ಎದೆನೋವಿನಿಂದ ಸಾವು; ಶಾರ್ಜಾದಿಂದ ಲಕ್ನೋಗೆ ಹೊರಟ ವಿಮಾನ ಪಾಕಿಸ್ತಾನದಲ್ಲಿ ತುರ್ತು ಭೂಸ್ಪರ್ಶ

| Updated By: Lakshmi Hegde

Updated on: Mar 02, 2021 | 2:23 PM

Air Indigo: ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಡಿಗೋ ಸಿಬ್ಬಂದಿ, ನಮ್ಮ ಎಲ್ಲಾ ಪ್ರಯತ್ನದ ನಂತರವೂ ಆ ವ್ಯಕ್ತಿಯನ್ನು ಉಳಿಸಿಕೊಳ್ಳಲಾಗಿಲ್ಲ ಎಂದು ತಿಳಿಸಿದ್ದಾರೆ. ಭಾರತಕ್ಕೆ ಹೊರಟಿದ್ದ ವಿಮಾನ ಈ ಕಾರಣದಿಂದಾಗಿ ಪಾಕಿಸ್ತಾನದಲ್ಲಿ ಎರಡು ಗಂಟೆ ಕಾಲ ಉಳಿಯಬೇಕಾಗಿ ಬಂದು, ನಂತರ ಮತ್ತೆ ಭಾರತದತ್ತ ಬಂದಿದೆ.

ಎದೆನೋವಿನಿಂದ ಸಾವು; ಶಾರ್ಜಾದಿಂದ ಲಕ್ನೋಗೆ ಹೊರಟ ವಿಮಾನ ಪಾಕಿಸ್ತಾನದಲ್ಲಿ ತುರ್ತು ಭೂಸ್ಪರ್ಶ
ಸಂಗ್ರಹ ಚಿತ್ರ
Follow us on

ಕರಾಚಿ: ಶಾರ್ಜಾದಿಂದ ಲಕ್ನೋಗೆ ಬರುತ್ತಿದ್ದ ಇಂಡಿಗೋ ಸಂಸ್ಥೆಗೆ ಸೇರಿದ 6E1412 ಸಂಖ್ಯೆಯ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಎದೆನೋವು ಕಾಣಿಸಿಕೊಂಡ ಕಾರಣ ತಕ್ಷಣ ಎಚ್ಚೆತ್ತ ಸಿಬ್ಬಂದಿ ಕರಾಚಿಯಲ್ಲಿ ವಿಮಾನವನ್ನು ತುರ್ತಾಗಿ ಇಳಿಸಿದ್ದಾರೆ. ಆದರೆ, ದುರದೃಷ್ಟವಶಾತ್​ ಎದೆನೋವಿಗೆ ಒಳಗಾದ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಡಿಗೋ ಸಿಬ್ಬಂದಿ, ನಮ್ಮ ಎಲ್ಲಾ ಪ್ರಯತ್ನದ ನಂತರವೂ ಆ ವ್ಯಕ್ತಿಯನ್ನು ಉಳಿಸಿಕೊಳ್ಳಲಾಗಿಲ್ಲ ಎಂದು ತಿಳಿಸಿದ್ದಾರೆ. ಭಾರತಕ್ಕೆ ಹೊರಟಿದ್ದ ವಿಮಾನ ಈ ಕಾರಣದಿಂದಾಗಿ ಪಾಕಿಸ್ತಾನದಲ್ಲಿ ಎರಡು ಗಂಟೆ ಕಾಲ ಉಳಿಯಬೇಕಾಗಿ ಬಂದು, ನಂತರ ಮತ್ತೆ ಭಾರತದತ್ತ ಬಂದಿದೆ.

ದುಬೈನ ಶಾರ್ಜಾದಿಂದ ಹೊರಟಿದ್ದ ಇಂಡಿಗೋ ವಿಮಾನ ಇಂದು ಮುಂಜಾನೆ ಹೊತ್ತಿಗೆ ಪಾಕಿಸ್ತಾನ ತಲುಪಿತ್ತು. ಆ ವೇಳೆಯಲ್ಲಿ ಪ್ರಯಾಣಿಕರೊಬ್ಬರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತಾದರೂ ಆರೋಗ್ಯ ಸ್ಥಿತಿ ಹದಗೆಡುತ್ತಿತ್ತು.  ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಂಡ ಪೈಲಟ್ ಮತ್ತು ವಿಮಾನ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡು, ವಿಮಾನ ತುರ್ತು ಭೂಸ್ಪರ್ಶಕ್ಕಾಗಿ ಪಾಕಿಸ್ತಾನ ಏರ್​ ಟ್ರಾಫಿಕ್​ ಕಂಟ್ರೋಲರ್​ ಅನುಮತಿ ಕೋರಿದ್ದಾರೆ. ಒಪ್ಪಿಗೆ ಸಿಕ್ಕ ಕೂಡಲೇ ಕರಾಚಿಯಲ್ಲಿ ಲ್ಯಾಂಡ್ ಮಾಡಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.   ಅಲ್ಲದೆ, ಕರಾಚಿ ಏರ್​ಪೋರ್ಟ್​ ವೈದ್ಯಕೀಯ ತಂಡ ಪ್ರಯಾಣಿಕಿಗೆ ಚಿಕಿತ್ಸೆ ನೀಡಲು ಮುಂದಾದರೂ, ಅಷ್ಟರಲ್ಲಾಗಲೇ ಜೀವ ಹೋಗಿತ್ತು ಎನ್ನಲಾಗಿದೆ. ಪ್ರಯಾಣಿಕನ ಸಾವಿಗೆ ಇಂಡಿಗೋ ಏರ್​ಲೈನ್ ಸಂತಾಪ ವ್ಯಕ್ತಪಡಿಸಿದೆ.

ಇತ್ತೀಚೆಗೆ ಕೋಲ್ಕತ್ತದಿಂದ ಅಜೆರ್ಬೈಜಾನ್ ರಾಜಧಾನಿ ಬಾಕುಗೆ ಹೊರಟಿದ್ದ ಏರ್​ ಆ್ಯಂಬುಲೆನ್ಸ್​ವೊಂದು ತಾಂತ್ರಿಕ ದೋಷದಿಂದ ಇಸ್ಲಮಾಬಾದ್​ ಏರ್​ಪೋರ್ಟ್​ನಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.

ಇದನ್ನೂ ಓದಿ: ಹಾಸನದಲ್ಲಿ ಹಾರಲಿವೆ ಲೋಹದ ಹಕ್ಕಿಗಳು: ವಿಮಾನ ನಿಲ್ದಾಣ ಕಾಮಗಾರಿಗೆ ಸ್ಥಳ ಪರಿಶೀಲನೆ

 

Published On - 12:36 pm, Tue, 2 March 21