ಮಕ್ಕಳ ಲಸಿಕೀಕರಣದ ಮೇಲೆ ಕೊವಿಡ್​ 19 ಯಾವುದೇ ಪರಿಣಾಮ ಬೀರಿಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ

ವಿಶ್ವಸಂಸ್ಥೆಯ ಮಕ್ಕಳ ತುರ್ತುನಿಧಿ (UNICEF) ಕೂಡ ಇತ್ತೀಚೆಗೆ ಒಂದು ಹೇಳಿಕೆ ನೀಡಿತ್ತು. ಕೊರೊನಾ ಸಾಂಕ್ರಾಮಿಕದ ಮಧ್ಯೆ, ಉಳಿದ ಅತ್ಯಗತ್ಯ ಲಸಿಕೆ ಪಡೆಯದ ಮಕ್ಕಳ ಸಂಖ್ಯೆ ಭಾರತದಲ್ಲೇ ಹೆಚ್ಚಾಗಿದೆ ಎಂದಿತ್ತು.

ಮಕ್ಕಳ ಲಸಿಕೀಕರಣದ ಮೇಲೆ ಕೊವಿಡ್​ 19 ಯಾವುದೇ ಪರಿಣಾಮ ಬೀರಿಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ
ಪ್ರಾತಿನಿಧಿಕ ಚಿತ್ರ

ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಜನವರಿಯಿಂದ ಮಾರ್ಚ್​) ದೇಶದಲ್ಲಿ ಶೇ.99ರಷ್ಟು ಡಿಟಿಪಿ-3 (DTP-3 ಅಂದರೆ ಮಕ್ಕಳಿಗೆ ನೀಡಲ್ಪಡುವ ಡಿಪ್ತೀರಿಯಾ, ಟೆಟನಸ್ ಮತ್ತು ಪೆರ್ಟುಸಿಸ್ ಲಸಿಕೆಗಳು) ಲಸಿಕೆಯನ್ನು ಮಕ್ಕಳಿಗೆ ನೀಡಲಾಗಿದೆ ಎಂಬುದು ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆಯ ಸರ್ವೇಯಿಂದ ಗೊತ್ತಾಗಿದೆ. ಇದು ಇಲ್ಲಿಯವರೆಗಿನ ಅತಿಹೆಚ್ಚು ಡಿಟಿಪಿ 3 ಲಸಿಕೀಕರಣದ ವ್ಯಾಪ್ತಿಯಾಗಿದ್ದು, ಕೇಂದ್ರ ಸರ್ಕಾರ ಮತ್ತು ಸರ್ಕಾರಿ ಆರೋಗ್ಯಪಡೆಯ ಬದ್ಧತೆಯಿಂದ ಸಾಧ್ಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಕೊರೊನಾ ವೈರಸ್ ಕಾರಣದಿಂದ ಲಕ್ಷಾಂತರ ಮಕ್ಕಳು, ಬೇರೆ ಅತ್ಯಗತ್ಯವಾಗಿ ನೀಡಲ್ಪಡುವ ಲಸಿಕೆಗಳಿಂದ ವಂಚಿತರಾಗಿದ್ದಾರೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಮಾಹಿತಿ ಹೊರಹಾಕಿದೆ.

ದೇಶದಲ್ಲಿ ಕೊರೊನಾ ಹೆಚ್ಚುತ್ತಿರುವ ಕಾರಣ ಅದರ ನಿಯಂತ್ರಣ, ಕೊವಿಡ್​ 19 ಲಸಿಕೆ ನೀಡುವ ಬಗ್ಗೆಯೇ ಹೆಚ್ಚಿನ ಗಮನಹರಿಸಲಾಗಿದೆ. ಹೀಗಾಗಿ ಮಕ್ಕಳಿಗೆ ಅತ್ಯಗತ್ಯವಾಗಿ ನೀಡಲೇಬೇಕಾದ ಡಿಟಿಪಿ-3 ಲಸಿಕೆ ಸೇರಿ ಇನ್ನೂ ಕೆಲವು ನಿಗದಿತ ಲಸಿಕೆಗಳನ್ನು ಸರಿಯಾದ ಸಮಯಕ್ಕೆ ನೀಡಲಾಗಿಲ್ಲ. ಇದರಿಂದ ಮುಂಬರುವ ದಿನಗಳಲ್ಲಿ ಅನೇಕ ಮಕ್ಕಳು ಬೇರೆ ಕಾಯಿಲೆಗಳಿಂದ ಬಳಲಬಹುದು..ಮಕ್ಕಳ ಸಾವಿನ ಪ್ರಮಾಣವೂ ಹೆಚ್ಚಾಗಬಹುದು ಎಂಬಿತ್ಯಾದಿ ವಿಷಯಗಳನ್ನು ಕೆಲವು ಮಾಧ್ಯಮಗಳೂ ವರದಿ ಮಾಡಿದ್ದವು. ಅದರ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಮಾಹಿತಿ ಬಿಚ್ಚಿಟ್ಟಿದೆ.

ಇನ್ನು ವಿಶ್ವಸಂಸ್ಥೆಯ ಮಕ್ಕಳ ತುರ್ತುನಿಧಿ (UNICEF) ಕೂಡ ಇತ್ತೀಚೆಗೆ ಒಂದು ಹೇಳಿಕೆ ನೀಡಿತ್ತು. ಕೊರೊನಾ ಸಾಂಕ್ರಾಮಿಕದ ಮಧ್ಯೆ, ಉಳಿದ ಅತ್ಯಗತ್ಯ ಲಸಿಕೆ ಪಡೆಯದ ಮಕ್ಕಳ ಸಂಖ್ಯೆ ಭಾರತದಲ್ಲೇ ಹೆಚ್ಚಾಗಿದೆ. 2020ರಲ್ಲಿ ಲಸಿಕೆ ಪಡೆಯದ ಮಕ್ಕಳ ಸಂಖ್ಯೆ ಭಾರತದಲ್ಲಿ 3 ಮಿಲಿಯನ್​ಗಳಷ್ಟಿತ್ತು. ಇದೀಗ ಆ ಸಂಖ್ಯೆ 3.5 ಮಿಲಿಯನ್​ಗೆ ಏರಿಕೆಯಾಗಿದೆ ಎಂದು ಯುನಿಸೆಫ್​ ವರದಿ ನೀಡಿತ್ತು. ನಂತರ ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಕೊರೊನಾ ಸಾಂಕ್ರಾಮಿಕದ ನಡುವೆಯೂ ಉಳಿದ ವೈದ್ಯಕೀಯ, ಅಗತ್ಯ ಸೇವೆಯಲ್ಲಿ ಯಾವುದೇ ಹಿನ್ನಡೆಯಾಗಿಲ್ಲ ಎಂದು ಹೇಳಿದೆ. ದೇಶದಲ್ಲಿ ಮಕ್ಕಳಿಗೆ ಇನ್ನಿತರ ಲಸಿಕೆ ನೀಡುವ ಜತೆಗೆ ಕೊವಿಡ್​ 19 ಲಸಿಕೆ ನೀಡುವ ಬಗ್ಗೆಯೂ ಪ್ರಯತ್ನಗಳು ಜಾರಿಯಲ್ಲಿವೆ. ಜೈಡಸ್ ಕ್ಯಾಡಿಲಾ ಲಸಿಕೆಯ ಮಕ್ಕಳ ಮೇಲಿನ ಪ್ರಯೋಗ ಮುಗಿದ ತಕ್ಷಣ ಮರುಪರಿಶೀಲನೆ ಮಾಡಿ, ನೀಡಲು ಪ್ರಾರಂಭ ಮಾಡಲಾಗುತ್ತದೆ ಎಂದೂ ನೀತಿ ಆಯೋಗದ ಸದಸ್ಯ ಡಾ. ವಿ.ಕೆ.ಪೌಲ್​ ತಿಳಿಸಿದ್ದಾರೆ.

ಇದನ್ನೂ ಓದಿ: ಸಲ್ಲುಗೆ ಕತ್ರಿನಾ ಮೇಲೆ ಇನ್ನೂ ಲವ್​ ಇದೆ ಎಂಬುದಕ್ಕೆ ಈ ಪೋಸ್ಟ್​ ಸಾಕ್ಷಿ; ಫ್ಯಾನ್ಸ್​ ಹೇಳೋದೇನು?

India has achieved 99 per cent coverage of DTP3 in January To March