Siddique Kappan ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್​​ಗೆ ಜಾಮೀನು

| Updated By: ರಶ್ಮಿ ಕಲ್ಲಕಟ್ಟ

Updated on: Dec 23, 2022 | 6:27 PM

ಮಲಯಾಳಂ ನ್ಯೂಸ್ ಪೋರ್ಟಲ್ ಅಝಿಮುಖಂನ ವರದಿಗಾರ ಮತ್ತು ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ (ಕೆಯುಡಬ್ಲ್ಯೂಜೆ) ನ ದೆಹಲಿ ಘಟಕದ ಕಾರ್ಯದರ್ಶಿ ಕಪ್ಪನ್ ಅವರನ್ನು 2020 ರ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದಲ್ಲಿ ಇತರ ಮೂವರ ಜತೆ ಬಂಧಿಸಲಾಗಿತ್ತು

Siddique Kappan ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್​​ಗೆ ಜಾಮೀನು
ಸಿದ್ದಿಕ್ ಕಪ್ಪನ್
Follow us on

ಎರಡು ವರ್ಷಗಳಿಂದ ಉತ್ತರ ಪ್ರದೇಶ ಜೈಲಿನಲ್ಲಿರುವ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್​​ಗೆ (Siddique Kappan) ಅಲಹಾಬಾದ್ ಹೈಕೋರ್ಟ್ (Allahabad High Court) ಶುಕ್ರವಾರ  ಜಾಮೀನು ಅನುಮತಿಸಿದೆ. ಜಾರಿ ನಿರ್ದೇಶನಾಲಯ (ED) ನಿಂದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಪ್ರಕರಣಕ್ಕೆ ಸಂಬಂಧಿಸಿದಂತೆ ಕಪ್ಪನ್ ಅವರಿಗೆ ಜಾಮೀನು ಮಂಜೂರು ಮಾಡಿದೆ ಎಂದು ಲೈವ್ ಲಾ ವರದಿ ಮಾಡಿದೆ. ಯುಎಪಿಎ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಈ ಹಿಂದೆ ಅವರಿಗೆ ಜಾಮೀನು ನೀಡಿತ್ತು, ಆದರೆ ಇಡಿ ಪ್ರಕರಣಕ್ಕಾಗಿ ಅವರು ಇನ್ನೂ ಜೈಲಿನಲ್ಲಿದ್ದರು. ಮಲಯಾಳಂ ನ್ಯೂಸ್ ಪೋರ್ಟಲ್ ಅಝಿಮುಖಂನ ವರದಿಗಾರ ಮತ್ತು ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ (ಕೆಯುಡಬ್ಲ್ಯೂಜೆ) ನ ದೆಹಲಿ ಘಟಕದ ಕಾರ್ಯದರ್ಶಿ ಕಪ್ಪನ್ ಅವರನ್ನು 2020 ರ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದಲ್ಲಿ ಇತರ ಮೂವರ ಜತೆ ಬಂಧಿಸಲಾಗಿತ್ತು. 19ರ ಹರೆಯದ ದಲಿತ ಯುವತಿಯ ಮೇಲೆ ಭೀಕರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ವರದಿ ಮಾಡಲು ಹೋಗುತ್ತಿದ್ದಾಗ ಇವರನ್ನು ಬಂಧಿಸಲಾಗಿತ್ತು. ಲಕ್ನೋ ನ್ಯಾಯಾಲಯ ಜಾಮೀನು  ನಿರಾಕರಿಸಿದ ನಂತರ ಕಪ್ಪನ್  ಹೈಕೋರ್ಟ್ ಮೆಟ್ಟಿಲೇರಿದ್ದು, ಏಕಪೀಠದ ನ್ಯಾಯಾಧೀಶ  ದಿನೇಶ್ ಕುಮಾರ್ ಸಿಂಗ್ ಅವರಿಗೆ ಜಾಮೀನು ನೀಡಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ ಆರೋಪಿಗಳ ವಿರುದ್ಧ ಇಡಿ ಪ್ರಾಸಿಕ್ಯೂಷನ್ ದೂರನ್ನು ಸಲ್ಲಿಸಿದ ನಂತರ ಈ ತಿಂಗಳ ಆರಂಭದಲ್ಲಿ ಲಕ್ನೋ ನ್ಯಾಯಾಲಯವು ಪಿಎಂಎಲ್‌ಎ ಪ್ರಕರಣದಲ್ಲಿ ಕಪ್ಪನ್ ಮತ್ತು ಇತರ ಆರು ಮಂದಿ ವಿರುದ್ಧ ಆರೋಪಗಳನ್ನು ರೂಪಿಸಿತ್ತು. ಕೆಎ ರವೂಫ್ ಶೆರೀಫ್, ಅತಿಕುರ್ ರೆಹಮಾನ್, ಮಸೂದ್ ಅಹ್ಮದ್, ಮೊಹಮ್ಮದ್ ಆಲಂ, ಅಬ್ದುಲ್ ರಜಾಕ್ ಮತ್ತು ಅಶ್ರಫ್ ಖಾದಿರ್ ಇತರ ಆರೋಪಿಗಳಾಗಿದ್ದಾರೆ,

ಆರೋಪಿಗಳು ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಅದರ ವಿದ್ಯಾರ್ಥಿ ವಿಭಾಗ – ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಸದಸ್ಯರು ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಸಂಸತ್ತಿನ ಚಳಿಗಾಲದ ಅಧಿವೇಶನ ಯಶಸ್ವಿಯಾಗಿ ಪೂರ್ಣಗೊಂಡಿದೆ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಕಪ್ಪನ್ ಅವರನ್ನು ಅಕ್ಟೋಬರ್ 2020 ರಲ್ಲಿ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು. ಯುವ ದಲಿತ ಮಹಿಳೆಯ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ನಂತರ ಉತ್ತರ ಪ್ರದೇಶದ ಹತ್ರಾಸ್‌ಗೆ ಇತರ ಮೂವರೊಂದಿಗೆ ತೆರಳುತ್ತಿದ್ದಾಗ ಭಯೋತ್ಪಾದನಾ-ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಆರೋಪ ಹೊರಿಸಲಾಯಿತು.

ಕಪ್ಪನ್ ಪ್ರದೇಶದಲ್ಲಿ ಶಾಂತಿ ಕದಡುವ ಸಂಚಿನ ಭಾಗವಾಗಿದೆ ಎಂದು ಪೊಲೀಸರು ಆರೋಪಿಸಿದರೆ, ಮಹಿಳೆಯನ್ನು ಒಳಗೊಂಡ ಪ್ರಕರಣದ ಬಗ್ಗೆ ವರದಿ ಮಾಡಲು ಹೋಗುವುದಾಗಿ ಅವರ ವಕೀಲರು ವಾದಿಸಿದ್ದಾರೆ. ಪೊಲೀಸರು ಕಪ್ಪನ್ ಅವರಿಂದ ಸ್ಮಾರ್ಟ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದು ಆರೋಪಿಗಳು ಶಾಂತಿ ಕದಡಲು ಅದನ್ನು ಬಯಸಿದ್ದರು ಎನ್ನಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 6:04 pm, Fri, 23 December 22