ನೀವೇನು ಮಾಡಿದ್ರಿ: ಇದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಮಹಾರಾಷ್ಟ್ರದ ಶರದ್ ಪವಾರ್ ಕೇಳಿದ ಪ್ರಶ್ನೆ
ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ತಮ್ಮ ಸಂಪೂರ್ಣ ಬೆಂಬಲ ಎನ್ಸಿಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಇದೆ ಎಂದು ಹೇಳಿದ್ದರು.
ಮುಂಬೈ: ಮಹಾರಾಷ್ಟ್ರದ ಹಿರಿಯ ರಾಜಕಾರಿಣಿ ಶರದ್ ಪವಾರ್ (Sharad Pawar) ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಬುಧವಾರ ದೂರವಾಣಿ ಸಂಭಾಷಣೆ ನಡೆಸಿದರು. ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಎನ್ಸಿಪಿ ನಾಯಕ ನವಾಬ್ ಮಲಿಕ್ ಅವರ ಬಂಧನಕ್ಕೆ ಸಂಬಂಧಿಸಿದಂತೆ ಇಬ್ಬರೂ ನಾಯಕರು ಚರ್ಚಿಸಿದರು. 10 ನಿಮಿಷಗಳ ಸಂಭಾಷಣೆಯಲ್ಲಿ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ತಮ್ಮ ಸಂಪೂರ್ಣ ಬೆಂಬಲ ಎನ್ಸಿಪಿ ನೇತೃತ್ವದ ಸರ್ಕಾರಕ್ಕೆ ಇದೆ ಎಂದು ಹೇಳಿದ್ದರು.
ನಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವರನ್ನು ಬಂಧಿಸಿದಾಗ ನೀವು ಅವರನ್ನು ಸಂಪುಟದಿಂದ ವಜಾ ಮಾಡಿದ್ದೀರಾ ಎಂದು ಮಮತಾ ಅವರನ್ನು ಪವಾರ್ ಕೇಳಿದರು. ಒಟ್ಟಾರೆ ಪ್ರಕರಣವನ್ನು ಹೇಗೆ ನಿರ್ವಹಿಸಿದಿರಿ. ಈ ಹಂತದಲ್ಲಿ ನಾವು ಏನು ಮಾಡಬೇಕು ಎಂಬ ಸಲಹೆಯನ್ನು ಅವರು ಕೋರಿದರು. ಇದಕ್ಕೆ ಉತ್ತರಿಸಿದ ಮಮತಾ ಬ್ಯಾನರ್ಜಿ, ‘ಕಳೆದ ವರ್ಷ ಚುನಾವಣೆ ಸಂದರ್ಭದಲ್ಲಿ ನಾನೂ ಇಂಥದ್ದೇ ಪರಿಸ್ಥಿತಿ ಅನುಭವಿಸಿದ್ದೆ. ಕೆಲ ಸಚಿವರನ್ನು ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ಗುರಿಯಾಗಿಸಿದ್ದವು. ಅವರಿಂದ ರಾಜೀನಾಮೆ ಪಡೆಯಬೇಕು ಎನ್ನುವ ಒತ್ತಡವನ್ನು ನಾನು ಮೆಟ್ಟಿನಿಂತಿದ್ದೆ’ ಎಂದು ಮಮತಾ ಬ್ಯಾನರ್ಜಿ ಶರದ್ ಪವಾರ್ ಅವರಿಗೆ ವಿವರಿಸಿದರು. ನವಾಬ್ ಮಲಿಕ್ ಬಂಧನವನ್ನು ಖಂಡಿಸಿದ ಬ್ಯಾನರ್ಜಿ, ಅವರನ್ನು ಸಂಪುಟದಿಂದ ಕೈಬಿಡುವ ಮೂಲಕ ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯಬಾರದು ಎಂದು ಸಲಹೆ ಮಾಡಿದರು.
ಜಾರಿ ನಿರ್ದೇಶನಾಲಯ ಸೇರಿದಂತೆ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ತನ್ನ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದೆ. ಇಬ್ಬರೂ ನಾಯಕರು ವಿರೋಧ ಪಕ್ಷದ ಏಕತೆಯನ್ನು ಪುನರುಚ್ಚರಿಸಿದರು. ಈ ಮಾತುಕತೆಯ ನಂತರ ನವಾಬ್ ಮಲಿಕ್ರ ರಾಜೀನಾಮೆ ಕೇಳುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ತನ್ನ ನಿರ್ಧಾರ ಘೋಷಿಸಿತು. ‘ಕೇಂದ್ರ ಸರ್ಕಾರದ ಕ್ರಮ ಖಂಡಿಸಿ, ಮಹಾರಾಷ್ಟ್ರ ಸಚಿವಾಲಯದ ಎದುರಿನ ಗಾಂಧಿ ಸ್ಮಾರಕ ಸಂಸ್ಥೆಯ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಸಚಿವರಾದ ಬಾಳಾಸಾಹೇಬ್ ತೊರಟ್ ಮತ್ತು ಛಗನ್ ಭುಜ್ಬಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಕಳೆದ 30 ವರ್ಷಗಳಲ್ಲಿ ಯಾರೊಬ್ಬರೂ ನವಾಬ್ ಮಲಿಕ್ ಅವರ ಹೆಸರನ್ನು ಮುಂಬೈ ಸ್ಫೋಟದ ಪ್ರಕರಣದಲ್ಲಿ ಎಳೆದು ತಂದಿರಲಿಲ್ಲ. ಆದರೆ ಈಗ ಅವರು ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಲು ಆರಂಭಿಸಿದ್ದಾರೆ. ಅವರ ಬಾಯಿ ಮುಚ್ಚಿಸಬೇಕು ಎಂದೇ ಕೇಂದ್ರ ಈ ಕೆಲಸ ಮಾಡಿದೆ. ಇದು ದುರಾದೃಷ್ಟಕರ ಸಂಗತಿ. ಇದು ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹೇರಲು ಕೇಂದ್ರ ಸರ್ಕಾರ ಮಾಡುತ್ತಿರುವ ಪ್ರಯತ್ನ. ನಾವು ಇದನ್ನು ಖಂಡಿಸುತ್ತೇವೆ. ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮ’ ಎಂದು ಭುಜಬಲ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Nawab Malik: ಸಮೀರ್ ವಾಂಖೆಡೆ ವಿರುದ್ಧದ ಹೇಳಿಕೆಗೆ ಬಾಂಬೆ ಹೈಕೋರ್ಟ್ಗೆ ಬೇಷರತ್ ಕ್ಷಮೆ ಯಾಚಿಸಿದ ನವಾಬ್ ಮಲಿಕ್
ಇದನ್ನೂ ಓದಿ: ಧ್ಯಾನ್ದೇವ್ ವಾಂಖೆಡೆ ಕುಟುಂಬದ ವಿರುದ್ಧ ಡಿಸೆಂಬರ್ 9ರವರೆಗೆ ಸಾರ್ವಜನಿಕವಾಗಿ ಯಾವುದೇ ಪೋಸ್ಟ್ ಮಾಡುವುದಿಲ್ಲ: ನವಾಬ್ ಮಲಿಕ್