
ಬೆಂಗಳೂರು, ಸೆಪ್ಟೆಂಬರ್ 22: ಇಂದು (ಸೋಮವಾರ) ಬೆಂಗಳೂರಿನಿಂದ ವಾರಾಣಸಿಗೆ ಹೋಗುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ವಿಮಾನದೊಳಗೆ ಕಾಕ್‌ಪಿಟ್ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ. ಆದರೆ, ಭದ್ರತಾ ಕೋಡ್ ಅನ್ನು ತಪ್ಪಾಗಿ ಒತ್ತಿದ ಹಿನ್ನೆಲೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ತಕ್ಷಣ ವಿಮಾನದ ಸಿಬ್ಬಂದಿ ಆತನನ್ನು ವಿಚಾರಿಸಿದಾಗ ಕಾಕ್‌ಪಿಟ್‌ನ ಬಾಗಿಲನ್ನು ಶೌಚಾಲಯ ಎಂದು ತಪ್ಪಾಗಿ ಭಾವಿಸಿರುವುದಾಗಿ ತಿಳಿಸಿರುವುದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ. ಪೈಲಟ್ ವಾಯು ಸಂಚಾರ ನಿಯಂತ್ರಣಕ್ಕೆ ಕಳುಹಿಸಿದ ಮಾಹಿತಿಯನ್ನು ಉಲ್ಲೇಖಿಸಿದ ಭದ್ರತಾ ಅಧಿಕಾರಿಗಳು ಏರ್ ಇಂಡಿಯಾದಲ್ಲಿ ಮಣಿ ಎಂಬ ಪ್ರಯಾಣಿಕ ಕಾಕ್‌ಪಿಟ್ ಬಾಗಿಲಿನ ಭದ್ರತಾ ಕೋಡ್ ಒತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇದು ವಿಮಾನದಲ್ಲಿದ್ದ ಸಿಬ್ಬಂದಿಗೆ ತಿಳಿದ ಕೂಡಲೆ ಆತನನ್ನು ವಿಚಾರಿಸಿದ್ದಾರೆ. ಆದರೆ, ಆ ಪ್ರಯಾಣಿಕನು ತಾನು ಮೊದಲ ಬಾರಿಗೆ ವಿಮಾನ ಹತ್ತಿದ್ದರಿಂದ ಅಲ್ಲಿನ ವ್ಯವಸ್ಥೆಯ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಪೈಲಟ್ ಹೈಜಾಕ್ ಪ್ರಯತ್ನದ ಭಯದಿಂದ ಆ ಪ್ರಯಾಣಿಕನಿಗೆ ಕಾಕ್‌ಪಿಟ್ ಒಳಗೆ ಬರಲು ಅನುಮತಿ ನೀಡಿಲಿಲ್ಲ. ತಕ್ಷಣ ಈ ಬಗ್ಗೆ ATCಗೆ ಅಲರ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಪೈಲಟ್ ಕಾರಣ ಎಂಬ ಪ್ರಾಥಮಿಕ ವರದಿ ಬಗ್ಗೆ ಸುಪ್ರೀಂ ಹೇಳಿದ್ದೇನು?
ಮಣಿ ಅವರ ಜೊತೆ ಪ್ರಯಾಣಿಸುತ್ತಿದ್ದ 8 ಸಹ ಪ್ರಯಾಣಿಕರನ್ನು ವಾರಾಣಸಿಯಲ್ಲಿ ಲ್ಯಾಂಡಿಂಗ್ ಸಮಯದಲ್ಲಿ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡು ವಾರಾಣಸಿಯಲ್ಲಿ ಉತ್ತರ ಪ್ರದೇಶದ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಈ ಘಟನೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ IX-1086ನಲ್ಲಿ ನಡೆದಿದೆ.
ಈ ಬಗ್ಗೆ ಏರ್ ಇಂಡಿಯಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, “ವಾರಾಣಸಿಗೆ ಹೋಗುವ ನಮ್ಮ ವಿಮಾನಗಳಲ್ಲಿ ಒಂದರಲ್ಲಿ ಪ್ರಯಾಣಿಕರೊಬ್ಬರು ಶೌಚಾಲಯವನ್ನು ಹುಡುಕುತ್ತಾ ಕಾಕ್‌ಪಿಟ್ ಪ್ರದೇಶಕ್ಕೆ ಬಂದಿರುವ ಘಟನೆಯ ಬಗ್ಗೆ ಮಾಧ್ಯಮದಲ್ಲಿ ವರದಿಗಳು ಬಂದಿವೆ. ನಮ್ಮ ವಿಮಾನದಲ್ಲಿ ಸುರಕ್ಷತೆ ಮತ್ತು ಭದ್ರತಾ ಪ್ರೋಟೋಕಾಲ್‌ಗಳು ಜಾರಿಯಲ್ಲಿವೆ. ಅವುಗಳ ಜೊತೆ ಯಾವುದೇ ರಾಜಿ ಇಲ್ಲ ಎಂದು ನಾವು ಪುನರುಚ್ಚರಿಸುತ್ತೇವೆ. ಈ ವಿಷಯವನ್ನು ಲ್ಯಾಂಡಿಂಗ್ ಸಮಯದಲ್ಲಿ ಸಂಬಂಧಿತ ಅಧಿಕಾರಿಗಳಿಗೆ ವರದಿ ಮಾಡಲಾಗಿದೆ. ಈ ಬಗ್ಗೆ ಪ್ರಸ್ತುತ ತನಿಖೆ ನಡೆಯುತ್ತಿದೆ” ಎಂದು ಏರ್ ಇಂಡಿಯಾ ವಕ್ತಾರರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ