
ಪುಣೆ, ಜನವರಿ 28: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ಅಧ್ಯಕ್ಷ ಅಜಿತ್ ಪವಾರ್ (Ajit Pawar) ಸೇರಿದಂತೆ ಒಟ್ಟು ಐವರು ಪ್ರಯಾಣಿಸುತ್ತಿದ್ದ ವಿಮಾನವೊಂದು ಇಂದು ಬೆಳಗ್ಗೆ ಮಹಾರಾಷ್ಟ್ರದ ಪುಣೆಯಲ್ಲಿ ಅಪಘಾತಕ್ಕೀಡಾಗಿ ಎಲ್ಲರೂ ಸಾವನ್ನಪ್ಪಿದ್ದಾರೆ. ದೆಹಲಿ ಮೂಲದ ವಿಎಸ್‌ಆರ್ ವೆಂಚರ್ಸ್ ನಿರ್ವಹಿಸುತ್ತಿದ್ದ ಲಿಯರ್‌ಜೆಟ್ 46 ಮುಂಬೈನಿಂದ ಟೇಕ್ ಆಫ್ ಆದ 35 ನಿಮಿಷಗಳ ನಂತರ ಇಂದು ಬೆಳಿಗ್ಗೆ 8.45ರ ಸುಮಾರಿಗೆ ಪತನವಾಗಿದೆ.
ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಮಾತ್ರವಲ್ಲದೆ ಅಜಿತ್ ಪವಾರ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿ, ಫ್ಲೈಟ್ ಅಟೆಂಡೆಂಟ್ ಮತ್ತು ಇಬ್ಬರು ಸಿಬ್ಬಂದಿ (ಇಬ್ಬರು ಪೈಲಟ್ಗಳು) ಕೂಡ ಈ ದುರಂತದಲ್ಲಿ ಮೃತಪಟ್ಟಿದ್ದಾರೆ. ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ವಿಮಾನ ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ. ದಟ್ಟ ಮಂಜಿನಿಂದಾಗಿ ಏನೂ ಗೋಚರವಾಗದ ಪರಿಸ್ಥಿತಿ ಇದ್ದುದರಿಂದ ಪೈಲಟ್ ತುರ್ತು ಲ್ಯಾಂಡಿಂಗ್ಗೆ ಪ್ರಯತ್ನಿಸುತ್ತಿದ್ದರು.
ಇದನ್ನೂ ಓದಿ: ವಿಮಾನ ಪತನದಲ್ಲಿ ಅಜಿತ್ ಪವಾರ್ ಸಾವು: 2023ರಲ್ಲಿ ಕೂಡ ಈ ವಿಮಾನ ಪತನಗೊಂಡಿತ್ತು
ಆದರೆ, ಅಷ್ಟರಲ್ಲೇ ವಿಮಾನ ಅಪಘಾತಕ್ಕೀಡಾಗಿದೆ. ಪತನದ ಬಳಿಕ ವಿಮಾನಕ್ಕೆ ಬೆಂಕಿ ತಗುಲಿದೆ. ಇದರಿಂದ ವಿಮಾನದಲ್ಲಿದ್ದ ಎಲ್ಲರ ದೇಹವೂ ಛಿದ್ರವಾಗಿತ್ತು. ಅದನ್ನು ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿತ್ತು. ಈ ವೇಳೆ ಅಜಿತ್ ಪವಾರ್ ಅವರ ದೇಹವನ್ನು ಅವರ ಕೈಗಡಿಯಾರದಿಂದ ಗುರುತಿಸಲಾಗಿದೆ. ವಿಪರ್ಯಾಸವೆಂದರೆ ಎನ್‌ಸಿಪಿಯ ಅಧಿಕೃತ ಚುನಾವಣಾ ಚಿಹ್ನೆ ಕೂಡ ಗಡಿಯಾರ.
ಮಹಾರಾಷ್ಟ್ರದಲ್ಲಿ ಫೆಬ್ರವರಿ 5ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಪ್ರಚಾರದ ಭಾಗವಾಗಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲು 66 ವರ್ಷದ ಅಜಿತ್ ಪವಾರ್ ಬಾರಾಮತಿಗೆ ಪ್ರಯಾಣಿಸುತ್ತಿದ್ದರು. ಅಜಿತ್ ಪವಾರ್ ರಾಜ್ಯಸಭೆಯ ಸದಸ್ಯರಾದ ತಮ್ಮ ಪತ್ನಿ ಸುನೇತ್ರಾ ಮತ್ತು ಇಬ್ಬರು ಪುತ್ರರಾದ ಪಾರ್ಥ್ ಮತ್ತು ಜೇ ಅವರನ್ನು ಅಗಲಿದ್ದಾರೆ.
ಇದನ್ನೂ ಓದಿ: ಅಜಿತ್ ಪವಾರ್ ಆಸ್ತಿಮೌಲ್ಯ 120 ಕೋಟಿಗೂ ಅಧಿಕ; ಮನೆ, ಕಾರು, ಬಾಂಡ್, ಠೇವಣಿ, ಇನ್ಷೂರೆನ್ಸ್ ಇತ್ಯಾದಿ ಅವರ ಆಸ್ತಿ ವಿವರ
ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಈಗಾಗಲೇ ತನ್ನ ತನಿಖೆಯನ್ನು ಆರಂಭಿಸಿದೆ. ಫ್ಲೈಟ್ ಡೇಟಾ ರೆಕಾರ್ಡರ್ ಮತ್ತು ಕಾಕ್‌ಪಿಟ್ ಧ್ವನಿ ರೆಕಾರ್ಡರ್ ವಿಮಾನದ ಅಂತಿಮ ಕ್ಷಣಗಳನ್ನು ಸ್ಥಾಪಿಸುವಲ್ಲಿ ನಿರ್ಣಾಯಕವಾಗಿರುತ್ತದೆ. ಅಜಿತ್ ಪವಾರ್ ಮಹಾರಾಷ್ಟ್ರದ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದರು. ಅವರು ಉಪಮುಖ್ಯಮಂತ್ರಿಯಾಗಿ ಆರನೇ ಅವಧಿಗೆ ಸೇವೆ ಸಲ್ಲಿಸುತ್ತಿದ್ದರು. ಆದರೆ, ಅವರಿಂದು ದುರಂತವಾಗಿ ಮೃತಪಟ್ಟಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ