Politics: ಜೈಪುರ ಬಂಡಾಯದ ನಂತರ ಅಶೋಕ್ ಗೆಹ್ಲೋಟ್-ಸೋನಿಯಾ ಗಾಂಧಿ ಭೇಟಿ ಇಂದು; ಎಐಸಿಸಿ ಅಧ್ಯಕ್ಷ ಗಾದಿಗೆ ಯಾರೆಲ್ಲಾ ಹುರಿಯಾಳು?

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 29, 2022 | 7:20 AM

ಹೈಕಮಾಂಡ್​​ನಲ್ಲಿ ಗಾಂಧಿ ಕುಟುಂಬದ ಪ್ರಭಾವ ಕಡಿಮೆಯಾಗಬಾರದು ಎಂಬ ತಮ್ಮ ನಿಲುವನ್ನು ಆಂಟನಿ ಹಲವು ಬಾರಿ ವ್ಯಕ್ತಪಡಿಸಿದ್ದಾರೆ.

Politics: ಜೈಪುರ ಬಂಡಾಯದ ನಂತರ ಅಶೋಕ್ ಗೆಹ್ಲೋಟ್-ಸೋನಿಯಾ ಗಾಂಧಿ ಭೇಟಿ ಇಂದು; ಎಐಸಿಸಿ ಅಧ್ಯಕ್ಷ ಗಾದಿಗೆ ಯಾರೆಲ್ಲಾ ಹುರಿಯಾಳು?
ಕಾಂಗ್ರೆಸ್​ನ ಹಿರಿಯ ನಾಯಕರಾದ ದಿಗ್ವಿಜಯ್ ಸಿಂಗ್ ಮತ್ತು ಅಶೋಕ್ ಗೆಹ್ಲೋಟ್
Follow us on

ದೆಹಲಿ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ (AICC President Election) ಸ್ಪರ್ಧೆ ತೀವ್ರಗೊಂಡಿದೆ. ನಾಮಪತ್ರ (Nomination) ಸಲ್ಲಿಕೆಗೆ ಕೇವಲ ಎರಡು ದಿನಗಳಷ್ಟೇ ಬಾಕಿ ಇದೆ. ಆದರೆ ಕಣದಲ್ಲಿ ಯಾರಿರುತ್ತಾರೆ ಎಂಬ ಬಗ್ಗೆ ನಿರ್ಧಾರ ಅಂತಿಮಗೊಂಡಿಲ್ಲ. ಈವರೆಗೆ ಕಾಂಗ್ರೆಸ್​ ಹೈಕಮಾಂಡ್​ನ ನೆಚ್ಚಿನ ಆಯ್ಕೆಯಾಗಿದ್ದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ (Ashok Gehlot) ತವರು ರಾಜ್ಯದಲ್ಲಿ ಬುದ್ಧಿವಂತಿಕೆಯ ಆಟ ಆಡಲು ಹೋಗಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಂದು (ಸೆ 29) ಅವರು ಸೋನಿಯಾ ಗಾಂಧಿ (Sonia Gandhi) ಅವರನ್ನು ಭೇಟಿಯಾಗಲಿದ್ದು, ಸ್ಪರ್ಧೆಯ ಬಗ್ಗೆ ಅಂತಿಮ ತೀರ್ಮಾನ ಪ್ರಕಟವಾಗಬಹುದು.

ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಇರುವ ಸಮಸ್ಯೆಗಳ ಬಗ್ಗೆ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನಿನ್ನೆ (ಸೆ 28) ಪಕ್ಷದ ಹಿರಿಯ ನಾಯಕ ಎ.ಕೆ.ಆಂಟನಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಗಾಂಧಿ ಕುಟುಂಬದ ನಿಷ್ಠರಾಗಿರುವ ಆಂಟನಿ ರಾಜಸ್ಥಾನದ ಬೆಳವಣಿಗೆ ಕುರಿತು ಈವರೆಗೂ ತಮ್ಮ ಅಭಿಪ್ರಾಯವನ್ನು ಬಹಿರಂಗಪಡಿಸಿಲ್ಲ. ಆದರೆ ಹೈಕಮಾಂಡ್​​ನಲ್ಲಿ ಗಾಂಧಿ ಕುಟುಂಬದ ಪ್ರಭಾವ ಕಡಿಮೆಯಾಗಬಾರದು ಎಂಬ ತಮ್ಮ ನಿಲುವನ್ನು ಆಂಟನಿ ಹಲವು ಬಾರಿ ವ್ಯಕ್ತಪಡಿಸಿದ್ದಾರೆ. ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಂದರ್ಭದಲ್ಲಿ ಈ ನಾಯಕನ ಮಾತಿಗೆ ಸೋನಿಯಾ ಗಾಂಧಿ ಮನ್ನಣೆ ನೀಡಲಿದ್ದಾರೆ ಎಂದು ಹೇಳಲಾಗಿದೆ. ಆಂಟನಿ ಮತ್ತು ಸೋನಿಯಾ ಗಾಂಧಿ ಪರಸ್ಪರ ಸುದೀರ್ಘವಾಗಿ ಚರ್ಚಿಸಿದ ನಂತರ ಖಜಾಂಚಿ ಪವನ್ ಕುಮಾರ್ ಬನ್ಸಾಲ್ ಅವರೊಂದಿಗೆ ಸಮಾಲೋಚನೆ ನಡೆಸಿದರು.

ಈ ನಡುವೆ ಎಐಸಿಸಿ ಅಧ್ಯಕ್ಷ ಗಾದಿಯ ಮತ್ತೋರ್ವ ಆಕಾಂಕ್ಷಿ ಎಂದು ಬಿಂಬಿಸಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್, ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ತಾವು ಗಾಂಧಿ ಕುಟುಂಬದೊಂದಿಗೆ ಚರ್ಚಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ ತಮಗೆ ಗಾಂಧಿ ಕುಟುಂಬದ ಬೆಂಬಲ ಸಿಗಬಹುದು ಎಂಬ ನಿರೀಕ್ಷೆಯನ್ನು ಸಿಂಗ್ ಇರಿಸಿಕೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಆದಾಗ್ಯೂ, ಗೆಹ್ಲೋಟ್ ಬಗ್ಗೆ ಸೋನಿಯಾ ಅವರ ನಿರ್ಧಾರ ಹೇಗೆ ಬದಲಾಗುತ್ತದೆ ಎಂಬುದರ ಮೇಲೆ ಸಿಂಗ್ ಅವರ ಭವಿಷ್ಯವು ಅವಲಂಬಿತವಾಗಿರುತ್ತದೆ. ಅವರು ಗೆಹ್ಲೋಟ್ ವಿರುದ್ಧ ನಿರ್ಧಾರ ಕೈಗೊಂಡರೂ, ನಾಯಕತ್ವವು ನಾಯಕರ ಗುಂಪನ್ನು ನೋಡಬಹುದಾದ ಕಾರಣ, ಸಿಂಗ್ ಗಾಂಧಿ ಕುಟುಂಬದ ಬೆಂಬಲಕ್ಕೆ ಸ್ವಾಭಾವಿಕ ಆಯ್ಕೆಯಾಗಿರದೆ ಇರಬಹುದು. ಇವರಲ್ಲಿ ಮುಕುಲ್ ವಾಸ್ನಿಕ್, ಮಲ್ಲಿಕಾರ್ಜುನ ಖರ್ಗೆ, ಮೀರಾ ಕುಮಾರ್ ಮತ್ತು ಕುಮಾರಿ ಸೆಲ್ಜಾ ಸೇರಿದ್ದಾರೆ. ಖರ್ಗೆ ಅವರು ಚುನಾವಣೆಯ ಬಗ್ಗೆ ತಮ್ಮ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ನಾಯಕತ್ವಕ್ಕೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅ 17ರಂದು ಚುನಾವಣೆಗಳು ನಡೆಯಲಿವೆ. ಈ ಸ್ಥಾನಕ್ಕೆ ಇಬ್ಬರಿಗಿಂತಲೂ ಹೆಚ್ಚು ಅಭ್ಯರ್ಥಿಗಳ ಸ್ಪರ್ಧಿಸಬಹುದಾದ ಸಾಧ್ಯತೆಯನ್ನು ನಾಯಕರು ತಳ್ಳಿಹಾಕುತ್ತಿಲ್ಲ. ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರು ವೈಯಕ್ತಿಕ ಕಾರಣಗಳಿಂದಾಗಿ ಗುರುವಾರ (ಸೆ 29) ದೆಹಲಿಯಲ್ಲಿ ಇರುವುದಿಲ್ಲ. ಹೀಗಾಗಿ ಅಭ್ಯರ್ಥಿಗಳಿಗೆ ಗುರುವಾರ ನಾಮಪತ್ರಗಳನ್ನು ಸಲ್ಲಿಸಲು ಸಾಧ್ಯವಾಗದಿರಬಹುದು.

ಈ ಮಧ್ಯೆ ಗೆಹ್ಲೋಟ್ ಬುಧವಾರ ರಾತ್ರಿಯೇ ಜೈಪುರದಿಂದ ದೆಹಲಿಗೆ ತೆರಳಿದ್ದು, ಗುರುವಾರ ಸೋನಿಯಾ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ. ಈ ಸಭೆಯ ನಂತರ ಅಭ್ಯರ್ಥಿಗಳ ಬಗ್ಗೆ ಸ್ಪಷ್ಟ ಚಿತ್ರಣ ಹೊರಬರಲಿದೆ. ಆದರೂ ಸಭೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ. ಹಿರಿಯ ನಾಯಕರಾದ ಅಂಬಿಕಾ ಸೋನಿ, ಭೂಪಿಂದರ್ ಹೂಡಾ ಮತ್ತು ಆನಂದ್ ಶರ್ಮಾ ಸೇರಿದಂತೆ ಹಲವು ಹಿರಿಯ ನಾಯಕರು ಜೈಪುರ ಬಂಡಾಯಕ್ಕೂ ಮೊದಲು ಸೋನಿಯಾ ಅವರ ನೆಚ್ಚಿನ ಆಯ್ಕೆಯಾಗಿದ್ದ ಅಶೋಕ್ ಗೆಹ್ಲೋಟ್ ಅವರೊಂದಿಗೆ ಇತ್ತೀಚೆಗೆ ಮಾತನಾಡಿದ್ದರು. ಹಿರಿಯ ಸಂಸದ ರಾಜೀವ್ ಶುಕ್ಲಾ ಅವರ ನಿವಾಸದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸಚಿನ್ ಪೈಟಲ್ ಭೇಟಿ ಮಾಡಿದ್ದರು ಎಂದೂ ಹೇಳಲಾಗಿತ್ತು.

ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಗೊಂದಲ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆಂಟನಿ ಅವರು ತಾವು ಸಹ ಅಧ್ಯಕ್ಷ ಗಾದಿಯ ಆಕಾಂಕ್ಷಿ ಎನ್ನುವ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿದರು. ‘ನಾನು ಮೂರ್ಖನಲ್ಲ, ನನ್ನ ಆರೋಗ್ಯ ಪರಿಸ್ಥಿತಿ ನನಗೆ ಗೊತ್ತಿದೆ. ನಾನು ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯವಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.

ಈ ನಡುವೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಹಿರಿಯ ನಾಯಕ ಕಮಲ್ ನಾಥ್ ಅವರು ಸಹ ತಾವು ಎಐಸಿಸಿ ಅಧ್ಯಕ್ಷ ಗಾದಿಯ ಸ್ಪರ್ಧೆಯಲ್ಲಿ ಇಲ್ಲ ಎಂದು ಹೇಳಿದ್ದಾರೆ. ‘ಮಧ್ಯಪ್ರದೇಶ ಚುನಾವಣೆಗೆ ಕೇವಲ 12 ತಿಂಗಳುಗಳು ಮಾತ್ರ ಉಳಿದಿವೆ. ಈ ಹಂತದಲ್ಲಿ ನಾನು ಹೊಸ ಜವಾಬ್ದಾರಿಯನ್ನು ತೆಗೆದುಕೊಂಡರೆ, ಮಧ್ಯಪ್ರದೇಶದ ಕಡೆಗೆ ಹೆಚ್ಚು ಗಮನ ನೀಡಲು ಆಗುವುದಿಲ್ಲ. ಮತ್ತೊಂದೆಡೆ ಶೀಘ್ರದಲ್ಲಿಯೇ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳಿವೆ. ಹೀಗಾಗಿ ಎಐಸಿಸಿ ಅಧ್ಯಕ್ಷ ಗಾದಿಗೆ ಬರುವವರ ಮೇಲೆ ಹೊಣೆಗಾರಿಕೆ ಹೆಚ್ಚಾಗಿರುತ್ತದೆ.. ನಾನು ಮಧ್ಯಪ್ರದೇಶದಲ್ಲಿ ಉಳಿಯಲು ಬಯಸುವುದರಿಂದ ಆ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಬಯಸುವುದಿಲ್ಲ’ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದ್ದರು.

Published On - 7:20 am, Thu, 29 September 22