ಹಾಸನದಲ್ಲಿ ಹಾರಲಿವೆ ಲೋಹದ ಹಕ್ಕಿಗಳು: ವಿಮಾನ ನಿಲ್ದಾಣ ಕಾಮಗಾರಿಗೆ ಸ್ಥಳ ಪರಿಶೀಲನೆ

ಹಾಸನದಲ್ಲಿ ಹಾರಲಿವೆ ಲೋಹದ ಹಕ್ಕಿಗಳು: ವಿಮಾನ ನಿಲ್ದಾಣ ಕಾಮಗಾರಿಗೆ ಸ್ಥಳ ಪರಿಶೀಲನೆ
ವಿಮಾನ ನಿಲ್ದಾಣಕ್ಕೆ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು

ವಿಮಾನ ನಿಲ್ದಾಣ ಚಾಲನೆಗೆ ಮುಹೂರ್ತ ನಿಗದಿಯಾಗಿದ್ದು, ಮೂರು ದಶಕಗಳಿಂದ ಜಿಲ್ಲೆಯ ಜನರು ನಿರೀಕ್ಷೆಯಿಂದ ಕಾಯುತ್ತಿದ್ದ ಒಂದು ವಿಮಾಣ ನಿಲ್ದಾಣ ಬೇಕೂ ಎನ್ನುವ ಕೂಗು ಕಡೆಗೂ ಗಿರಿ ಮುಟ್ಟಿದೆ. ನರಿ ಕೂಗು ಗಿರಿ ಮುಟ್ಟೀತೆ ಎಂದು ಆಸೆಯನ್ನೇ ಬಿಟ್ಟಿದ್ದ ಜನರ ಕೂಗು ಕಡೆಗೂ ಸರ್ಕಾರದ ಕಣ್ಣು ತೆರೆಸಿದೆ.

sandhya thejappa

| Edited By: sadhu srinath

Mar 01, 2021 | 4:04 PM


ಹಾಸನ: ಮಾಜಿ ಪ್ರಧಾನಿಗಳ ಜಿಲ್ಲೆಯಾದರೂ, ಪ್ರವಾಸೋದ್ಯಮದಲ್ಲಿ ವಿಶ್ವವಿಖ್ಯಾತ ತಾಣಗಳಿದ್ದರೂ, ಪ್ರಕೃತಿ ಪ್ರವಾಸೋದ್ಯಮದಲ್ಲಿ ಜಗತ್ತಿನ ಜನರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದರೂ ಜಿಲ್ಲೆಗೆ ವಿಮಾನ ನಿಲ್ದಾಣ ಇಲ್ಲಾ ಎನ್ನುವ ಕೊರಗು ಜಿಲ್ಲೆಯ ಜನರಿಗಷ್ಟೇ ಅಲ್ಲಾ ಅದಕ್ಕಾಗಿ ಪ್ರಯತ್ನ ನಡೆಸುತ್ತಿದ್ದ ಜಿಲ್ಲೆಯ ಜನ ಪ್ರತಿನಿಧಿಗಳಿಗೂ ಇತ್ತು. ಭೂ ಸ್ವಾಧೀನ ಆಗಿದ್ದರೂ ಮೂರು ದಶಕ ಮೂಲೆಗುಂಪಾಗಿದ್ದ ಯೋಜನೆ ಇನ್ನೇನು ಜಾರಿ ಆಗುತ್ತದೆ ಎನ್ನುವಾಗ ವಿಮಾನ ನಿಲ್ದಾಣಕ್ಕೆ ಅಡ್ಡಿಯಾಗಿದ್ದ ಹೈಟೆನ್ಷನ್ ಲೈನ್ ತೊಡಕಾಗಿತ್ತು. ಈಗ ಎಲ್ಲಾ ಅಡೆತಡೆಗಳು ಮುಗಿದಿದೆ. ವಿಮಾನ ನಿಲ್ದಾಣ ಕಾಮಗಾರಿಗೆ ಅಧಿಕಾರಿಗಳು ಸ್ಥಳ ಪರಿಶೀಲನೆಯನ್ನೂ ನಡೆಸಿದ್ದು, ಲೋಹದ ಹಕ್ಕಿ ಹಾರಲಿದೆಯಾ ಎನ್ನುವ ನಿರೀಕ್ಷೆ ಜನರಲ್ಲಿ ಗರಿಗೆದರಿದೆ.

ಕಡೆಗೂ ಹಾಸನ ವಿಮಾನ ನಿಲ್ದಾಣ ಚಾಲನೆಗೆ ಮುಹೂರ್ತ ನಿಗದಿಯಾಗಿದ್ದು, ಬರೊಬ್ಬರಿ ಮೂರು ದಶಕಗಳಿಂದ ಜಿಲ್ಲೆಯ ಜನರು ನಿರೀಕ್ಷೆಯಿಂದ ಕಾಯುತ್ತಿದ್ದ ಒಂದು ವಿಮಾಣ ನಿಲ್ದಾಣ ಬೇಕೂ ಎನ್ನುವ ಕೂಗು ಕಡೆಗೂ ಗಿರಿ ಮುಟ್ಟಿದೆ. ನರಿ ಕೂಗು ಗಿರಿ ಮುಟ್ಟೀತೆ ಎಂದು ಆಸೆಯನ್ನೇ ಬಿಟ್ಟಿದ್ದ ಜನರ ಕೂಗು ಕಡೆಗೂ ಸರ್ಕಾರದ ಕಣ್ಣು ತೆರೆಸಿದೆ. ಭೂ ಸ್ವಾಧೀನವಾಗಿ ಎರಡು ದಶಕಗಳೆ ಕಳೆದರೂ ಜಾರಿಯಾಗದೆ ಮೂಲೆ ಗುಂಪಾಗಿದ್ದ ಯೋಜನೆಯನ್ನು ಇದೀಗ ಜಾರಿಗೆ ತರಲು ಮುಂದಾಗಿರುವ ರಾಜ್ಯ ಸರ್ಕಾರ ಅಧಿಕಾರಿಗಳ ತಂಡದ ಮೂಲಕ ಪರಿಶೀಲನೆ ನಡೆಸಿದ್ದು, ಶೀಘ್ರವಾಗಿ ಕಾಮಗಾರಿ ಕೈಗೆತ್ತಿಕೊಳ್ಳುವ ಚಿಂತನೆ ನಡೆಸಿದೆ.

ದೂರವಾದ ಹೈಟೆನ್ಷನ್ ಲೈನ್ ಆತಂಕ
ಜಿಲ್ಲೆಯ ಹೊರವಲಯದ ಬೂವನಹಳ್ಳಿ ಬಳಿ ಒಟ್ಟು 456 ಎಕೆರೆ ಭೂ ಸ್ವಾಧೀನ ಆಗಿದೆ. ಎಲ್ಲರಿಗೂ ಭೂ ಪರಿಹಾರವನ್ನೂ ನೀಡಿಯಾಗಿದೆ. ಈಗ ಕಾಮಗಾರಿ ಆರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ರಾಜ್ಯ ಮೂಲ ಸೌಲಭ್ಯ ಅಭಿವೃದ್ದಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹಲ್ ಇತರೆ ಹಿರಿಯ ಅದಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ವಿಮಾನ ನಿಲ್ದಾಣಕ್ಕೆ ಇದ್ದ ಹೈಟೆನ್ಷನ್ ಲೈನ್ ಆತಂಕ ದೂರವಾಗಿದೆ. ರಾಜ್ಯದಲ್ಲಿ ಗುಲ್ಬರ್ಗ, ಬೀದರ್ ವಿಮಾನ ನಿಲ್ದಾಣ ಕಾಮಗಾರಿ ಬೇಗನೆ ಮುಗಿದಿದೆ, ವಿಜಯಪುರ ಕಾರವಾರದಲ್ಲಿ ಶುರುವಾಗಿದೆ. ಶಿವಮೊಗ್ಗದಲ್ಲಿಯೂ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಇಷ್ಟೊಂದು ವೇಗವಾಗಿ ಕಾಮಗಾರಿ ಎಂದೂ ಆಗಿಲ್ಲ. ಹಾಸನದಲ್ಲಿಯೂ ಕೂಡ ಕಾಮಗಾರಿ ಚಾಲನೆ ಬಗ್ಗೆ ಚಿಂತನೆಯಿದ್ದು, ಶೀಘ್ರವೇ ಸಿಹಿ ಸುದ್ದಿ ಸಿಗಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹಲ್ ತಿಳಿಸಿದ್ದಾರೆ.

2006ರಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಅಂದಿನ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ 456 ಎಕೆರೆ ಭೂಮಿ ಸ್ವಾಧೀನ ಪಡಿಸಿಕೊಂಡಿದ್ದರು. ಬಳಿಕ ಬಂದ ಸರ್ಕಾರಗಳು ಯೋಜನೆಗೆ ಅನುದಾನ ನೀಡದ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭವೇ ಆಗಲಿಲ್ಲ. ಮತ್ತೆ 2018ರಲ್ಲಿ ಕಾಂಗ್ರೇಸ್, ಜೆಡಿಎಸ್ ಮೈತ್ರಿ ಸರ್ಕಾರ ಬಂದ ಬಳಿಕ ಲೋಕೋಪಯೋಗಿ ಇಲಾಖೆ ವತಿಯಿಂದ ಕಾಮಗಾರಿ ಜಾರಿಗೆ ತೀರ್ಮಾನಿಸಿ ಮತ್ತೆ ಹೊಸದಾಗಿ 183 ಎಕರೆ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಮತ್ತೆ ಈ ಸರ್ಕಾರ ಪತನದ ಬಳಿಕ ಯೋಜನೆ ಮೂಲೆ ಗುಂಪಾಗಿತ್ತು.

ಯಡಿಯೂರಪ್ಪಗೆ ಮಾಜಿ ಪ್ರಧಾನಿ ಮನವಿ
ಸ್ವತಃ ಮಾಜಿ ಪ್ರಧಾನಿ ದೇವೇಗೌಡರೇ ನನ್ನ ಜೀವಿತಾವಧಿಯಲ್ಲಿ ಯೋಜನೆ ಮುಗಿಸಿ ನೀವೇ ಉದ್ಘಾಟನೆ ಮಾಡಿ ಎಂದು ಯಡಿಯೂರಪ್ಪನವರಿಗೆ ಮನವಿ ಮಾಡಿದ್ದರು. ಹಾಗಾಗಿ ಸರ್ಕಾರ ಹೊಸದಾಗಿ 183 ಎಕೆರೆ ಭೂ ಸ್ವಾದೀನ ಕೈಬಿಟ್ಟು ಇರುವ 456 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ಮಾಡಲು ತಯಾರಿ ಮಾಡಿದೆ. ವಿಮಾನ ನಿಲ್ದಾಣವಾದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿರುವ ಬೇಲೂರು, ಹಳೇಬೀಡು ಪ್ರವಾಸೋದ್ಯಮ ಮತ್ತಷ್ಟು ಉತ್ತೇಜನ ಆಗಲಿದೆ. ಜೊತೆಗೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಕಾಫಿ, ಕಾಳು ಮೆಣಸು ರಫ್ತಿಗೂ ಸಹಕಾರಿ ಆಗಲಿದೆ ಎನ್ನುವ ನಿರೀಕ್ಷೆ ಹೆಚ್ಚಿದೆ.

ವಿಮಾನ ನಿಲ್ದಾಣಕ್ಕೆ ದೊಡ್ಡ ಅಡ್ಡಿಯಾಗಿದ್ದ ವಿದ್ಯುತ್ ಇಲಾಖೆಯ ಹೈಟೆನ್ಷನ್ ಲೈನ್ ಅನ್ನು 20 ಕೋಟಿ ವೆಚ್ಚದಲ್ಲಿ ಸ್ಥಳಾಂತರ ಮಾಡುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು ಒಟ್ಟು 68 ಬೃಹತ್ ಕಂಬಗಳನ್ನ ಸ್ಥಳಾಂತರ ಮಾಡಲು ಕಾಮಗಾರಿ ಆರಂಭಗೊಂಡಿದೆ. ಈ ಲೈನ್ ಹೋಗುವ ಮಾರ್ಗದ ಭೂ ಮಾಲೀಕರಿಗೆ ಪರಿಹಾರ ನೀಡಿದ ಕೂಡಲೆ ಸಂಪೂರ್ಣ ಕಾಮಗಾರಿ ಮುಗಿಯಲಿದೆ ಎಂದು ವಿದ್ಯುತ್ ಇಲಾಖೆ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ

Karnataka Budget 2021: ರಾಜ್ಯ ಸರ್ಕಾರದ ಆದಾಯಕ್ಕೆ ಹೇಗೆಲ್ಲ ಬಿದ್ದಿದೆ ಕತ್ತರಿ?

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರ ತತ್ವದಡಿ ತೈಲ ಬೆಲೆ ಇಳಿಕೆ ಮಾಡಬೇಕಿದೆ: ಆರ್​ಬಿಐ ಶಕ್ತಿಕಾಂತ್ ದಾಸ್


Follow us on

Related Stories

Most Read Stories

Click on your DTH Provider to Add TV9 Kannada