ತಮಿಳುನಾಡಿನ ಅರಿಯಾಲೂರ್ನಿಂದ ಕದ್ದು, ವಿದೇಶಕ್ಕೆ ಸಾಗಿಸಲಾಗಿದ್ದ 500 ವರ್ಷಗಳಷ್ಟು ಹಳೆಯದಾದ ಭಗವಾನ್ ಆಂಜನೇಯನ ವಿಗ್ರಹವನ್ನು (Idol of Lord Hanuman) ಇನ್ನೇನು ಕೆಲವೇ ದಿನಗಳಲ್ಲಿ ಭಾರತಕ್ಕೆ ವಾಪಸ್ ಕರೆತರಲಾಗುತ್ತಿದೆ. ಇದು 14-15ನೇ ಶತಮಾನದ ವಿಗ್ರಹವಾಗಿದ್ದು, ಆಗ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯವಿತ್ತು. ನಂತರ ತಮಿಳುನಾಡಿನ ಅರಿಯಾಲುರ್ ಜಿಲ್ಲೆಯಿಂದ ಕದಿಯಲ್ಪಟ್ಟು, ಇದೀಗ ಆಸ್ಟ್ರೇಲಿಯಾದ ಖಾಸಗಿ ಖರೀದಿದಾರನೊಬ್ಬನ ಸ್ವಾಧೀನದಲ್ಲಿ ಇದ್ದಿದ್ದು ಪತ್ತೆಯಾಗಿದೆ.
ಈ ಬಗ್ಗೆ ನಿನ್ನೆ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ, ತಮಿಳುನಾಡಿನ ದೇವಸ್ಥಾನದಿಂದ ಕಳವಾಗಿದ್ದ 500 ವರ್ಷ ಹಳೇ ಆಂಜನೇಯನ ವಿಗ್ರಹವನ್ನು ಭಾರತಕ್ಕೆ ವಾಪಸ್ ತರಲಾಗುವುದು. ಈಗಾಗಲೇ ಯುಎಸ್ ಹೋಮ್ಲ್ಯಾಂಡ್ ಸೆಕ್ಯೂರಿಟಿ ಈ ವಿಗ್ರಹವನ್ನು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಹಸ್ತಾಂತರ ಮಾಡಿದೆ ಎಂದು ತಿಳಿಸಿದ್ದಾರೆ. ಅಂದಹಾಗೇ, ಈ ಆಂಜನೇಯನ ವಿಗ್ರಹವನ್ನು ಅರಿಯಲೂರಿನ ವೆಲ್ಲೂರು ಗ್ರಾಮದ ವರದರಾಜ ಪೆರುಮಾಳ್ ದೇಗುಲದಿಂದ ಶ್ರೀದೇವಿ ಮತ್ತು ಭೂದೇವಿ ವಿಗ್ರಹಗಳೊಂದಿಗೆ 2012ರ ಏಪ್ರಿಲ್ 9ರಂದು ಕಳವು ಮಾಡಲಾಗಿದ್ದು ಎಂದು ಹೇಳಲಾಗಿದೆ.
ನಂತರ 2014ರಲ್ಲಿ ಕ್ರಿಸ್ಟಿ ಹರಾಜು ಕಂಪನಿ ಈ ವಿಗ್ರಹವನ್ನು ಹರಾಜಿಗೆ ಇಟ್ಟಿತು. 37,500 ಡಾಲರ್ ಕೊಟ್ಟು ಖಾಸಗಿ ವ್ಯಕ್ತಿಯೊಬ್ಬರು ಖರೀದಿ ಮಾಡಿದ್ದರು. ಆದರೆ ಇತ್ತ ಭಾರತದಲ್ಲಿ ಕಳ್ಳತನವಾದ ವಿಗ್ರಹಗಳ ಬಗ್ಗೆ ತನಿಖೆಯೂ ನಡೆಯುತ್ತಿತ್ತು. ತಮಿಳುನಾಡಿನ ಪೊಲೀಸರ ತಂಡ ಈ ಕೇಸ್ ವಿಚಾರವಾಗಿ ಯುಎಸ್ ಹೋಮ್ಲ್ಯಾಂಡ್ ಸೆಕ್ಯೂರಿಟಿಯನ್ನು ಸಂಪರ್ಕಿಸಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಆಸ್ಟ್ರೇಲಿಯಾದಲ್ಲಿ ಹರಾಜು ಕಂಪನಿಗಾಗಲೀ, ಅದನ್ನು ಖರೀದಿಸಿದ ವ್ಯಕ್ತಿಗಾಗಲೀ ಇದು ಕದ್ದ ವಿಗ್ರಹ ಎಂಬ ಬಗ್ಗೆ ಮಾಹಿತಿ ಇರಲಿಲ್ಲ ಎಂದೂ ಹೇಳಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಹೀಗೆ ಹಲವು ವಿಗ್ರಹಗಳನ್ನು ಭಾರತಕ್ಕೆ ವಾಪಸ್ ತರಲಾಗಿದೆ. ಹಿಂದೆಲ್ಲ ಕಳವಾಗಿ ವಿದೇಶಕ್ಕೆ ಸಾಗಿಸಲಾಗಿದ್ದ ದೇವರ ಮೂರ್ತಿಗಳು ಒಂದೊಂದೇ ದೇಶಕ್ಕೆ ವಾಪಸ್ ಬರುತ್ತಿವೆ. ಎರಡು ದಶಕಗಳ ಹಿಂದೆ ಬಿಹಾರದ ಕುಂಡಲ್ಪುರ ದೇವಸ್ಥಾನದಿಂದ ಕಳವಾದ ಅವಲೋಕಿತೇಶ್ವರ ಪದ್ಮಪಾಣಿ (ಬುದ್ಧ) ವಿಗ್ರಹ ಇಟಲಿಯಲ್ಲಿ ಪತ್ತೆಯಾಗಿದೆ. ಮಿಲನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಅದನ್ನು ನೀಡಲಾಗಿದ್ದು, ಕೆಲವೇ ದಿನಗಳಲ್ಲಿ ಭಾರತಕ್ಕೆ ಬರಲಿದೆ. ಈ ವಿಗ್ರಹ 8-12ನೇ ಶತಮಾನದ್ದು, 2000ನೇ ಇಸ್ವಿಯಲ್ಲಿ ಕಳವಾಗಿತ್ತು. ವಾರಾಣಸಿಯ ದೇವಸ್ಥಾನವೊಂದರಿಂದ 100ವರ್ಷಗಳ ಹಿಂದೆ ಕಳವಾಗಿದ್ದ, 18ನೇ ಶತಮಾನದ ದೇವಿ ಅನ್ನಪೂರ್ಣಾ ವಿಗ್ರಹವನ್ನು 2021ರ ಅಕ್ಟೋಬರ್ನಲ್ಲಿ ಕೆನಡಾದ ಒಟ್ಟಾವಾದಿಂದ ವಾಪಸ್ ತರಲಾಗಿತ್ತು.
ಇದನ್ನೂ ಓದಿ: iQOO 9 Series: ಬಿಡುಗಡೆ ಆದ ದಿನವೇ ಭಾರತದಲ್ಲಿ ಸಖತ್ ಸದ್ದು ಮಾಡುತ್ತಿದೆ ಐಕ್ಯೂ 9 ಸರಣಿ ಸ್ಮಾರ್ಟ್ಫೋನ್
Published On - 8:37 am, Thu, 24 February 22