ಲಖಿಂಪುರ ಖೇರಿ ಹಿಂಸಾಚಾರದ ಪ್ರಮುಖ ಆರೋಪಿಯಾಗಿರುವ ಆಶೀಶ್ ಮಿಶ್ರಾ (ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಅಜಯ್ ಮಿಶ್ರಾ ತೇನಿ ಪುತ್ರ)ರಿಗೆ ಅಲಹಾಬಾದ್ ಹೈಕೋರ್ಟ್ನ ಲಖನೌ ಪೀಠ ಇಂದು ಜಾಮೀನು ನೀಡಿದೆ. 2021ರ ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ, ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ (ಈಗ ರದ್ದಾಗಿವೆ) ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ರೈತರ ಮೇಲೆ ವಾಹನ ಹರಿದಿತ್ತು. ಇದರಲ್ಲಿ ಒಬ್ಬ ರೈತ ಮೃತಪಟ್ಟಿದ್ದರೆ, ನಂತರ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಮೃತಪಟ್ಟಿದ್ದರು. ಈ ವಾಹನ ಆಶೀಶ್ ಮಿಶ್ರಾರ ಬೆಂಗಾವಲು ವಾಹನ ಎಂಬುದು ವೈರಲ್ ಆದ ವಿಡಿಯೋಗಳಿಂದ ಗೊತ್ತಾಗಿದ್ದು. ಅಕ್ಟೋಬರ್ 9ರಂದು ಆಶೀಶ್ ಮಿಶ್ರಾ ಬಂಧನವಾಗಿತ್ತು. ನಾಲ್ಕು ತಿಂಗಳ ನಂತರ ಅವರಿಗೆ ಜಾಮೀನು ಸಿಕ್ಕಿದೆ.
ಅಕ್ಟೋಬರ್ 3ರಂದು ಲಖಿಂಪುರ ಖೇರಿಗೆ ಬಿಜೆಪಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಭೇಟಿಕೊಟ್ಟಿದ್ದರು. ಈ ವೇಳೆ ಮೌನವಾಗಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿದಿತ್ತು. ಈ ಘಟನೆ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿತ್ತು. ಇದರಲ್ಲಿ ಪತ್ರಕರ್ತನೊಬ್ಬ, ನಾಲ್ವರು ರೈತರು, ಮೂವರು ಬಿಜೆಪಿ ಕಾರ್ಯಕರ್ತರು ಮೃತಪಟ್ಟಿದ್ದರು. ರೈತರಿಗೆ ಡಿಕ್ಕಿ ಹೊಡೆದ ಕಾರಿನಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ಇದ್ದಿದ್ದನ್ನು ಕಣ್ಣಾರೆ ನೋಡಿದ್ದೇವೆ. ಇವರೆಲ್ಲ ಕಾರನ್ನು ಹರಿಸಿದ್ದಲ್ಲದೆ ಗುಂಡಿನ ದಾಳಿಯನ್ನೂ ನಡೆಸಿದ್ದಾರೆ ಎಂದು ಸ್ಥಳದಲ್ಲಿದ್ದ ರೈತರು ಹೇಳಿದ್ದರು. ವೈರಲ್ ಆದ ವಿಡಿಯೋದಲ್ಲಿ ಒಬ್ಬರು ಕಾರಿನಿಂದ ಇಳಿದು ಓಡಿದ ದೃಶ್ಯ ಕಂಡುಬಂದಿತ್ತು. ಅದಯ ಆಶಿಶ್ ಮಿಶ್ರಾ ಎಂದೇ ರೈತರು ಪ್ರತಿಪಾದಿಸಿದ್ದರು. ಬಳಿಕ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರ ಎಸ್ಐಟಿಯನ್ನೂ ರಚಿಸಿತ್ತು.
ಆಶೀಶ್ ಮಿಶ್ರಾ ತಮ್ಮ ವಿರುದ್ಧದ ಆರೋಪ ಅಲ್ಲಗಳೆದಿದ್ದರು. ನಾನು ಘಟನೆ ನಡೆದಾಗ ಬನ್ವೀರ್ಪುರದಲ್ಲಿ ಇದ್ದೆ. ಉಪಮುಖ್ಯಮಂತ್ರಿಯನ್ನು ಕರೆದುಕೊಂಡು ಬರಲು ನಮ್ಮ ಮೂರು ವಾಹನಗಳು ಹೋಗಿದ್ದವು. ಆದರೆ ಅವುಗಳ ಮೇಲೆ ರೈತರು ಕಲ್ಲು ಎಸೆದು, ದಾಳಿ ಮಾಡಿದ್ದಾರೆ. ಅಷ್ಟೇ ಅಲ್ಲ, ಕಾರಿಗೆ ಬೆಂಕಿಯನ್ನೂ ಹಚ್ಚಿದ್ದಾರೆ. ಮೂರ್ನಾಲ್ಕು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದೂ ಅವರು ಆರೋಪಿಸಿದ್ದರು. ಆದರೆ ಆಶೀಶ್ ಮಿಶ್ರಾ ವಿರುದ್ಧ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದರು. ಆದರೆ ಅವರು ಸಹಕರಿಸಲಿಲ್ಲ ಎಂಬ ಕಾರಣಕ್ಕೆ ಅರೆಸ್ಟ್ ಮಾಡಿದ್ದಾಗಿ ಸಹರಾನ್ಪುರ ಡಿಐಜಿ ಉಪೇಂದ್ರ ಅಗರ್ವಾಲ್ ತಿಳಿಸಿದ್ದರು.
ಈ ಮಧ್ಯೆ ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಸುಮೊಟೊ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಆರೋಪಿಗಳನ್ನು ಬಂಧಿಸಿ ಶಿಕ್ಷೆ ಕೊಡಲು ತಡ ಮಾಡುತ್ತಿರುವುದು ಯಾಕೆ? ಒಬ್ಬ ಸಾಮಾನ್ಯ ವ್ಯಕ್ತಿಯ ವಿರುದ್ಧ ಕೊಲೆ ಆರೋಪ ದಾಖಲಾದರೆ ಇಷ್ಟೇ ವಿಳಂಬ ಮಾಡುತ್ತೀರಾ ಎನ್ನುವ ಮೂಲಕ, ಆಶೀಶ್ ಮಿಶ್ರಾ ವಿರುದ್ಧ ಹತ್ಯೆ ದೂರು ದಾಖಲಾಗಿದ್ದರೂ, ಅವರನ್ಯಾಕೆ ಅರೆಸ್ಟ್ ಮಾಡುತ್ತಿಲ್ಲ ಎಂದು ಪ್ರಶ್ನಿಸಿತ್ತು. ಇಷ್ಟರ ಮಧ್ಯೆ ಅಕ್ಟೋಬರ್ 3ರಂದು ರೈತರ ಮೇಲೆ ಗುಂಡು ಹಾರಿದ್ದು, ಅಂಕಿತ್ ದಾಸ್ ಮತ್ತು ಆಶೀಶ್ ಮಿಶ್ರಾರ ಬಂದೂಕುಗಳಿಂದ. ಪರವಾನಗಿ ಹೊಂದಿರುವ ಬಂದೂಕುಗಳು ಇವು ಎಂದು ನವೆಂಬರ್ 9ರಂದು ವಿಧಿ ವಿಜ್ಞಾನ ಪ್ರಯೋಗಾಲಯ ದೃಢಪಡಿಸಿತ್ತು.
ಇದನ್ನೂ ಓದಿ: ದೇಶದ ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣೆಗೆ ಬಿಜೆಪಿ ಸರ್ಕಾರ ಬದ್ಧ; ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿ ಭಾಷಣ
Published On - 2:00 pm, Thu, 10 February 22