ಕೊವಿಡ್ 19 ಸಾಂಕ್ರಾಮಿಕದ ಕಾರಣ ಹಿಂದೂಗಳ ಪವಿತ್ರ ಅಮರನಾಥ ಯಾತ್ರೆಗೆ ಕಳೆದ ಎರಡು ವರ್ಷಗಳಿಂದಲೂ ನಿರ್ಬಂಧ ವಿಧಿಸಲಾಗಿತ್ತು. ಕಳೆದ ವರ್ಷ ಎರಡು ಬಾರಿ ಮುಂದೂಡಿ ಮತ್ತೆ ಯಾತ್ರೆಯನ್ನು ರದ್ದುಗೊಳಿಸಲಾಗಿತ್ತು. ಆದರೆ ಈ ವರ್ಷ ಜೂನ್ 30ರಿಂದ ಅಮರನಾಥ ಯಾತ್ರೆ ಪ್ರಾರಂಭವಾಗಲಿದ್ದು, ಆಗಸ್ಟ್ 11ಕ್ಕೆ ಮುಕ್ತಾಯಗೊಳ್ಳಲಿದೆ. ಜೂನ್ನಿಂದ ಯಾತ್ರೆ ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ಅದರ ನೋಂದಣಿ ಪ್ರಕ್ರಿಯೆಯನ್ನು ಇಂದಿನಿಂದ (ಏಪ್ರಿಲ್ 11) ಶುರು ಮಾಡಲಾಗಿದೆ ಎಂದು ಅಮರನಾಥ ದೇವಾಲಯ ಮಂಡಳಿ ಸಿಇಒ ನಿತೀಶ್ವರ್ ಕುಮಾರ್ ತಿಳಿಸಿದ್ದಾರೆ. ಜೂನ್ 30ರಿಂದ ಪ್ರಾರಂಭವಾಗಿ ಆಗಸ್ಟ್ 11ವರೆಗೆ ಅಂದರೆ 43 ದಿನಗಳ ಕಾಲ ನಡೆಯುವ ಈ ಸುದೀರ್ಘ ಯಾತ್ರೆಗಾಗಿ ಭಕ್ತರು ಅಮರನಾಥ ದೇಗುಲದ ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ನೋಂದಣಿಯಲ್ಲಿ ಐದು ವಿಧಾನಗಳಿದ್ದು, ಅವು ಹೀಗಿವೆ: 1) ಮುಂಗಡ ಕಾಯ್ದಿರಿಸುವಿಕೆ 2)ಆನ್ಲೈನ್ ಮೂಲಕ ರಿಜಿಸ್ಟ್ರೇಶನ್ 3)ಗ್ರೂಪ್ ರಿಜಿಸ್ಟ್ರೇಶನ್ 4)ಎನ್ಆರ್ಐ ನೋಂದಣಿ (ಭಾರತದ ನಿವಾಸಿಗಳು ಅಲ್ಲದವರಿಗೆ ನೋಂದಣಿ ಅವಕಾಶ) 5)ಸ್ಥಳದಲ್ಲೇ ನೋಂದಣಿ ಪ್ರಕ್ರಿಯೆ.
13 ವರ್ಷ ಮೇಲ್ಪಟ್ಟು, 75 ವರ್ಷದ ಒಳಗಿನವರು ಯಾತ್ರೆಗಾಗಿ ವೆಬ್ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದ್ದು ಅದಕ್ಕಾಗಿ ಮೊದಲು ಮೊದಲು ಶ್ರೀ ಅಮರನಾಥಜಿ ದೇಗುಲ ಮಂಡಳಿ ವೆಬ್ಸೈಟ್ (SASB)ಗೆ ಭೇಟಿ ನೀಡಬೇಕು. ಅಲ್ಲಿ Registration for Amarnath Yatra 2022 ಎಂಬ ಲಿಂಕ್ ಕಾಣಿಸುತ್ತದೆ, ಅಲ್ಲಿ ಕ್ಲಿಕ್ ಮಾಡಿ ವಿವರಗಳನ್ನು ತುಂಬಬೇಕು. ವೈದ್ಯಕೀಯ ಪ್ರಮಾಣ ಪತ್ರ, ನಾಲ್ಕು ಪಾಸ್ಪೋರ್ಟ್ ಅಳತೆಯ ಫೋಟೋಗಳೂ ಬೇಕಾಗುತ್ತವೆ. ಇನ್ನು ಗ್ರೂಪ್ ನೋಂದಣಿ ಮಾಡಿಕೊಳ್ಳುವವರ ಗುಂಪಿನಲ್ಲಿ 5ಕ್ಕಿಂತ ಹೆಚ್ಚು ಮತ್ತು 50ಕ್ಕಿಂತಲೂ ಕಡಿಮೆ ಜನರು ಇರಬೇಕು.
ಇನ್ನು ಆನ್ಲೈನ್ ಮೂಲಕವಲ್ಲದೆ ಸಮೀಪದ ಬ್ಯಾಂಕ್ ಶಾಖೆಗಳಿಗೆ ಹೋಗಿ ನೋಂದಣಿ ಮಾಡಕೊಳ್ಳಬಹುದು. ಜಮ್ಮು-ಕಾಶ್ಮೀರ ಬ್ಯಾಂಕ್, ಪಿಎನ್ಬಿ ಬ್ಯಾಂಕ್, ಯೆಸ್ ಬ್ಯಾಂಕ್ ಮತ್ತು ಎಸ್ಬಿಐ ಬ್ಯಾಂಕ್ನ 100 ಶಾಖೆ ಸೇರಿ ದೇಶಾದ್ಯಂತ ಒಟ್ಟು 446 ಶಾಖೆಗಳಲ್ಲಿ ಅಮರನಾಥ ಯಾತ್ರೆ ನೋಂದಣಿ ಪ್ರಕ್ರಿಯೆ ನಡೆಯುತ್ತದೆ. ಹಾಗೇ ಕುದುರೆಗಳ ಮೂಲಕ ಯಾತ್ರಿಗಳನ್ನು ಬೆಟ್ಟ ಹತ್ತಿಸುವವರಿಗೆ ವಿಮಾ ಅವಧಿಯನ್ನು ಒಂದು ವರ್ಷಕ್ಕೆ ಏರಿಸಲಾಗಿದೆ. ಅಷ್ಟೇ ಅಲ್ಲ, ಇನ್ಶೂರೆನ್ಸ್ ಹಣವನ್ನು 3 ಲಕ್ಷ ರೂ.ದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: ಹೊರಬಿತ್ತು ‘ಕೆಜಿಎಫ್ ಚಾಪ್ಟರ್ 2’ ಸಿನಿಮಾದ ಮೊದಲ ವಿಮರ್ಶೆ; ಐದಕ್ಕೆ ಐದು ಸ್ಟಾರ್