ವಿದ್ಯುತ್ ವ್ಯವಸ್ಥೆ ಸುಧಾರಿಸುವ ಮಹತ್ವದ ಮಸೂದೆ: ವಿದ್ಯುತ್ ಪೂರೈಕೆದಾರರ ಆಯ್ಕೆ ಸ್ವಾತಂತ್ರ್ಯಕ್ಕೆ ಮುಂಗಾರು ಅಧಿವೇಶನದಲ್ಲಿ ಒಪ್ಪಿಗೆ ಸಾಧ್ಯತೆ

Electricity Amendment Bill 2021: ಬೆಸ್ಕಾಂ ದಿನದ 24 ಗಂಟೆ ವಿದ್ಯುತ್ ಪೂರೈಸದೇ ಇದ್ದಾಗ, ದಿನದ 24 ಗಂಟೆ ಒಳ್ಳೆಯ ವೋಲ್ಟೇಜ್ ನ ವಿದ್ಯುತ್ ಪೂರೈಸುವ ಖಾಸಗಿ ಕಂಪನಿಯ ವಿದ್ಯುತ್ ಅನ್ನೇ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಗ್ರಾಹಕರಿಗೆ ಸಿಗುತ್ತೆ. ಆದರೆ, ಗ್ರಾಮೀಣಾ ಭಾಗದಲ್ಲೂ ಖಾಸಗಿ ವಿದ್ಯುತ್ ಸರಬರಾಜು ಕಂಪನಿಗಳು ಗುಣಮಟ್ಟದ, ದಿನದ 24 ಗಂಟೆ ವಿದ್ಯುತ್ ಪೂರೈಸಲು ಸಾಧ್ಯವೇ ಎಂಬ ಗ್ರಾಹಕರನ್ನು ಕಾಡುತ್ತಿದೆ.

  • Publish Date - 11:44 am, Sat, 17 July 21 Edited By: sadhu srinath
ವಿದ್ಯುತ್ ವ್ಯವಸ್ಥೆ ಸುಧಾರಿಸುವ ಮಹತ್ವದ ಮಸೂದೆ: ವಿದ್ಯುತ್ ಪೂರೈಕೆದಾರರ ಆಯ್ಕೆ ಸ್ವಾತಂತ್ರ್ಯಕ್ಕೆ ಮುಂಗಾರು ಅಧಿವೇಶನದಲ್ಲಿ ಒಪ್ಪಿಗೆ ಸಾಧ್ಯತೆ
ಸಾಂದರ್ಭಿಕ ಚಿತ್ರ

ಭಾರತದಲ್ಲಿ ಇನ್ನೂ ಕೆಲವೇ ತಿಂಗಳುಗಳಲ್ಲಿ ಮೊಬೈಲ್ ಸಿಮ್ ಬದಲಾಯಿಸಿದಂತೆ, ನಿಮ್ಮ ಮನೆಗೆ ವಿದ್ಯುತ್ ಪೂರೈಸುವ ಕಂಪನಿಯನ್ನು ಬದಲಾಯಿಸಬಹುದು. ನಿಮಗೆ ಬೇಕಾದ ಸಿಮ್ ಕಾರ್ಡ್ ಆಯ್ಕೆ ಮಾಡಿಕೊಳ್ಳುವಂತೆ, ನಿಮಗೆ ಬೇಕಾದ ವಿದ್ಯುತ್ ಪೂರೈಕೆದಾರರನ್ನು ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕೆ ಅವಕಾಶ ನೀಡುವ ವಿದ್ಯುತ್(ತಿದ್ದುಪಡಿ) ಮಸೂದೆ 2021ಕ್ಕೆ ಸದ್ಯದಲ್ಲೇ ಕೇಂದ್ರದ ಕ್ಯಾಬಿನೆಟ್ ಒಪ್ಪಿಗೆ ನೀಡುವ ನಿರೀಕ್ಷೆ ಇದೆ. ಬಳಿಕ ಸಂಸತ್‌ನ ಮಾನ್ಸೂನ್ ಅಧಿವೇಶನದಲ್ಲಿ ಮಸೂದೆ ಮಂಡಿಸಿ ಕೇಂದ್ರ ಸರ್ಕಾರ ಒಪ್ಪಿಗೆ ಪಡೆಯಲು ಪ್ಲ್ಯಾನ್ ಮಾಡಿದೆ.

ವಿದ್ಯುತ್ ಬಳಕೆದಾರರೇ ಪೂರೈಕೆದಾರರನ್ನು ಆಯ್ಕೆ ಮಾಡಿಕೊಳ್ಳಬಹುದು
ನಮ್ಮ ದೇಶದಲ್ಲಿ ವಿದ್ಯುತ್ ಪೂರೈಕೆದಾರ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಜನರಿಗೆ ಇಲ್ಲ. ಏಕೆಂದರೇ, ಎಲ್ಲ ಕಡೆ ಒಂದು ಕಂಪನಿ ಮಾತ್ರ ವಿದ್ಯುತ್ ಅನ್ನು ಪೂರೈಸುತ್ತಿದೆ. ದೇಶದಲ್ಲಿ ಎಲ್ಲ ಕಡೆ ಒಂದೊಂದೇ ವಿದ್ಯುತ್ ಪೂರೈಕೆದಾರ ಕಂಪನಿಗಳಿವೆ. ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರನಲ್ಲಿ ಬೆಸ್ಕಾಂ ಮಾತ್ರ ಜನರಿಗೆ ವಿದ್ಯುತ್ ಪೂರೈಸುತ್ತೆ. ಮಂಗಳೂರಿನಲ್ಲಿ ಮೆಸ್ಕಾಂ ಮಾತ್ರ ಜನರಿಗೆ ವಿದ್ಯುತ್ ಪೂರೈಸುತ್ತೆ. ಜನರು ಬೆಸ್ಕಾಂ, ಮೆಸ್ಕಾಂ ಪೂರೈಸುವ ವಿದ್ಯುತ್ ಮೇಲೆಯೇ ಅವಲಂಬಿತವಾಗಬೇಕು. ಆದರೆ, ಇನ್ನೂ ಕೆಲವೇ ತಿಂಗಳುಗಳಲ್ಲಿ ಈ ವ್ಯವಸ್ಥೆ ಬದಲಾಗಲಿದೆ.

ಬೆಸ್ಕಾಂ, ಎಸ್ಕಾಂ ಬಿಟ್ಟು ಬೇರೆ ಕಂಪನಿಗಳನ್ನು ಜನರು ತಮಗೆ ವಿದ್ಯುತ್ ಪೂರೈಕೆ ಮಾಡಲು ಆಯ್ಕೆ ಮಾಡಿಕೊಳ್ಳಬಹುದು. ಇಂಥದೊಂದು ಸ್ವಾತಂತ್ರ್ಯ ವಿದ್ಯುತ್ ಬಳಕೆದಾರ ಗ್ರಾಹಕರಿಗೆ ಸಿಗಲಿದೆ. ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಸುಧಾರಿಸುವ ಮಹತ್ವದ ಮಸೂದೆಯನ್ನು ಕೇಂದ್ರ ಸರ್ಕಾರ ಸಿದ್ದಪಡಿಸಿದೆ. ಸದ್ಯದಲ್ಲೇ ಕೇಂದ್ರದ ಕ್ಯಾಬಿನೆಟ್ ನಲ್ಲಿ ವಿದ್ಯುತ್(ತಿದ್ದುಪಡಿ) ಮಸೂದೆ 2021ಕ್ಕೆ (Electricity Amendment Bill 2021) ಒಪ್ಪಿಗೆ ಸಿಗುವ ನಿರೀಕ್ಷೆ ಇದೆ. ಮುಂದಿನ ಸೋಮವಾರದಿಂದ ಆರಂಭವಾಗುವ ಸಂಸತ್‌ನ ಮಾನ್ಸೂನ್ ಅಧಿವೇಶನದಲ್ಲಿ ಮಸೂದೆ ಮಂಡಿಸಿ ಸಂಸತ್‌ನ ಉಭಯ ಸದನಗಳ ಒಪ್ಪಿಗೆ ಪಡೆಯಲಾಗುತ್ತೆ. ಈಗಾಗಲೇ ಕೇಂದ್ರ ಸರ್ಕಾರವು ಸಂಸತ್‌ನಲ್ಲಿ (parliament monsoon session 2021) ಮಂಡಿಸಲು ಉದ್ದೇಶಿಸಿರುವ ಮಸೂದೆಗಳ ಪಟ್ಟಿಯಲ್ಲಿ ವಿದ್ಯುತ್ (ತಿದ್ದುಪಡಿ) ಮಸೂದೆ 2021ಕೂಡ ಸೇರಿದೆ.

ವಿದ್ಯುತ್ ಸರಬರಾಜು ಕ್ಷೇತ್ರದಲ್ಲಿನ ಏಕಸ್ವಾಮ್ಯವನ್ನು ಕೊನೆಗೊಳಿಸಿ, ವಿವಿಧ ಕಂಪನಿಗಳ ನಡುವೆ ಸ್ಪರ್ಧೆಗೆ ಅವಕಾಶ ನೀಡಲಾಗುತ್ತೆ. ಈಗ ಗ್ರಾಹಕರು ತಮಗೆ ಬೇಕಾದ ಮೊಬೈಲ್ ಸಿಮ್ ಕಂಪನಿಯನ್ನ ಆಯ್ಕೆ ಮಾಡಿಕೊಂಡಂತೆ, ತಮಗೆ ಉತ್ತಮವೆನಿಸಿದ ವಿದ್ಯುತ್ ಪೂರೈಕೆದಾರ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ವಿದ್ಯುತ್ ಪೂರೈಕೆ ಕಂಪನಿಗಳ ಪೈಕಿ ಹಾಲಿ ಇರುವ ಸರ್ಕಾರಿ ಸ್ವಾಮ್ಯದ ಕಂಪನಿಗಳು ಕೂಡ ಇರುತ್ತಾವೆ. ಇವುಗಳ ಜೊತೆಗೆ ಇನ್ನೂ ಕೆಲ ಸರ್ಕಾರಿ, ಖಾಸಗಿ ಸ್ವಾಮ್ಯದ ಕಂಪನಿಗಳು ಕೂಡ ವಿದ್ಯುತ್ ಸರಬರಾಜು ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಾವೆ. ಹೀಗಾಗಿ ಗ್ರಾಹಕರು ಈ ಸರ್ಕಾರಿ, ಖಾಸಗಿ ಸ್ವಾಮ್ಯದ ಕಂಪನಿಗಳ ಪೈಕಿ ಯಾವುದೇ ಕಂಪನಿಯನ್ನು ಬೇಕಾದರೂ ಗ್ರಾಹಕರು ಆಯ್ಕೆ ಮಾಡಿಕೊಳ್ಳುವ ಅವಕಾಶ ಸಿಗಲಿದೆ. ಉತ್ತಮ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಸುವ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಗ್ರಾಹಕರಿಗೆ ಸಿಗಲಿದೆ.

ಬೆಸ್ಕಾಂ ದಿನದ 24 ಗಂಟೆ ವಿದ್ಯುತ್ ಪೂರೈಸದೇ ಇದ್ದಾಗ, ದಿನದ 24 ಗಂಟೆ ಒಳ್ಳೆಯ ವೋಲ್ಟೇಜ್ ನ ವಿದ್ಯುತ್ ಪೂರೈಸುವ ಖಾಸಗಿ ಕಂಪನಿಯ ವಿದ್ಯುತ್ ಅನ್ನೇ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಗ್ರಾಹಕರಿಗೆ ಸಿಗುತ್ತೆ. ಆದರೆ, ಗ್ರಾಮೀಣಾ ಭಾಗದಲ್ಲೂ ಖಾಸಗಿ ವಿದ್ಯುತ್ ಸರಬರಾಜು ಕಂಪನಿಗಳು ಗುಣಮಟ್ಟದ, ದಿನದ 24 ಗಂಟೆ ವಿದ್ಯುತ್ ಪೂರೈಸಲು ಸಾಧ್ಯವೇ ಎಂಬ ಗ್ರಾಹಕರನ್ನು ಕಾಡುತ್ತಿದೆ.

”ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ. ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ಮಂಡಿಸುತ್ತಿದ್ದೇವೆ. ವಿದ್ಯುತ್ ಸರಬರಾಜು ಕಂಪನಿಗಳ ಲೈಸೆನ್ಸ್ ನೀಡಿಕೆಯನ್ನ ಕೈ ಬಿಡಲಾಗುತ್ತಿದೆ. ಇದು ದೊಡ್ಡ ಸುಧಾರಣೆ. ಇದು ಖಂಡಿತವಾಗಿಯೂ ಆಗಬೇಕು. ನಾವು ಎಲ್ಲ ರಾಜ್ಯ ಸರ್ಕಾರಗಳ ಜೊತೆಗೂ ಸಮಾಲೋಚನೆ ನಡೆಸಿದ್ದೇವೆ. ಯಾವುದೇ ರಾಜ್ಯ ಸರ್ಕಾರ ಕೂಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಅವರು ಆಕ್ಷೇಪಣೆಯನ್ನಾದರೂ ಏಕೆ ವ್ಯಕ್ತಪಡಿಸುತ್ತಾರೆ? ನಾವು ಈಗಿರುವ ವಿದ್ಯುತ್ ಸರಬರಾಜು ಕಂಪನಿಗಳಿಗೆ ತೊಂದರೆ ಮಾಡುತ್ತಿಲ್ಲ. ಹಾಲಿ ಇರುವ ವಿದ್ಯುತ್ ಸರಬರಾಜು ಕಂಪನಿಗಳು ಎಂದಿನಂತೆಯೇ ವಿದ್ಯುತ್ ಪೂರೈಕೆ ಮುಂದುವರಿಸುತ್ತಾವೆ. ನಾವು ಲೈಸೆನ್ಸ್ ನೀಡಿಕೆಯನ್ನು ಕೈ ಬಿಡುತ್ತಿದ್ದೇವೆ. ಬೇರೆಯವರು ವಿದ್ಯುತ್ ಸರಬರಾಜು ಕ್ಷೇತ್ರಕ್ಕೆ ಬರಲು ಅವಕಾಶ ಸಿಗುತ್ತೆ. ಬಂದು ಅವರು ಸ್ಪರ್ಧೆ ಮಾಡ್ತಾರೆ. ಇದು ಈ ರೀತಿ ಇರಬೇಕು” ಎಂದು ಕಾನಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿಯ(ಸಿಐಐ) ಸಮಾವೇಶದಲ್ಲಿ ಕೇಂದ್ರದ ಇಂಧನ ಖಾತೆ ಸಚಿವ ರಾಜಕುಮಾರ್ ಸಿಂಗ್ ಹೇಳಿದ್ದಾರೆ.

ಪ್ರಧಾನಿ ಮೋದಿ ಕೂಡ ವಿದ್ಯುತ್ ಬಳಕೆದಾರ ಗ್ರಾಹಕರು, ಬೇರೆ ಚಿಲ್ಲರೆ ವಸ್ತುಗಳನ್ನು ಆಯ್ಕೆ ಮಾಡಿಕೊಂಡಂತೆ, ವಿದ್ಯುತ್ ಸರಬರಾಜುದಾರರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದರು. ಆದರೆ, ವಿದ್ಯುತ್ ಬಳಕೆದಾರ ಗ್ರಾಹಕರಿಗೆ ಸಬ್ಸಿಡಿ ನೀಡಲಾಗುತ್ತಿದೆ. ವಿದ್ಯುತ್ ಪೂರೈಕೆಯಲ್ಲಿ ಸೋರಿಕೆ, ನಷ್ಟವಾಗುತ್ತಿದೆ. ವಿದ್ಯುತ್ ಪೂರೈಕೆಯ ಮೂಲಸೌಕರ್ಯ ಉತ್ತಮ ಸ್ಥಿತಿಯಲ್ಲಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ತಜ್ಞರು ಹೇಳುತ್ತಿದ್ದಾರೆ.

ಹೊಸ ಮಸೂದೆಯಲ್ಲಿ ವಿದ್ಯುತ್ ಸರಬರಾಜು ಕಂಪನಿಗಳು ನಿರ್ದಿಷ್ಟ ಪ್ರಮಾಣದ ನವೀಕರಿಸಬಹುದಾದ ಇಂಧನವನ್ನು ಖರೀದಿಸಲೇಬೇಕು ಎಂದು ಷರತ್ತು ಹಾಕಲಾಗಿದೆ. ಉತ್ತಮ ಸೇವೆ ನೀಡುವ ವಿದ್ಯುತ್ ಸರಬರಾಜು ಕಂಪನಿಗೆ ಗ್ರಾಹಕರು ಶಿಫ್ಟ್ ಆಗಲು ಹೊಸ ಮಸೂದೆ ಅವಕಾಶ ನೀಡುತ್ತೆ. ಕೇಂದ್ರ ಸರ್ಕಾರವು ವಿದ್ಯುತ್ ಸರಬರಾಜು ಕಂಪನಿಗಳನ್ನು ಎಂಟು ಕೇಂದ್ರಾಡಳಿತ ಪ್ರದೇಶಗಳಲ್ಲಿ ಖಾಸಗೀಕರಣ ಮಾಡುವ ಪ್ಲ್ಯಾನ್ ಕೂಡ ಮಾಡುತ್ತಿದೆ. ಕಳೆದ ತಿಂಗಳು ಕೇಂದ್ರ ಸರ್ಕಾರದ ಕ್ಯಾಬಿನೆಟ್ ನಲ್ಲಿ ವಿದ್ಯುತ್ ಕ್ಷೇತ್ರದಲ್ಲಿ 3.03 ಲಕ್ಷ ಕೋಟಿ ರೂಪಾಯಿ ಮೊತ್ತದ ಸುಧಾರಣಾ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು 97,631 ಕೋಟಿ ರೂಪಾಯಿ ಮಾತ್ರ.

(choice of selecting electricity suppliers to customers bill to be passed in parliament monsoon session 2021)