ದೆಹಲಿ: ಸರ್ಕಾರದ ಅಧೀನದಲ್ಲಿರುವ ಏರ್ ಇಂಡಿಯಾ ಕಂಪನಿಯು ಯಾರ ಪಾಲಾಗಲಿದೆ ಎಂಬ ಬಗ್ಗೆ ಬಹುನಿರೀಕ್ಷಿತ ಪ್ರಶ್ನೆಗೆ ಇದೀಗ ಉತ್ತರ ದೊರೆತಿದೆ. ಬಂಡವಾಳ ಹಿಂಪಡೆತ ಹಾಗೂ ನಾಗರಿಕ ವಿಮಾನಯಾನ ಇಲಾಖೆಯ ಕಾರ್ಯದರ್ಶಿಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟಾಟಾ ಸನ್ಸ್ ಕಂಪನಿಯು ಏರ್ ಇಂಡಿಯಾ ಖರೀದಿಗೆ ಸಲ್ಲಿಸಿದ್ದ ಟೆಂಡರ್ ಒಪ್ಪಿಗೆಯಾಗಿರುವುದನ್ನು ಘೋಷಿಸಿದರು.
ಬಂಡವಾಳ ಹಿಂಪಡೆತ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆ (DIPAM) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಮತ್ತು ನಾಗರಿಕ ವಿಮಾನಯಾನ ಕಾರ್ಯದರ್ಶಿ ರಾಜೀವ್ ಬನ್ಸಾಲ್ ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಕಂಪನಿಯೊಂದು ಏರ್ಇಂಡಿಯಾ ಖರೀದಿಗೆ ಟೆಂಡರ್ ಬಿಡ್ ಸಲ್ಲಿಸಿದ ನಂತರ, ಸರ್ಕಾರ ಅದನ್ನು ಒಪ್ಪಿಕೊಂಡ ನಂತರದಲ್ಲಿ ನಂತರದಲ್ಲಿ ಯಾವುದೇ ಚರ್ಚೆಗೆ ಅವಕಾಶ ಇರುವುದಿಲ್ಲ. ಈ ಕುರಿತು ವಿವಿಧ ಇಲಾಖೆಗಳ ಸಚಿವರು ಮತ್ತು ಉನ್ನತ ಅಧಿಕಾರಿಗಳು ಒಂದು ನಿರ್ಣಯಕ್ಕೆ ಬಂದಿದ್ದಾರೆ.
ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ 18,000 ಕೋಟಿಗೆ ಇವಿ ಕೋಟ್ ಸಲ್ಲಿಸಿತ್ತು. ಏರ್ ಇಂಡಿಯಾ ಕಂಪನಿಯ ಬಿಡಿಂಗ್ನಲ್ಲಿ ಟಾಟಾ ಸನ್ಸ್ ಗೆಲುವು ಸಾಧಿಸಿದೆ ಎಂದು ಅವರು ತಿಳಿಸಿದರು.
ಭಾರತ ಸರ್ಕಾರವು ತನ್ನ ಅಧೀನದಲ್ಲಿರುವ ಏರ್ ಇಂಡಿಯಾದ ಶೇ 100ರಷ್ಟು ಷೇರುಗಳನ್ನೂ ಮಾರಾಟ ಮಾಡಲು ಒಪ್ಪಿಕೊಂಡಿದ್ದು, ಏರ್ ಇಂಡಿಯಾ ಖಾಸಗೀಕರಣದ ಕುರಿತು ಇಷ್ಟು ವರ್ಷ ಕೇಳಿಬರುತ್ತಿದ್ದ ಪ್ರಶ್ನೆಗಳಿಗೆ ಉತ್ತರ ದೊರೆತಿದೆ.
ಏರ್ ಇಂಡಿಯಾ ಖರೀದಿಗೆ ಒಟ್ಟು ಏಳು ಸಂಸ್ಥೆಗಳು ಆಸಕ್ತಿ ತೋರಿದ್ದವು (Expression of Interest – EOI). ಈ ಸಂಸ್ಥೆಗಳ ಪ್ರಸ್ತಾವವನ್ನು ಕೇಂದ್ರ ಗೃಹ ಸಚಿವರ ನೇತೃತ್ವದಲ್ಲಿ ರೂಪಿಸಿದ್ದ ಏರ್ ಇಂಡಿಯಾ ಉದ್ದೇಶಿತ ಪರ್ಯಾಯ ಕಾರ್ಯನಿರ್ವಹಣೆ ವ್ಯವಸ್ಥೆ (Air India Specific Alternative Mechanism – AISAM) ತಂಡ ಪರಿಶೀಲಿಸಿತ್ತು. ಇದೀಗ ಇದೇ ತಂಡವು ಯಾರಿಗೆ ಏರ್ ಇಂಡಿಯಾ ಹಸ್ತಾಂತರಿಸಬೇಕು ಎಂಬ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಂಡಿದೆ. ಈ ಪೈಕಿ ಐದು ಪ್ರಸ್ತಾವಗಳು ನಿರ್ಧಾರಿತ ಮಾನದಂಡಗಳನ್ನು ಪೂರೈಸಿಲ್ಲ ಎನ್ನುವ ಕಾರಣಕ್ಕೆ ತಿರಸ್ಕೃತಗೊಂಡಿದ್ದವು ಎಂದು ಬಂಡವಾಳ ಹಿಂತೆಗೆತ ಇಲಾಖೆಯ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ತಿಳಿಸಿದರು.
ಟಾಟಾ ಸನ್ಸ್ ಕಂಪನಿಯು ಏರ್ ಇಂಡಿಯಾ ಖರೀದಿಗಾಗಿ ₹ 18,000 ಕೋಟಿಗೆ ಟೆಂಡರ್ ಬಿಡ್ ಸಲ್ಲಿಸಿತ್ತು. ಬಿಡ್ ವಿಜೇತ ಕಂಪನಿಯು ₹ 15,300 ಕೋಟಿ ಸಾಲದ ಭಾರವನ್ನು ಹೊರಬೇಕಾಗುತ್ತದೆ. ಉಳಿದ ಸಾಲವನ್ನು ಭಾರತ ಸರ್ಕಾರ ಮನ್ನಾ ಮಾಡಲಿದೆ ಎಂದು ಅವರು ತಿಳಿಸಿದರು.
ಏರ್ ಇಂಡಿಯಾ ಕಂಪನಿಯ ಮೇಲಿರುವ ಒಟ್ಟು ಸಾಲದ ಹೊರೆ ₹ 61,562 ಕೋಟಿ. ಈ ಪೈಕಿ ಬಿಡ್ ವಿಜೇತ ಟಾಟಾ ಸನ್ಸ್ ಕಂಪನಿಯು ₹ 15,300 ಕೋಟಿ ಸಾಲದ ಹೊರೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ. ಬಾಕಿ ₹ 46,262 ಕೋಟಿ ಸಾಲ ತೀರುವಳಿ ಜವಾಬ್ದಾರಿಯನ್ನು ಸರ್ಕಾರವು ತನ್ನಲ್ಲೇ ಉಳಿಸಿಕೊಳ್ಳಲಿದೆ. ಈ ಸಾಲವು ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ ಕಂಪನಿಯ ಭಾಗವಾಗಿಯೇ ಉಳಿದುಕೊಳ್ಳಲಿದೆ ಎಂದು ತುಹಿನ್ ಕಾಂತ ಪಾಂಡೆ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ವಿವರಿಸಿದರು.
ಕಳೆದ 2009-10ರ ಆರ್ಥಿಕ ವರ್ಷದಿಂದೀಚೆಗೆ ಏರ್ ಇಂಡಿಯಾಗಾಗಿ ಕೇಂದ್ರ ಸರ್ಕಾರವು ₹ 1,10,276 ಕೋಟಿ ಖರ್ಚು ಮಾಡಿದೆ. ಏರ್ ಇಂಡಿಯಾ ಖರೀದಿಸುತ್ತಿರುವ ಟಾಟಾ ಕಂಪನಿಯು ಏರ್ ಇಂಡಿಯಾದ ಎಲ್ಲಾ ಉದ್ಯೋಗಿಗಳನ್ನು ಒಂದು ವರ್ಷದ ಅವಧಿಗೆ ಉಳಿಸಿಕೊಳ್ಳಲಿದೆ. ಎರಡನೇ ವರ್ಷದಲ್ಲಿ ಯಾರನ್ನು ಉಳಿಸಿಕೊಳ್ಳಬೇಕು ಎಂಬ ಬಗ್ಗೆ ತೀರ್ಮಾನಿಸಲಿದೆ. ಈ ವೇಳೆ ಸ್ವಯಂ ನಿವೃತ್ತಿ ಯೋಜನೆಯನ್ನೂ (Voluntary Retirement Scheme – VRS) ಪ್ರಕಟಿಸಲು ಅವಕಾಶವಿದೆ ಎಂದು ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ‘ಮೇ ತಿಂಗಳ ಅಂತ್ಯದೊಳಗೆ ಏರ್ ಇಂಡಿಯಾ ಖಾಸಗೀಕರಣ ನಿಶ್ಚಿತ.. ಇಲ್ಲದಿದ್ದರೆ ಮುಚ್ಚಬೇಕಾಗುತ್ತದೆ’-ಸಚಿವ ಹರ್ದೀಪ್ ಸಿಂಗ್ ಪುರಿ
ಇದನ್ನೂ ಓದಿ: Air India: ಕಳೆದ 10 ವರ್ಷಗಳಲ್ಲಿ ನೀವು ಏರ್ ಇಂಡಿಯಾಗೆ ಖಾಸಗಿ ವಿವರ ನೀಡಿದ್ದರೆ, ಆ ಮಾಹಿತಿ ಸೋರಿಕೆಯಾಗಿದೆ ಎಚ್ಚರಾ!
Published On - 4:09 pm, Fri, 8 October 21