PM Modi Gujarat Visit: ಇಂದಿನಿಂದ 2 ದಿನ ಪ್ರಧಾನಿ ಮೋದಿ ಗುಜರಾತ್​ ಭೇಟಿ; 29,000 ಕೋಟಿ ರೂ. ಯೋಜನೆಗಳಿಗೆ ಚಾಲನೆ

| Updated By: ಸುಷ್ಮಾ ಚಕ್ರೆ

Updated on: Sep 29, 2022 | 8:54 AM

ಗುಜರಾತ್​ನ ಸೂರತ್, ಭಾವನಗರ, ಅಹಮದಾಬಾದ್ ಮತ್ತು ಅಂಬಾಜಿಯಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಸುಮಾರು 29,000 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿ ನೆರವೇರಿಸಲಿದ್ದಾರೆ.

PM Modi Gujarat Visit: ಇಂದಿನಿಂದ 2 ದಿನ ಪ್ರಧಾನಿ ಮೋದಿ ಗುಜರಾತ್​ ಭೇಟಿ; 29,000 ಕೋಟಿ ರೂ. ಯೋಜನೆಗಳಿಗೆ ಚಾಲನೆ
ನರೇಂದ್ರ ಮೋದಿ
Follow us on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದಿನಿಂದ (ಸೆಪ್ಟೆಂಬರ್ 29) 2 ದಿನಗಳ ಕಾಲ ತಮ್ಮ ತವರು ರಾಜ್ಯ ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಗುಜರಾತ್​ನ (Gujarat) ಸೂರತ್, ಭಾವನಗರ, ಅಹಮದಾಬಾದ್ ಮತ್ತು ಅಂಬಾಜಿಯಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಸುಮಾರು 29,000 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಸೂರತ್‌ನಲ್ಲಿ 3,400 ಕೋಟಿ ರೂ.ಗೂ ಹೆಚ್ಚು ಮೊತ್ತದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಮಾಡಲಿದ್ದಾರೆ. ನಂತರ ಭಾವನಗರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಮಧ್ಯಾಹ್ನ 2 ಗಂಟೆಗೆ ಅವರು 5,200 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಿದ್ದಾರೆ.

ಮೋದಿ ಅವರು ಡಾ. ಹೆಡ್ಗೆವಾರ್ ಸೇತುವೆಯಿಂದ ಭೀಮರಾಡ್-ಬಮ್ರೋಲಿ ಸೇತುವೆಯವರೆಗೆ 87 ಹೆಕ್ಟೇರ್‌ನಲ್ಲಿ ನಿರ್ಮಿಸಲಾಗುತ್ತಿರುವ ಜೀವವೈವಿಧ್ಯ ಉದ್ಯಾನವನದ ಶಂಕುಸ್ಥಾಪನೆ ಮತ್ತು ಸೂರತ್‌ನ ವಿಜ್ಞಾನ ಕೇಂದ್ರದಲ್ಲಿ ಖೋಜ್ ಮ್ಯೂಸಿಯಂ ಅನ್ನು ಉದ್ಘಾಟಿಸಲಿದ್ದಾರೆ. ಮೋದಿ ನಂತರ ಭಾವನಗರಕ್ಕೆ ಪ್ರಯಾಣಿಸಲಿದ್ದು, ಅಲ್ಲಿ 5,200 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಅವರು ವಿಶ್ವದ ಮೊದಲ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ಟರ್ಮಿನಲ್ ಮತ್ತು ಬ್ರೌನ್‌ಫೀಲ್ಡ್ ಬಂದರಿನ ಭಾವನಗರದಲ್ಲಿ 4,000 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಇದನ್ನೂ ಓದಿ: Smriti Van: ಗುಜರಾತ್​ನ ಭುಜ್​ನಲ್ಲಿ ಇಂದು ಸ್ಮೃತಿವನ ಉದ್ಘಾಟಿಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ, ಇದರ 10 ವೈಶಿಷ್ಟ್ಯಗಳ ಪರಿಚಯ ಇಲ್ಲಿದೆ

ಭಾವನಗರದಲ್ಲಿ 20 ಎಕರೆ ಪ್ರದೇಶದಲ್ಲಿ 100 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಮೋದಿ ಉದ್ಘಾಟಿಸಲಿದ್ದಾರೆ. ಇಂದು ಸಂಜೆ ಅಹಮದಾಬಾದ್‌ಗೆ ತೆರಳಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 36ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ದೇಶಾದ್ಯಂತದ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ, ಅವರು ದೇಸಾರ್‌ನಲ್ಲಿ ಸ್ವರ್ಣಿಮ್ ಗುಜರಾತ್ ಕ್ರೀಡಾ ವಿಶ್ವವಿದ್ಯಾಲಯವನ್ನು ಉದ್ಘಾಟಿಸಲಿದ್ದಾರೆ. ರಾತ್ರಿ 9 ಗಂಟೆ ಸುಮಾರಿಗೆ ಅಹಮದಾಬಾದ್‌ನ ಜಿಎಂಡಿಸಿ ಮೈದಾನದಲ್ಲಿ ನವರಾತ್ರಿ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ನಾಳೆಯ ಕಾರ್ಯಕ್ರಮಗಳು:
ಶುಕ್ರವಾರ ನರೇಂದ್ರ ಮೋದಿ ಗಾಂಧಿನಗರ ನಿಲ್ದಾಣದಲ್ಲಿ ಗಾಂಧಿನಗರ- ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್​ಗೆ ಹಸಿರು ನಿಶಾನೆ ತೋರಲಿದ್ದಾರೆ. ಅಲ್ಲಿಂದ ಕಲುಪುರ್ ರೈಲು ನಿಲ್ದಾಣಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಬಳಿಕ ಅಹಮದಾಬಾದ್ ಮೆಟ್ರೋ ರೈಲು ಯೋಜನೆಗೆ ಚಾಲನೆ ನೀಡಲಿದ್ದಾರೆ ಮತ್ತು ಕಲುಪುರ್ ನಿಲ್ದಾಣದಿಂದ ದೂರದರ್ಶನ ಕೇಂದ್ರದ ಮೆಟ್ರೋ ನಿಲ್ದಾಣಕ್ಕೆ ಮೆಟ್ರೋದಲ್ಲಿ ಪ್ರಯಾಣ ಮಾಡಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: PM Modi: ಪ್ರಧಾನಿ ನರೇಂದ್ರ ಮೋದಿಯಿಂದ ಗುಜರಾತ್​​ನಲ್ಲಿ ಇಂದು ಪರಿಸರ ಸಚಿವರ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

ಬಳಿಕ, ಅಹಮದಾಬಾದ್‌ನ ಅಹಮದಾಬಾದ್ ಎಜುಕೇಶನ್ ಸೊಸೈಟಿಯಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಅಹಮದಾಬಾದ್ ಮೆಟ್ರೋ ಯೋಜನೆಯ ಹಂತ-1 ಅನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ನಂತರ, ಸಂಜೆ 5:45ರ ಸುಮಾರಿಗೆ ಅವರು ಅಂಬಾಜಿಯಲ್ಲಿ 7,200 ಕೋಟಿ ರೂ.ಗಳ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ