Air India: ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣ; ಕ್ಷಮೆ ಕೋರಿದ ಏರ್​ ಇಂಡಿಯಾ ಸಿಇಒ

| Updated By: ಗಣಪತಿ ಶರ್ಮ

Updated on: Jan 07, 2023 | 2:57 PM

ಸಹ ಪ್ರಯಾಣಿಕರ ಖಂಡನಾರ್ಹ ನಡವಳಿಕೆಗಳಿಂದ ಗ್ರಾಹಕರಿಗೆ ಆಗಿರುವ ತೊಂದರೆ ಬಗ್ಗೆ ಏರ್​ ಇಂಡಿಯಾ ತೀವ್ರ ಕಾಳಜಿ ಹೊಂದಿದೆ. ಇಂಥ ಘಟನೆಗಳ ಬಗ್ಗೆ ತೀವ್ರ ವಿಷಾದವಿದೆ. ಕಠಿಣ ಕ್ರಮ ಕೈಗೊಳ್ಳಲು ಬದ್ಧವಾಗಿದೆ ಎಂದು ವಿಲ್ಸನ್ ಹೇಳಿದ್ದಾರೆ.

Air India: ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣ; ಕ್ಷಮೆ ಕೋರಿದ ಏರ್​ ಇಂಡಿಯಾ ಸಿಇಒ
ಏರ್ ಇಂಡಿಯಾ ಸಿಇಒ ಕ್ಯಾಂಪ್​​ಬೆಲ್ ವಿಲ್ಸನ್ (ಚಿತ್ರ ಕೃಪೆ: ಟಾಟಾ ಡಾಟ್​ ಕಾಂ)
Image Credit source: Tata.com
Follow us on

ನವದೆಹಲಿ: ಏರ್ ಇಂಡಿಯಾ (Air India) ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಕುಡುಕ ಪ್ರಯಾಣಿಕ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಸಿಇಒ ಕ್ಯಾಂಪ್​​ಬೆಲ್ ವಿಲ್ಸನ್ (Campbell Wilson) ಕ್ಷಮೆ ಕೋರಿದ್ದಾರೆ. ಪರಿಸ್ಥಿತಿಯನ್ನು ಸಿಬ್ಬಂದಿ ಇನ್ನಷ್ಟು ಉತ್ತಮವಾಗಿ ನಿರ್ವಹಿಸಬಹುದಿತ್ತು ಎಂದು ಹೇಳಿರುವ ಅವರು, ವಿಮಾನ ಸಂಚಾರದ ವೇಳೆ ಆಲ್ಕೋಹಾಲ್ ನೀಡುವುದಕ್ಕೆ ಸಂಬಂಧಿಸಿದ ನೀತಿಯನ್ನು ಪರಾಮರ್ಶಿಸುವುದಾಗಿ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ, ವಿಮಾನದ ಸಿಬ್ಬಂದಿ ಮತ್ತು ಪೈಲಟ್​ಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಹ ಪ್ರಯಾಣಿಕರ ಖಂಡನಾರ್ಹ ನಡವಳಿಕೆಗಳಿಂದ ಗ್ರಾಹಕರಿಗೆ ಆಗಿರುವ ತೊಂದರೆ ಬಗ್ಗೆ ಏರ್​ ಇಂಡಿಯಾ ತೀವ್ರ ಕಾಳಜಿ ಹೊಂದಿದೆ. ಇಂಥ ಘಟನೆಗಳ ಬಗ್ಗೆ ತೀವ್ರ ವಿಷಾದವಿದೆ. ಕಠಿಣ ಕ್ರಮ ಕೈಗೊಳ್ಳಲು ಬದ್ಧವಾಗಿದೆ ಎಂದು ವಿಲ್ಸನ್ ಹೇಳಿದ್ದಾರೆ.

ಘಟನೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಮಾನದ ಸಿಬ್ಬಂದಿ ತಡವಾಗಿ ಮಾಹಿತಿ ನೀಡಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ವೇಳೆ ಪ್ರಕರಣ ವಿಮಾನದಲ್ಲೇ ಪರಿಹಾರ ಕಂಡಿದ್ದರೂ ಅಂಥ ಘಟನೆಗಳ ಬಗ್ಗೆಯೂ ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಏನಿದು ಪ್ರಕರಣ?

ನ್ಯೂಯಾರ್ಕ್​​ನಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದ ಏರ್​ ಇಂಡಿಯಾ ವಿಮಾನದ ಬ್ಯುಸಿನೆಸ್ ಕ್ಲಾಸ್ ಆಸನ ವಿಭಾಗದಲ್ಲಿ ಕುಡಿದ ಅಮಲಿನಲ್ಲಿ ಶಂಕರ್ ಮಿಶ್ರಾ ಎಂಬ ವ್ಯಕ್ತಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ್ದರು. ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ಜನವರಿ 4ರಂದು ಸಂತ್ರಸ್ತ ಮಹಿಳೆ ಅಸಭ್ಯವಾಗಿ ವರ್ತಿಸಿದ ಪ್ರಯಾಣಿಕನ ವಿಚಾರ ಬಹಿರಂಗಪಡಿಸಿದ್ದರು. ವಿಮಾನದ ಸಿಬ್ಬಂದಿ ಕೂಡ ಉತ್ತಮವಾಗಿ ಸ್ಪಂದಿಸಿರಲಿಲ್ಲ ಎಂದು ದೂರಿದ್ದರು. ಈ ವಿಚಾರ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.

ಇದನ್ನು ಓದಿ: Air India: ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ ಬೆಂಗಳೂರಿನಲ್ಲಿ ಬಂಧನ

ಇದೀಗ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ಆರೋಪ ಎದುರಿಸುತ್ತಿರುವ ಮುಂಬೈನ ವ್ಯಕ್ತಿ ಶಂಕರ್ ಮಿಶ್ರಾ ಅವರನ್ನು ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ಇಂದು (ಶನಿವಾರ) ಬಂಧಿಸಿದ್ದಾರೆ. ಈ ಮಧ್ಯೆ ಶಂಕರ್​ ಅನ್ನು ವೆಲ್ಸ್​ ಫಾರ್ಗೋ ಕಂಪನಿಯು  ಕೆಲಸದಿಂದ ವಜಾಗೊಳಿಸಿದೆ. ನಮ್ಮ ಉದ್ಯೋಗಿಗಳು ವೃತ್ತಿಪರ ಹಾಗೂ ವೈಯಕ್ತಿಕವಾಗಿ ಉತ್ತಮ ನಡವಳಿಕೆಯನ್ನು ಹೊಂದಿದ್ದಾರೆ, ಇವರ ಮೇಲಿನ ಆರೋಪಗಳು ಕಂಪನಿಗೆ ಕೆಟ್ಟ ಹೆಸರನ್ನು ತಂದಿದೆ ಹೀಗಾಗಿ ಅವರನ್ನು ಕೆಲಸದಿಂದ ವಜಾ ಮಾಡುತ್ತಿರುವುದಾಗಿ ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:38 pm, Sat, 7 January 23