ಕೊವಿಡ್ 19 ಕಾರಣದಿಂದ ಈ ಬಾರಿ ಅಮರನಾಥ ಯಾತ್ರೆಗೆ ಅವಕಾಶ ಇಲ್ಲ. ಬದಲಿಗೆ ಭಕ್ತರು ಆನ್ಲೈನ್ ಮುಖಾಂತರ ಆರತಿ ನೆರವೇರಿಸಬಹುದು ಎಂದು ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತಿಳಿಸಿದ್ದಾರೆ. ಅಮರನಾಥ ದೇಗುಲ ಮಂಡಳಿಯೊಂದಿಗೆ ವಿಸ್ತೃತ ಚರ್ಚೆ ನಡೆಸಿದ ಬಳಿಕ ಈ ತೀರ್ಮಾನಕ್ಕೆ ಬಂದಿದ್ದಾಗಿ ಮನೋಜ್ ಸಿನ್ಹಾ ಹೇಳಿದ್ದಾರೆ.
ಹಿಂದುಗಳ ಪವಿತ್ರ ಅಮರನಾಥ ಯಾತ್ರೆಗೆ ವರ್ಷವೂ ಸಾವಿರಾರು ದೇಶದ ವಿವಿಧ ಭಾಗಗಳಿಂದ ಹೋಗುತ್ತಾರೆ. ಈ ಬಾರಿಯೂ ಜೂ.28ರಿಂದ ಪಹಲ್ಗಮ್ ಮತ್ತು ಬಾಲ್ಟಾಲ್ ಮಾರ್ಗಗಳ ಮೂಲಕ ಪ್ರಾರಂಭವಾಗಬೇಕಿತ್ತು. ಇದು 56 ದಿನಗಳ ಯಾತ್ರೆಯಾಗಿದ್ದು ಆಗಸ್ಟ್ 22ರಂದು ಮುಕ್ತಾಯವಾಗುತ್ತಿತ್ತು. ಕೊರೊನಾ ಎರಡನೇ ಅಲೆಯ ನಿಮಿತ್ತ ಈ ಮೊದಲು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿತ್ತು. ಆದರೆ ಸೋಂಕಿನ ಪ್ರಮಾಣ ತಗ್ಗದ ಕಾರಣ ಈ ಬಾರಿ ಅಮರನಾಥ ಯಾತ್ರೆ ನಡೆಸದಿರಲು ಆಡಳಿತ ತೀರ್ಮಾನಿಸಿದೆ.
ಕಳೆದವರ್ಷ 2020ರಲ್ಲಿ ಕೂಡ ಕೊವಿಡ್ 19 ಕಾರಣದಿಂದ ಅಮರನಾಥ ಯಾತ್ರೆ ರದ್ದುಗೊಳಿಸಲಾಗಿತ್ತು. ಇನ್ನು ಈಗಂತೂ ಜಮ್ಮು-ಕಾಶ್ಮೀರದಲ್ಲಿ ಕೆಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಭದ್ರತೆಯನ್ನೂ ಹೆಚ್ಚಿಸಲಾಗಿದೆ. ಜಮ್ಮು-ಕಾಶ್ಮೀರದ ಭದ್ರತೆ ಪರಿಶೀಲನೆಗಾಗಿ ಕಳೆದ ವಾರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಜಮ್ಮು-ಕಾಶ್ಮೀರ ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಗುಪ್ತಚರ ದಳದ ಅಧಿಕಾರಿಗಳು, ಕೇಂದ್ರದ ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ: Usain Bolt: ಅವಳಿ ಗಂಡು ಮಕ್ಕಳಿಗೆ ತಂದೆಯಾದ ಉಸೇನ್ ಬೋಲ್ಟ್.. ನವಜಾತ ಶಿಶುಗಳ ಹೆಸರೇನು ಗೊತ್ತಾ?