ಕಾಶ್ಮೀರ: ಹಿಂದೂಗಳ ಪವಿತ್ರ ಕ್ಷೇತ್ರವಾದ ಅಮರನಾಥ ಯಾತ್ರೆ ಇಂದಿನಿಂದ (ಜೂನ್ 30) ಆರಂಭಗೊಳ್ಳುತ್ತಿದೆ. ಆನ್‌ಲೈನ್ ಮೂಲಕ ಈಗಾಗಲೇ 3 ಲಕ್ಷ ಭಕ್ತರು ಅಮರನಾಥ ಯಾತ್ರೆಗೆ (Amarnath Yatra) ನೋಂದಣಿ ಮಾಡಿಕೊಂಡಿದ್ದಾರೆ. ಈಗಾಗಲೇ ದಕ್ಷಿಣ ಕಾಶ್ಮೀರದ ಹಿಮಾಲಯ ಭಾಗದಲ್ಲಿ ಭಾರೀ ಭದ್ರತೆ ಒದಗಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಕೊರೋನಾ ಕಾರಣದಿಂದ ಕಳೆದ 2 ವರ್ಷ ಅಮರನಾಥ ಯಾತ್ರೆಗೆ ನಿರ್ಬಂಧ ಹೇರಲಾಗಿತ್ತು. ಈ ಬಾರಿ ಕೇಂದ್ರ ಸರ್ಕಾರ ಅಮರನಾಥ ಯಾತ್ರೆಗೆ ಅವಕಾಶ ಮಾಡಿಕೊಟ್ಟಿದೆ. ಇದರ ಜೊತೆಗೆ ಹಲವು ವಿಶೇಷ ಸೌಲಭ್ಯಗಳನ್ನು ನೀಡಿದೆ. ಯಾತ್ರೆ ಆರಂಭಗೊಂಡರೂ ನೋಂದಣಿ ಪ್ರಕ್ರಿಯೆ ಮುಂದುವರಿಯಲಿದೆ. ಈಗಲೂ ಭಕ್ತರಿಗೆ ಯಾತ್ರೆಗೆ ನೋಂದಣಿ ಮಾಡಲು ಅವಕಾಶವಿದೆ ಎಂದು ಅಮರನಾಥ ಯಾತ್ರಾ ಬೋರ್ಡ್ ಹೇಳಿದೆ.
ಎರಡು ದಾರಿಗಳ ಮೂಲಕ ಅಮರನಾಥ ಯಾತ್ರೆ ನಡೆಯಲಿದೆ. ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನ ನುವಾನ್‌ನಿದ 48 ಕಿಲೋಮೀಟರ್ ದೂರದ ಯಾತ್ರೆ ಹಾಗೂ ಕೇಂದ್ರ ಕಾಶ್ಮೀರದ ಗುಂದೆರ್ಬಾಲ್‌ನಿಂದ 14 ಕಿಲೋಮೀಟರ್ ದೂರದ ಯಾತ್ರೆ ಮತ್ತೊಂದು ದಾರಿಯಾಗಿದೆ. ಸಾಧುಗಳು ಸೇರಿದ ಮೊದಲ ತಂಡ ಕಾಶ್ಮೀರದ ಭಗವತಿ ನಗರ ಹಾಗೂ ಜಮ್ಮು ರಾಮಮಂದಿರದಿಂದ ತೆರಳಲಿದೆ. ಅಮರನಾಥ ಯಾತ್ರೆಗೆ 13 ವರ್ಷಕ್ಕಿಂತ ಕೆಳಗಿನವರು, 75 ವರ್ಷಕ್ಕಿಂತ ಮೇಲಿನವರು ಹಾಗೂ 6 ವಾರಕ್ಕಿಂತ ಹೆಚ್ಚಿನ ಗರ್ಭಿಣಿಯರಿಗೆ ನಿರ್ಬಂಧ ಹೇರಲಾಗಿದೆ.
ಇದನ್ನೂ ಓದಿ: Amarnath Yatra Registration 2022: ಜೂನ್ 30ರಿಂದ ಅಮರನಾಥ ಯಾತ್ರೆ; ಯಾತ್ರಾರ್ಥಿಗಳ ನೋಂದಣಿ ಪ್ರಕ್ರಿಯೆ ಇಂದಿನಿಂದ ಶುರು
ಇಂದಿನಿಂದ ಅಮರನಾಥನ ಗುಹೆಗೆ ಭೇಟಿ ನೀಡುವ ಯಾತ್ರಿಕರ ಕೊನೆಯ ಹೆಲಿಕಾಪ್ಟರ್ ನಿಲ್ದಾಣವಾದ ಪಂಚಕರ್ಣಿಗೆ ಶ್ರೀನಗರದಿಂದ ಹೊಸ ಹೆಲಿಕಾಪ್ಟರ್ ಸೇವೆ ಒದಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಮರನಾಥ ಯಾತ್ರೆಗೆ ಈಗಾಗಲೇ 2 ಮಾರ್ಗಗಳ ಮೂಲಕ ಹೆಲಿಕಾಪ್ಟರ್ ಸೇವೆ ಒದಗಿಸಲಾಗುತ್ತಿದೆ. 3ನೇ ಹೆಲಿಕಾಪ್ಟರ್ ಇದಾಗಲಿದೆ.
COVID-19 ಸಾಂಕ್ರಾಮಿಕ ರೋಗದಿಂದಾಗಿ 2020 ಮತ್ತು 2021ರಲ್ಲಿ ಅಮರನಾಥ ಯಾತ್ರೆ ನಡೆಯಲಿಲ್ಲ. ಭಯೋತ್ಪಾದಕ ಬೆದರಿಕೆಗಳ ನಡುವೆ ಜಮ್ಮು ಮತ್ತು ಕಾಶ್ಮೀರ ಆಡಳಿತದಿಂದ ಬಿಗಿ ಭದ್ರತೆಯನ್ನು ವಹಿಸಲಾಗಿದೆ. ಬುಧವಾರ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜಮ್ಮು ಬೇಸ್ ಕ್ಯಾಂಪ್‌ನಿಂದ ಅಮರನಾಥ ಯಾತ್ರಾರ್ಥಿಗಳ ಮೊದಲ ಬ್ಯಾಚ್‌ಗೆ ಚಾಲನೆ ನೀಡಿದರು. ಶಿವನ ಅಮರನಾಥ ದೇವಾಲಯವು ಜಮ್ಮು ಮತ್ತು ಕಾಶ್ಮೀರದ ಹಿಮಾಲಯದ ಮೇಲ್ಭಾಗದಲ್ಲಿ 3,880 ಮೀಟರ್ ಎತ್ತರದಲ್ಲಿದೆ. ಆಗಸ್ಟ್ 11ರಂದು ರಕ್ಷಾ ಬಂಧನದಂದು ಯಾತ್ರೆ ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ: Amarnath Yatra: ಅಮರನಾಥ ಯಾತ್ರೆಗೆ ಹೆಸರು ನೋಂದಾಯಿಸುವುದು ಹೇಗೆ? ಏನೇನು ನಿರ್ಬಂಧಗಳಿವೆ?
ಯಾತ್ರೆಗೆ ಮುಂಚಿತವಾಗಿ, ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮಾರ್ಗಸೂಚಿಗಳ ಪ್ರಕಾರ, ಯಾತ್ರಿಕರು ತಮ್ಮ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ಈ ದಾಖಲೆಯೊಂದಿಗೆ ಒಬ್ಬ ಭಕ್ತನಿಗೆ ಯಾತ್ರೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಹಿಮಾಲಯದ ಮಡಿಲಲ್ಲಿರುವ ಈ ಪವಿತ್ರ ಸ್ಥಳಕ್ಕೆ 43 ದಿನಗಳ ಪ್ರಯಾಣವನ್ನು ಕೈಗೊಳ್ಳಲು ಹೆಚ್ಚಿನ ಸಂಖ್ಯೆಯ ಭಕ್ತರು ವರ್ಷವಿಡೀ ಕಾಯುತ್ತಾರೆ. ಈ ವರ್ಷ ಇದೇ ಮೊದಲ ಬಾರಿಗೆ ಪ್ರಯಾಣಿಕರ ಅನುಕೂಲಕ್ಕಾಗಿ ಶ್ರೀನಗರದಿಂದ ಪಂಚತರ್ಣಿಯವರೆಗೆ ಹೆಲಿಕಾಪ್ಟರ್ ಸೇವೆ ಆರಂಭಿಸಲಾಗಿದೆ. ಅಮರನಾಥ ಯಾತ್ರೆ ಬುಕಿಂಗ್ ಈಗಾಗಲೇ ಆರಂಭವಾಗಿದೆ.
ಅಮರನಾಥ ಯಾತ್ರೆಗೆ ಅಗತ್ಯವಿರುವ ದಾಖಲೆಗಳು:
1. 2022ರ ಮಾರ್ಚ್ 28ರ ವೇಳೆ ವೈದ್ಯರು ನೀಡಿದ ವೈದ್ಯಕೀಯ ಪ್ರಮಾಣಪತ್ರ.
2. ನಾಲ್ಕು ಪಾಸ್‌ಪೋರ್ಟ್ ಅಳತೆಯ ಫೋಟೋಗಳು.
3. ಆಧಾರ್ ಕಾರ್ಡ್ ಅಥವಾ ಸರ್ಕಾರ ನೀಡಿದ ಯಾವುದೇ ಗುರುತಿನ ಚೀಟಿ.