
ನವದೆಹಲಿ, ಅಕ್ಟೋಬರ್ 27: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಅಕ್ಟೋಬರ್ 12ರಂದು ಸುಪ್ರೀಂ ಕೋರ್ಟ್‌ಗೆ ಮೆರವಣಿಗೆಯಲ್ಲಿ ತೆರಳುವ ವೇಳೆ ಗರ್ಭಿಣಿ ಪತ್ರಕರ್ತೆಯನ್ನು ತಳ್ಳಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಹುಲ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡಬೇಕು ಮತ್ತು ಪತ್ರಕರ್ತೆಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿದೆ. ಈ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಇತರರಿಂದ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ಕೋರಿದೆ.
ಪ್ರಕರಣವನ್ನು ಪ್ರಸ್ತಾಪಿಸಿದ ಹಿರಿಯ ವಕೀಲ ಗೌರವ್ ಭಾಟಿಯಾ, ಬಾಕಿ ಇರುವ ಅರ್ಜಿಯೊಂದರಲ್ಲಿ ಈ ಮನವಿಯನ್ನು ಸಲ್ಲಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದ್ದರು. ಅರ್ಜಿಯ ಪ್ರಕಾರ, ಪತ್ರಕರ್ತೆಯನ್ನು ಗೇಟ್‌ನತ್ತ ಬಲವಾಗಿ ತಳ್ಳಲಾಗಿದ್ದು, ಇದರಿಂದ ಅವರು ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದಿದ್ದಾರೆ. ಬೀಳುವಾಗ ಕೈಗಳನ್ನು ನೆಲಕ್ಕೆ ಊರಿಕೊಂಡಿದ್ದರಿಂದ ಗಾಯಗಳಾಗಿವೆ ಎಂದು ದೂರಲಾಗಿದೆ. ಭದ್ರತಾ ಸಿಬ್ಬಂದಿ, ಪತ್ರಕರ್ತರು ಹಾಗೂ ಇತರರು ಇದ್ದ ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ಜನಸಂದಣಿಯಲ್ಲಿನ ನೂಕುನುಗ್ಗಲಿನಿಂದ ಈ ಘಟನೆ ಸಂಭವಿಸಿಲ್ಲ; ಉದ್ದೇಶಪೂರ್ವಕವಾಗಿ ಪತ್ರಕರ್ತೆಯನ್ನು ತಳ್ಳಲಾಗಿದೆ ಎಂಬುದು ಅರ್ಜಿಯಲ್ಲಿನ ಮತ್ತೊಂದು ಆರೋಪ. ಈ ವರ್ತನೆಯನ್ನು ನಿಲ್ಲಿಸುವಂತೆ ಪತ್ರಕರ್ತೆ ಸ್ಪಷ್ಟವಾಗಿ ಕೇಳಿಕೊಂಡಿದ್ದರು ಎಂದೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ರಾಹುಲ್ ಗಾಂಧಿಗೆ ಬಿಗ್ ರಿಲೀಫ್: ಅಮಿತ್ ಶಾ ವಿರುದ್ಧದ ಹೇಳಿಕೆ, ಮಾನನಷ್ಟ ಮೊಕದ್ದಮೆ ವಜಾಗೊಳಿಸಿದ ಕೋರ್ಟ್
ಅಕ್ಟೋಬರ್ 16ರಂದು ಗೌರವ್ ಭಾಟಿಯಾ ಅವರು ಈ ವಿಷಯವನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ಅಂದು ನ್ಯಾಯಾಲಯದ ಆವರಣದಲ್ಲಿ ರಾಹುಲ್ ಗಾಂಧಿ ಮಹಿಳಾ ಪತ್ರಕರ್ತೆಯನ್ನು ತಳ್ಳಿದ್ದಾರೆ ಎಂದು ಅವರು ಆರೋಪಿಸಿದ್ದರು. ಪತ್ರಕರ್ತೆ ಮೂರು ತಿಂಗಳ ಗರ್ಭಿಣಿಯಾಗಿದ್ದು, ಘಟನೆಯ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು ಎಂದು ಭಾಟಿಯಾ ಪೀಠಕ್ಕೆ ತಿಳಿಸಿದ್ದರು. ಈ ವಿಚಾರವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದರು. ಇದೀಗ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿರುವ ಪೀಠವು ರಾಹುಲ್ ಗಾಂಧಿ ಸೇರಿದಂತೆ ಇತರ ಪ್ರತಿವಾದಿಗಳಿಂದ ಪ್ರತಿಕ್ರಿಯೆ ಕೋರಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.