ರೈಲು ಹೊರಡಲು ಎರಡು ತಾಸು ತಡ ಮಾಡಿದ ರೈಲ್ವೆ ಸ್ಟೇಶನ್ನ ಸಹಾಯಕ ಮಾಸ್ಟರ್ನ್ನು ಅಮಾನತು ಮಾಡಲಾಗಿದೆ. ಉತ್ತರಪ್ರದೇಶದ ಕಂಚೌಸಿ ರೈಲ್ವೆಸ್ಟೇಶನ್ನಲ್ಲಿ ಘಟನೆ ನಡೆದಿದ್ದು, ಈ ಸಹಾಯಕ ಸ್ಟೇಶನ್ ಮಾಸ್ಟರ್ ಕಂಠಪೂರ್ತಿ ಕುಡಿದು, ಗಡದ್ದಾಗಿ ನಿದ್ದೆಹೋದ ಕಾರಣಕ್ಕೆ ಕೆಲವು ರೈಲುಗಳು, ನಿಗದಿತ ಸಮಯಕ್ಕಿಂತಲೂ ಎರಡು ಗಂಟೆ ತಡವಾಗಿ ಹೊರಟಿವೆ. ಕರ್ತವ್ಯದಲ್ಲಿದ್ದಾಗಲೇ ನಿದ್ದೆ ಮಾಡಿ, ರೈಲ್ವೆ ಸಂಚಾರದಲ್ಲಿ ಅಡಚಣೆ ಉಂಟು ಮಾಡಿದ ಕಾರಣಕ್ಕೆ ಅವರನ್ನು ಅಮಾನತುಗೊಳಿಸಲಾಗಿದೆ.
ಔರಾಯಿಯಾ ಜಿಲ್ಲೆಯ ಕಂಚೌಸಿ ರೈಲ್ವೆ ಸ್ಟೇಶನ್ನ ಈ ಸ್ಟೇಶನ್ ಮಾಸ್ಟರ್ ಹೆಸರು ಅನಿರುದ್ ಕುಮಾರ್. ಗುರುವಾರ ಮಧ್ಯರಾತ್ರಿ 12ಗಂಟೆಯಿಂದ ಬೆಳಗ್ಗೆ 8ಗಂಟೆವರೆಗೆ ಅವರ ಶಿಫ್ಟ್ ಇತ್ತು. ಬಂದವರೇ ಕಂಠಪೂರ್ತಿ ಕುಡಿದು ಮಲಗಿಬಿಟ್ಟಿದ್ದರು. ಸ್ಟೇಶನ್ಗೆ ಬರುವ ರೈಲುಗಳು ಮುಂದೆ ಹೋಗಬೇಕು ಎಂದರೆ ತಾವೇ, ಗ್ರೀನ್ ಸಿಗ್ನಲ್ ಕೊಡಬೇಕು ಎಂಬುದನ್ನು ಮರೆತೇ ಬಿಟ್ಟಿದ್ದ ಅವರು ನಿದ್ದೆ ಮಾಡಿದ್ದೇಬಂತು. ಸ್ಟೇಶನ್ ಮಾಸ್ಟರ್ ಹಸಿರು ಬಾವುಟ ಹಾರಿಸದೆ ಯಾವುದೇ ರೈಲು ಮುಂದೆ ಹೋಗುವುದಿಲ್ಲ. ಹಾಗೇ ಇಲ್ಲಿನ ರೈಲುಗಳ ಚಾಲಕರೂ ಬರೋಬ್ಬರಿ ಎರಡು ತಾಸು ಕಾದಿದ್ದಾರೆ. ಕೊನೆಗೂ ಅನಿರುದ್ ಕುಮಾರ್ಗೆ ಎಚ್ಚರವಾಗಲೇ ಇಲ್ಲ. ಅಷ್ಟರಲ್ಲಿ ರೈಲುಗಳು ವಿಳಂಬವಾಗಿದ್ದನ್ನು ಗಮನಿಸಿದ ಸ್ಟೇಶನ್ ಅಧೀಕ್ಷಕ ವಿಶಂಭರ್ ದಯಾಳ್ ಪಾಂಡೆ ಕೂಡಲೇ ರೈಲ್ವೆ ಸ್ಟೇಶನ್ಗೆ ಬಂದು, ಮಲಗಿದ್ದ ಅನಿರುದ್ಧ್ ಕುಮಾರ್ ಮುಖದ ಮೇಲೆ ನೀರು ಸಿಂಪಡಿಸಿದ್ದಾರೆ. ಆಗಲೇ ಅನಿರುದ್ಧ್ಗೆ ಎಚ್ಚರವಾಗಿದೆ.
ಈ ಸ್ಟೇಶನ್ನಲ್ಲಿ ದೆಹಲಿ-ಹೌರಾಹ್ ಮಾರ್ಗದ ವೈಶಾಲಿ ಎಕ್ಸ್ಪ್ರೆಸ್, ಸಂಗಮ್ ಎಕ್ಸ್ಪ್ರೆಸ್, ಮಗಧ್ ಎಕ್ಸ್ಪ್ರೆಸ್ ಹಾಗೂ ಹಲವು ಸರಕು ರೈಲುಗಳು ಸುಮಾರು ಎರಡು ತಾಸುಗಳಿಗೂ ಅಧಿಕ ಕಾಲ ಕಾದಿವೆ. ಇದರಿಂದ ಪ್ರಯಾಣಿಕರಿಗೂ ತೀವ್ರ ತೊಂದರೆಯಾಗಿದೆ. ಬಳಿಕ ಹತ್ತಿರದ ಫಫುಂಡ್ ರೈಲ್ವೆ ಸ್ಟೇಶನ್ ಮತ್ತು ಜಿಂಝಾಕ್ ರೈಲ್ವೆ ಸ್ಟೇಶನ್ ಮಾಸ್ಟರ್ಗಳು ಈ ಕಂಚೌಸಿ ರೈಲ್ವೆ ಸ್ಟೇಶನ್ನ ಕಂಟ್ರೋಲ್ ರೂಂಗೆ ಫೋನ್ ಮಾಡಿ, ರೈಲುಗಳೇಕೆ ಬರುತ್ತಿಲ್ಲ ಎಂದು ಕೇಳಿದ ಬಳಿಕವಷ್ಟೇ ಅಧೀಕ್ಷಕನ ಗಮನಕ್ಕೆ ಇದು ಬಂದಿದೆ. ಅಲ್ಲಿಯವರೆಗೂ ಸ್ಟೇಶನ್ ಅಧೀಕ್ಷಕ ವಿಶಂಭರ್ ದಯಾಳ್ ಪಾಂಡೆಗೂ ಈ ವಿಚಾರ ಗೊತ್ತಿರಲಿಲ್ಲ.
ನಂತರ ಅನಿರುದ್ಧ್ರನ್ನು ಪ್ರಯಾಗ್ರಾಜ್ನ ಹಿರಿಯ ವಿಭಾಗೀಯ ಕಾರ್ಯಾಚರಣೆಗಳ ವ್ಯವಸ್ಥಾಪಕ ಎಸ್.ಕೆ.ಶುಕ್ಲಾ ಅಮಾನತು ಮಾಡಿದ್ದಾರೆ. ಅದಕ್ಕೂ ಮೊದಲು ಅವರನ್ನು ಆಸ್ಪತ್ರೆಗೆ ಸೇರಿಸಿ ವೈದ್ಯಕೀಯ ಪರೀಕ್ಷೆ ಕೂಡ ನಡೆಸಲಾಯಿತು. ಮದ್ಯ ಸೇವಿಸಿದ್ದು ಟೆಸ್ಟ್ನಲ್ಲಿ ದೃಢಪಟ್ಟ ತಕ್ಷಣ ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ: Ragging in Mangalore: ಮಂಗಳೂರಿನಲ್ಲಿ ಮತ್ತೆ ರ್ಯಾಗಿಂಗ್ ಪಿಡುಗು; ಕೇರಳ ಮೂಲದ 6 ನರ್ಸಿಂಗ್ ವಿದ್ಯಾರ್ಥಿಗಳು ಅರೆಸ್ಟ್
An assistant station master was suspended after got drunk during duty hours and slept In Uttar Pradesh