Amarinder Singh: ನಾನು ಪಂಜಾಬ್ ಮಾಜಿ ಮುಖ್ಯಮಂತ್ರಿಯಲ್ಲ, ನನ್ನ ಬಿಟ್ಟುಬಿಡಿ; ಅಮರೀಂದರ್ ಸಿಂಗ್ ಹೀಗೆ ಹೇಳಿದ್ದೇಕೆ?

| Updated By: ಸುಷ್ಮಾ ಚಕ್ರೆ

Updated on: Sep 30, 2021 | 4:47 PM

ಬಹುತೇಕ ಜನರು ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಬದಲಾಗಿ ಭಾರತದ ಫುಟ್​ಬಾಲ್ ತಂಡದ ಗೋಲ್​ಕೀಪರ್ ಅಮರೀಂದರ್ ಸಿಂಗ್ ಅವರನ್ನು ಟ್ವಿಟ್ಟರ್​ನಲ್ಲಿ ಟ್ಯಾಗ್ ಮಾಡುತ್ತಿದ್ದಾರೆ. ಇಬ್ಬರ ಹೆಸರಿನ ಮುಂದೆಯೂ ಬ್ಲೂ ಟಿಕ್ ಇರುವುದು ಈ ಗೊಂದಲಕ್ಕೆ ಕಾರಣವಾಗಿದೆ.

Amarinder Singh: ನಾನು ಪಂಜಾಬ್ ಮಾಜಿ ಮುಖ್ಯಮಂತ್ರಿಯಲ್ಲ, ನನ್ನ ಬಿಟ್ಟುಬಿಡಿ; ಅಮರೀಂದರ್ ಸಿಂಗ್ ಹೀಗೆ ಹೇಳಿದ್ದೇಕೆ?
ಮಾಜಿ ಸಿಎಂ ಅಮರೀಂದರ್ ಸಿಂಗ್- ಗೋಲ್​ಕೀಪರ್ ಅಮರೀಂದರ್ ಸಿಂಗ್
Follow us on

ನವದೆಹಲಿ: ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕಾಂಗ್ರೆಸ್​ಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. 52 ವರ್ಷಗಳ ಕಾಲ ಕಾಂಗ್ರೆಸ್​ಲ್ಲಿದ್ದ ಅವರು ಇದೀಗ ಪಕ್ಷದ ವಿರುದ್ಧ ಅಸಮಾಧಾನಗೊಂಡು ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ. ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿದಾಗಿನಿಂದಲೂ ಸುದ್ದಿಯಲ್ಲಿರುವ ಅಮರೀಂದರ್ ಸಿಂಗ್ ಅವರಿಂದ ಭಾರತದ ರಾಷ್ಟ್ರೀಯ ಫುಟ್​ಬಾಲ್ ತಂಡದ ಗೋಲ್​ಕೀಪರ್​​ಗೆ ಭಾರೀ ತಲೆನೋವು ಶುರುವಾಗಿದೆ. ಮಾಜಿ ಸಿಎಂಗೂ ಗೋಲ್​ಕೀಪರ್​ಗೂ ಏನು ಸಂಬಂಧ? ಎಂದು ಅಚ್ಚರಿ ಪಡಬೇಡಿ. ಅಮರೀಂದರ್ ಸಿಂಗ್ ಎಂಬ ಹೆಸರೇ ಈ ತಲೆನೋವಿಗೆ ಕಾರಣವಾಗಿದೆ!

ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಅಮರೀಂದರ್ ಸಿಂಗ್ ಕುರಿತಾದ ಸುದ್ದಿಗಳೇ ತುಂಬಿಹೋಗಿವೆ. ಪಂಜಾಬ್ ನೂತನ ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ದೆಹಲಿಗೆ ತೆರಳಿದ್ದ ಅಮರೀಂದರ್ ಸಿಂಗ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಅದರ ಬೆನ್ನಲ್ಲೇ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅಮಿತ್ ಷಾ ಅವರನ್ನು ಕೂಡ ಭೇಟಿ ಮಾಡಿರುವುದರಿಂದ ಮಾಧ್ಯಮಗಳ ಕಣ್ಣು ಅವರ ಮೇಲೆ ನೆಟ್ಟಿದೆ.

ಮಾಧ್ಯಮಗಳು ಹಾಗೂ ಬೇರೆಯವರು ಅಮರೀಂದರ್ ಸಿಂಗ್ ಹೆಸರನ್ನು ಟ್ಯಾಗ್ ಮಾಡಿ ಟ್ವಿಟ್ಟರ್​ನಲ್ಲಿ ಅಪ್​ಡೇಟ್​ಗಳನ್ನು ಹಾಕುತ್ತಿದ್ದಾರೆ. ಆದರೆ, ಬಹುತೇಕ ಜನರು ಕ್ಯಾಪ್ಟನ್ ಅಮರೀಂದರ್ ಸಿಂಗ್ ಬದಲಾಗಿ ಭಾರತದ ಫುಟ್​ಬಾಲ್ ತಂಡದ ಗೋಲ್​ಕೀಪರ್ ಅಮರೀಂದರ್ ಸಿಂಗ್ ಅವರನ್ನು ಟ್ವಿಟ್ಟರ್​ನಲ್ಲಿ ಟ್ಯಾಗ್ ಮಾಡುತ್ತಿದ್ದಾರೆ. ಇಬ್ಬರ ಹೆಸರಿನ ಮುಂದೆಯೂ ಬ್ಲೂ ಟಿಕ್ ಇರುವುದು ಈ ಗೊಂದಲಕ್ಕೆ ಕಾರಣವಾಗಿದೆ.

ಈ ಬಗ್ಗೆ ಭಾರತದ ರಾಷ್ಟ್ರೀಯ ಫುಟ್​ಬಾಲ್ ತಂಡದ ಗೋಲ್​ಕೀಪರ್ ಅಮರೀಂದರ್ ಸಿಂಗ್ ಟ್ವೀಟ್ ಮಾಡಿದ್ದು, ನಾನು ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅಲ್ಲ. ನಾನು ಗೋಲ್​ ಕೀಪರ್ ಅಮರೀಂದರ್ ಸಿಂಗ್. ದಯವಿಟ್ಟು ನನ್ನನ್ನು ಟ್ಯಾಗ್ ಮಾಡಬೇಡಿ ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್, ನನ್ನ ಪ್ರೀತಿಯ ಕಿರಿಯ ಗೆಳೆಯನೇ, ನಿಮ್ಮನ್ನು ನೋಡಿದರೆ ನನಗೆ ಅನುಕಂಪ ಮೂಡುತ್ತಿದೆ. ನಿಮ್ಮ ಆಟ ಹಾಗೂ ವೃತ್ತಿಗೆ ಗುಡ್ ಲಕ್ ಎಂದಿದ್ದಾರೆ.

ಪಂಜಾಬ್​ನ ಮಾಜಿ ಸಿಎಂ ಅಮರೀಂದರ್ ಸಿಂಗ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿಯಾದ ಹಿನ್ನೆಲೆಯಲ್ಲಿ ಬಿಜೆಪಿ ಸೇರುವುದು ಪಕ್ಕಾ ಎನ್ನಲಾಗಿತ್ತು. ವೈಯಕ್ತಿಕ ಕೆಲಸದ ನಿಮಿತ್ತ ದೆಹಲಿಗೆ ಬಂದಿರುವುದಾಗಿ ಹೇಳಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಮರೀಂದರ್ ಸಿಂಗ್ ನಾನು ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಿರುವುದು ನಿಜ. ಆದರೆ, ನಾನು ಬಿಜೆಪಿಗೆ ಸೇರ್ಪಡೆಯಾಗುತ್ತಿಲ್ಲ. ನನಗೆ ಆಗಿರುವ ಅವಮಾನವನ್ನು ಸಹಿಸಲಾಗದೆ ಕಾಂಗ್ರೆಸ್​ಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: Amarinder Singh: ನಾನು ಬಿಜೆಪಿ ಸೇರುತ್ತಿಲ್ಲ, ಕಾಂಗ್ರೆಸ್​ಗೆ ರಾಜೀನಾಮೆ ನೀಡುತ್ತೇನೆ; ಅಮರೀಂದರ್ ಸಿಂಗ್ ಸ್ಪಷ್ಟನೆ

Amarinder Singh: ರಾಜೀವ್ ಗಾಂಧಿಯ ಗೆಳೆಯನಾಗಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸೇನೆ ಬಿಟ್ಟು ರಾಜಕೀಯಕ್ಕೆ ಬಂದಿದ್ದೇಕೆ?