂಚಿಕೆ; ಕಾಂಗ್ರೆಸ್ ಪಕ್ಷಕ್ಕೆ 25 ಸೀಟು ನೀಡಿದ ಡಿಎಂಕೆ

Published On - 3:14 pm, Sun, 7 March 21