ರೈತ ಮುಖಂಡರ ಜೊತೆ ಅಮಿತ್ ಶಾ ಸಭೆ: ಇನ್ನಾದರೂ ಇತ್ಯರ್ಥವಾಗುತ್ತಾ ಅನ್ನದಾತರ ಬೇಡಿಕೆ

| Updated By: ganapathi bhat

Updated on: Apr 07, 2022 | 5:32 PM

ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕೋರಿ 13 ದಿನಗಳಿಂದ ನಡೆಯುತ್ತಿರುವ ರೈತರ ಪ್ರತಿಭಟನೆಯು ನಿಲ್ಲುವ ಸೂಚನೆ ಕಾಣುತ್ತಿಲ್ಲ. ಸರ್ಕಾರವು ರೈತರ ಓಲೈಕೆಗೆ ಎಷ್ಟೇ ಪ್ರಯತ್ನಿಸಿದರೂ ರೈತರು ಜಗ್ಗುತ್ತಿಲ್ಲ.

ರೈತ ಮುಖಂಡರ ಜೊತೆ ಅಮಿತ್ ಶಾ ಸಭೆ: ಇನ್ನಾದರೂ ಇತ್ಯರ್ಥವಾಗುತ್ತಾ ಅನ್ನದಾತರ ಬೇಡಿಕೆ
ಅಮಿತ್ ಶಾ
Follow us on

ದೆಹಲಿ: ಕೇಂದ್ರ ಗೃಹ ಸಚಿವ ಅಮಿತ್​ ಶಾ ಮತ್ತು ರೈತ ಮುಖಂಡರ ಬಹು ನಿರೀಕ್ಷಿತ ಸಭೆ ಇಂದು (ಡಿ.8) ಸಂಜೆ 7 ಗಂಟೆಗೆ ನಡೆದಿದೆ. ಭಾರತೀಯ ಕೃಷಿ ಸಂಶೋಧನಾ ಪರಿಷತ್ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ ಪ್ರತಿಭಟನಾನಿರತ ರೈತ ಮುಖಂಡರು ಭಾಗವಹಿಸಿದ್ದರು. ಮಾಧ್ಯಮಗಳ ಕಣ್ತಪ್ಪಿಸಲೆಂದು ಕೊನೆಗಳಿಗೆಯಲ್ಲಿ ಸಭೆಯ ಸ್ಥಳ ಬದಲಿಸಲಾಯಿತು.

ನಾಳೆ (ಡಿ9) ನಡೆಯಲಿರುವ ಕೇಂದ್ರ ಸರ್ಕಾರ ಮತ್ತು ರೈತರ ಸಭೆಗೆ ಪೂರ್ವಪೀಠಿಕೆಯಾಗಿ ಇಂದು ಅಮಿತ್ ಶಾ ಮಾತುಕತೆ ನಡೆಸಿದ್ದಾರೆ. ರೈತರ ಹೋರಾಟಕ್ಕೆ ಸೂಕ್ತ ಅಂತ್ಯ ಹಾಡುವ ನಿಟ್ಟಿನಲ್ಲಿ ಇಂದಿನ ಸಭೆಯು ಬಹುಮಹತ್ವ ಪಡೆದುಕೊಂಡಿತ್ತು.

ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕೋರಿ ಸತತ 13 ದಿನಗಳಿಂದ ನಡೆಯುತ್ತಿರುವ ರೈತರ ಪ್ರತಿಭಟನೆಯು ನಿಲ್ಲುವ ಸೂಚನೆ ಕಾಣುತ್ತಿಲ್ಲ. ಸರ್ಕಾರವು ರೈತರ ಓಲೈಕೆಗೆ ಎಷ್ಟೇ ಪ್ರಯತ್ನಿಸಿದರೂ ರೈತರು ಜಗ್ಗುತ್ತಿಲ್ಲ. ಕಾಯ್ದೆಗಳನ್ನು ಹಿಂಪಡೆಯುವಂತೆ ಒಮ್ಮತದ ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.

ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಇಂದು ಭಾರತ್ ಬಂದ್ ಕರೆ ನೀಡಿದ್ದವು. ಎಡಪಕ್ಷಗಳ ಬೆಂಬಲ, ರೈತ ಮತ್ತು ಕಾರ್ಮಿಕ ಸಂಘಟನೆಗಳ ಹೋರಾಟ, ಇತರ ರಾಜ್ಯಗಳ ರೈತ ಪರ ಒಲವು ಮುಂತಾದ ಕಾರಣಗಳಿಂದ ಕೇಂದ್ರಕ್ಕೆ ಇದು ದೊಡ್ಡ ಹೊಡೆತವಾಗಿ ಪರಿಣಮಿಸಿದೆ.

ಈ ಮೊದಲು ಸರ್ಕಾರ ಮತ್ತು ರೈತರು ಐದು ಬಾರಿ ಮಾತುಕತೆ ನಡೆಸಿದ್ದಾರೆ. ಕಳೆದ ಶುಕ್ರವಾರ ನಡೆದ ಮಾತುಕತೆಯು ಏಳು ಗಂಟೆಗಳ ಕಾಲ ಮುಂದುವರಿದರೂ ಯಾವುದೇ ತೀರ್ಮಾನ ಸಾಧ್ಯವಾಗಿರಲಿಲ್ಲ.

ಈ ಹಿಂದೆ ನಡೆಸಿದ ಮಾತುಕತೆಗಳಲ್ಲಿ ಕೃಷಿ ಸಚಿವ ನರೇಂದ್ರ ತೋಮರ್, ರೈಲ್ವೇ ಖಾತೆ ಸಚಿವ ಪಿಯೂಶ್ ಗೋಯಲ್ ಭಾಗವಹಿಸಿದ್ದರು. ಕೃಷಿ ಕಾಯ್ದೆಗಳ ಬಗ್ಗೆ ಧನಾತ್ಮಕ ಅಂಶಗಳನ್ನು ವಿವರಿಸಿದ್ದರು. ರೈತರ ಸಮಸ್ಯೆಗಳನ್ನು ಆಲಿಸಲು ಹೊಸ ಸಮಿತಿಯನ್ನು ರಚಿಸುವುದಾಗಿಯೂ ತಿಳಿಸಿದ್ದರು. ಆದರೆ ರೈತ ಮುಖಂಡರು 39 ಅಂಶಗಳ ವಿವರ ಸಲ್ಲಿಸಿ, ಹೇಗೆ ಮತ್ತು ಯಾಕೆ ಹೊಸ ಕೃಷಿ ಕಾಯ್ದೆಗಳು ರೈತರಿಗೆ ತೊಂದರೆ ಉಂಟು ಮಾಡುತ್ತವೆ ಎಂದು ವಿವರಿಸಿದ್ದರು.

ರೈತರಿಗೆ ಸಿಗುವ ಕನಿಷ್ಠ ಬೆಂಬಲ ಬೆಲೆಗೆ ಕುತ್ತು ಬರುತ್ತದೆ ಎಂಬ ಬಗ್ಗೆ ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಹೊಸ ಕಾಯ್ದೆಗಳಿಂದ ರೈತರಿಗಲ್ಲ ಬದಲಾಗಿ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭವಾಗಲಿವೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೆಹಲಿ ಚಲೋ ಹಿನ್ನೆಲೆ.. ಚಳಿಗೆ ದೆಹಲಿ ಗಢಗಢ, ಆದ್ರೆ ಅವಡುಗಚ್ಚಿ ಅಚಲವಾಗಿ ಕುಳಿತ ಪಂಜಾಬ್ ರೈತರು!

 

Published On - 9:53 pm, Tue, 8 December 20