ಜಾರಿ ನಿರ್ದೇಶನಾಲಯ ನಿರ್ದೇಶಕರ ಅಧಿಕಾರಾವಧಿ ಮೊಟಕುಗೊಳಿಸಿದ ಸುಪ್ರೀಂ; ವಿಪಕ್ಷಗಳ ಟೀಕೆಗೆ ಅಮಿತ್ ಶಾ ತಿರುಗೇಟು

ಜಾರಿ ನಿರ್ದೇಶನಾಲಯದ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅಧಿಕಾರದ ಅವಧಿಯನ್ನು ಕೇಂದ್ರ ಸರ್ಕಾರ ಮೂರನೇ ಬಾರಿಗೆ 2023 ರ ನವೆಂಬರ್ 18ಕ್ಕೆ ವಿಸ್ತರಿಸಿತ್ತು. ಇದನ್ನು ಕಾನೂನುಬಾಹಿರ ಎಂದು ಹೇಳಿದ್ದ ಸುಪ್ರೀಂ ಕೋರ್ಟ್, ಮಿಶ್ರಾ ಅಧಿಕಾರಾವಧಿಯನ್ನು ಜುಲೈ 31ಕ್ಕೆ ಮೊಟಕುಗೊಳಿಸಿ ಆದೇಶ ನೀಡಿದೆ.

ಜಾರಿ ನಿರ್ದೇಶನಾಲಯ ನಿರ್ದೇಶಕರ ಅಧಿಕಾರಾವಧಿ ಮೊಟಕುಗೊಳಿಸಿದ ಸುಪ್ರೀಂ; ವಿಪಕ್ಷಗಳ ಟೀಕೆಗೆ ಅಮಿತ್ ಶಾ ತಿರುಗೇಟು
ಅಮಿತ್ ಶಾ
Follow us
Ganapathi Sharma
|

Updated on:Jul 11, 2023 | 10:40 PM

ನವದೆಹಲಿ: ಜಾರಿ ನಿರ್ದೇಶನಾಲಯದ (ED) ನಿರ್ದೇಶಕರ ನೇಮಕಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಬಗ್ಗೆ ಪ್ರತಿಪಕ್ಷಗಳ ನಾಯಕರು ನಡೆಸಿರುವ ವಾಗ್ದಾಳಿಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತಿರುಗೇಟು ನೀಡಿದ್ದಾರೆ. ಪ್ರತಿಪಕ್ಷಗಳ ನಾಯಕರನ್ನು ಉದ್ದೇಶಿಸಿ ಟ್ವೀಟ್ ಮಾಡಿರುವ ಅವರು, ಸುಪ್ರೀಂ ಕೋರ್ಟ್ ತೀರ್ಪನ್ನು ಸಂಭ್ರಮಿಸುತ್ತಿರುವ ಜನರು ಹಲವು ಕಾರಣಗಳಿಂದ ಗೊಂದಲದಲ್ಲಿ, ಭ್ರಮೆಯಲ್ಲಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಸಂಸತ್ತಿನಲ್ಲಿ ಯಥಾವತ್ತಾಗಿ ಅಂಗೀಕರಿಸಲ್ಪಟ್ಟ ಸಿವಿಸಿ ಕಾಯ್ದೆಯ (Central Vigilance Commission Act) ತಿದ್ದುಪಡಿಗಳನ್ನು ಎತ್ತಿಹಿಡಿಯಲಾಗಿದೆ. ಜಾರಿ ನಿರ್ದೇಶನಾಲಯವು ಯಾವುದೇ ವ್ಯಕ್ತಿಯ ಮೇಲೆ ಅವಲಂಬಿತವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜಾರಿ ನಿರ್ದೇಶನಾಲಯದ ನಿರ್ದೇಶಕರು ಯಾರು ಎಂಬುದು ಮುಖ್ಯವಲ್ಲ ಎಂದು ಹೇಳಲಾಗಿದೆ ಎಂದು ಅಮಿತ್ ಶಾ ಉಲ್ಲೇಖಿಸಿದ್ದಾರೆ.

ಭ್ರಷ್ಟರು ಮತ್ತು ಕಾನೂನು ಉಲ್ಲಂಘಿಸುವವರ ಮೇಲೆ ಕ್ರಮ ಕೈಗೊಳ್ಳುವ ಜಾರಿ ನಿರ್ದೇಶನಾಲಯದ ಅಧಿಕಾರಗಳು ಈಗ ಇರುವ ಹಾಗೆಯೇ ಇರಲಿದೆ. ಜಾರಿ ನಿರ್ದೇಶನಾಲಯ ಎಂಬುದು ಯಾವುದೇ ಒಬ್ಬ ವ್ಯಕ್ತಿಯನ್ನು ಮೀರಿ ಬೆಳೆಯುವ ಸಂಸ್ಥೆಯಾಗಿದೆ. ಜತೆಗೆ, ಅದರ ಪ್ರಮುಖ ಉದ್ದೇಶವನ್ನು ಸಾಧಿಸುವತ್ತ ಗಮನಹರಿಸುತ್ತದೆ. ಸಂಸ್ಥೆಯ ಪ್ರಮುಖ ಉದ್ದೇಶವೆಂದರೆ, ಮನಿ ಲಾಂಡರಿಂಗ್ (ಹಣಕಾಸು ಅಕ್ರಮ ಚಟುವಟಿಕೆ) ಮತ್ತು ವಿದೇಶಿ ವಿನಿಮಯ ಕಾನೂನುಗಳ ಉಲ್ಲಂಘನೆಯ ಅಪರಾಧಗಳನ್ನು ತನಿಖೆ ಮಾಡುವುದಾಗಿದೆ. ಹೀಗಾಗಿ, ಸಂಸ್ಥೆಯ ನಿರ್ದೇಶಕರು ಯಾರು ಎಂಬುದು ಮುಖ್ಯವಲ್ಲ. ಏಕೆಂದರೆ ಈ ಪಾತ್ರವನ್ನು ಯಾರು ವಹಿಸಿಕೊಂಡರೂ ಅಭಿವೃದ್ಧಿ ವಿರೋಧಿ ಮನಸ್ಥಿತಿಯನ್ನು ಹೊಂದಿರುವ ರಾಜವಂಶಗಳ ಸ್ನೇಹಿತರ ಒಕ್ಕೂಟದ ಅತಿರೇಕದ ಭ್ರಷ್ಟಾಚಾರದ ಮೇಲೆ ಅವರು ಕಣ್ಣಿಟ್ಟಿರಲಿದ್ದಾರೆ ಎಂದು ಅಮಿತ್ ಶಾ ಕಿಡಿಕಾರಿದ್ದಾರೆ.

ಜಾರಿ ನಿರ್ದೇಶನಾಲಯದ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅಧಿಕಾರದ ಅವಧಿಯನ್ನು ಕೇಂದ್ರ ಸರ್ಕಾರ ಮೂರನೇ ಬಾರಿಗೆ 2023 ರ ನವೆಂಬರ್ 18ಕ್ಕೆ ವಿಸ್ತರಿಸಿತ್ತು. ಇದನ್ನು ಕಾನೂನುಬಾಹಿರ ಎಂದು ಹೇಳಿದ್ದ ಸುಪ್ರೀಂ ಕೋರ್ಟ್, ಮಿಶ್ರಾ ಅಧಿಕಾರಾವಧಿಯನ್ನು ಜುಲೈ 31ಕ್ಕೆ ಮೊಟಕುಗೊಳಿಸಿ ಆದೇಶ ನೀಡಿದೆ. ಇದರ ಬೆನ್ನಲ್ಲೇ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.

ಇದನ್ನೂ ಓದಿ: ಮಣಿಪುರದಲ್ಲಿ ದ್ವೇಷ ಭಾಷಣಕ್ಕೆ ಕಡಿವಾಣ ಹಾಕಬೇಕು: ಸುಪ್ರೀಂಕೋರ್ಟ್

ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಸುಪ್ರೀಂ ಕೋರ್ಟ್‌ನ ತೀರ್ಪು ಕೇಂದ್ರ ಸರ್ಕಾರಕ್ಕೆ ದೊಡ್ಡ ಹಿನ್ನಡೆ ಎಂದು ಬಣ್ಣಿಸಿದ್ದರು. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್‌ ಮಾತನಾಡಿ, ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಬಿಜೆಪಿ ಸರ್ಕಾರಕ್ಕೆ ಕಪಾಳಮೋಕ್ಷವಾಗಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ, ಪ್ರಸ್ತುತ ಇಡಿ ನಿರ್ದೇಶಕ ಸಂಜಯ್ ಮಿಶ್ರಾ ಅವರ ಅಧಿಕಾರಾವಧಿಯನ್ನು ಕೇಂದ್ರ ಸರ್ಕಾರವು ಸತತ ಮೂರನೇ ಬಾರಿಗೆ ವಿಸ್ತರಿಸಿತ್ತು. ಮಿಶ್ರಾ ಅವರು ಈ ಹಿಂದೆ, ಅಂದರೆ 2021 ರ ನವೆಂಬರ್​ನಲ್ಲಿ ಒಂದು ವರ್ಷದ ಅಧಿಕಾರ ವಿಸ್ತರಣೆಯನ್ನು ಪಡೆದಿದ್ದರು. 2018 ರಲ್ಲಿ ಸರ್ಕಾರವು ಅವರನ್ನು ಎರಡು ವರ್ಷಗಳ ಕಾಲ ಜಾರಿ ನಿರ್ದೇಶನಾಲಯದ ನಿರ್ದೇಶಕರನ್ನಾಗಿ ನೇಮಕ ಮಾಡಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:38 pm, Tue, 11 July 23