ಆಂಧ್ರ ಪ್ರದೇಶ: ದೇಶದಲ್ಲಿ ಮಹಾಮಾರಿ ಕೊರೊನಾ ಜನರಲ್ಲಿ ತಲ್ಲಣ ಉಂಟು ಮಾಡಿದೆ. ಈಗಾಗಲೇ ಕೊರೊನಾಗೆ ವ್ಯಾಕ್ಸಿನ್ ಬಂದಿದ್ರೂ ದೇಶದ ಎಲ್ಲರಿಗೂ ಈಗಲೇ ತಲುಪಿಸಲು ಆಗ್ತಿಲ್ಲ. ಇದರ ನಡುವೆ ಅಲ್ಲಲ್ಲಿ ಕೆಲವರು ಆಯುರ್ವೇದಿಕ್ ಔಷಧಿಗಳನ್ನ ನೀಡ್ತಿದ್ದಾರೆ. ಕೊರೊನಾಗೆ ಆಯುರ್ವೇದಿಕ್ ಔಷಧ ನೀಡಿದ್ರೆ ಗುಣವಾಗುತ್ತೆ ಅಂತಾ ಹೇಳಿಕೊಂಡಿದ್ದಾರೆ. ಇಂತಹವರಲ್ಲಿ ಒಬ್ಬರು ಅಂದ್ರೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ನಂ ನಿವಾಸಿ ಆನಂದಯ್ಯ ಕೂಡ ಒಬ್ಬರು. ಆನಂದಯ್ಯನವರ ಆಯುರ್ವೇದಿಕ್ ಔಷಧಿಯಿಂದ ಕೊರೊನಾ ಗುಣಮುಖವಾಗುತ್ತೆ ಅಂತಾ ಸಾವಿರಾರು ಜನ ಔಷಧಕ್ಕೆ ಮುಗಿ ಬಿದ್ದಿದ್ರು. ಆದ್ರೆ, ಯಾವುದೇ ಸಂಶೋಧನೆ ಅಥವಾ ಅಧ್ಯಯನ ನಡೆಸದೆ ಆನಂದಯ್ಯ ಔಷಧ ನೀಡ್ತಿದ್ದಾರೆ ಅನ್ನೋ ಕಾರಣಕ್ಕೆ ಅವರು ಔಷಧ ನೀಡದಂತೆ ಆಂಧ್ರಪ್ರದೇಶ ಸರ್ಕಾರ ತಡೆಯೊಡ್ಡಿತ್ತು. ಈಗ ಆನಂದಯ್ಯ ಔಷಧ ನೀಡಬಹುದು ಅಂತಾ ಆಂಧ್ರ ಹೈಕೋರ್ಟ್ ಮತ್ತು ಆಂಧ್ರ ಸರ್ಕಾರ ಎರಡೂ ಗ್ರೀನ್ ಸಿಗ್ನಲ್ ನೀಡಿವೆ.
ಆನಂದಯ್ಯರ ಆಯುರ್ವೇದಿಕ್ ಔಷಧ ನೀಡಲು ಕೋರ್ಟ್ ಅಸ್ತು
ಆನಂದಯ್ಯರ ಔಷಧ ನೀಡಲು ಸರ್ಕಾರ ತಡೆಯೊಡ್ಡಿರೋದನ್ನ ಪ್ರಶ್ನಿಸಿ ಆನಂದಯ್ಯ ಮತ್ತು ಇತರ ಇಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ರು. ಸೋಮವಾರ ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರ ಔಷಧ ವಿತರಣೆಗೆ ನಿಷೇಧ ಹೇರಿದ್ದು ಯಾಕೆ ಅಂತಾ ಸರ್ಕಾರವನ್ನ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಸರ್ಕಾರದ ಪರ ವಕೀಲರು, ಆನಂದಯ್ಯ ನೀಡ್ತಿರೋ ಔಷಧದ ಬಗ್ಗೆ ಸರ್ಕಾರ ಪರಿಶೀಲನೆ ನಡೆಸ್ತಿದೆ. ಇದಾದ ಬಳಿಕ ಉತ್ತರ ನೀಡೋದಾಗಿ ಹೇಳಿದ್ರು. ಆನಂದಯ್ಯ ಪರ ವಕೀಲರು ಸರ್ಕಾರಕ್ಕೆ ಔಷಧ ನಿಷೇಧಿಸುವ ಯಾವುದೇ ಅಧಿಕಾರವಿಲ್ಲ ಅಂತಾ ವಾದಿಸಿದ್ರು. ಬಳಿಕ ಮಧ್ಯಾಹ್ನ 3 ಗಂಟೆಗೆ ಮತ್ತೊಮ್ಮೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಕಣ್ಣಿಗೆ ಹಾಕುವ ಡ್ರಾಪ್ಸ್ ಹೊರತು ಪಡಿಸಿ ಉಳಿದ ಔಷಧಗಳನ್ನ ನೀಡಲು ಗ್ರೀನ್ ಸಿಗ್ನಲ್ ನೀಡಿತು. ಇದೇ ರೀತಿ ಸೆಂಟ್ರಲ್ ಕೌನ್ಸಿಲ್ ಆಫ್ ರಿಸರ್ಚ್ ಫಾರ್ ಆಯುರ್ವೇದಿಕ್ ಸೈನ್ಸ್ಸ್ ಕೂಡ, ಆನಂದಯ್ಯರ ಔಷಧದಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ. ಹೀಗಾಗಿ ಔಷಧ ವಿತರಣೆಗೆ ಅನುಮತಿ ನೀಡಿ ಅಂತಾ ಆಂಧ್ರ ಸರ್ಕಾರಕ್ಕೆ ಹೇಳಿತ್ತು. ಇದನ್ನು ಆಧರಿಸಿ ಆನಂದಯ್ಯ ಔಷಧ ವಿತರಣೆಗೆ ಸರ್ಕಾರ ಅನುಮತಿ ನೀಡಿದೆ. ಆದ್ರೆ, ಕೊವಿಡ್ ರೋಗಿಗಳ ಬದಲು ಅವರ ಸಂಬಂಧಿಕರು ಮಾತ್ರ ಔಷಧ ತೆಗೆದುಕೊಂಡು ಬರಬಹುದು ಅಂತಾ ಹೇಳಿದೆ.
ಔಷಧ ನೀಡಲು ಸಿದ್ಧತೆ
ಆನಂದಯ್ಯ ನಾಳೆಯಿಂದ ಕೊವಿಡ್‌ಗೆ ಔಷಧ ವಿತರಿಸಲಿದ್ದಾರೆ. ತಮ್ಮ ಸ್ವಂತ ತೋಟದಲ್ಲಿ ಔಷಧಿ ತಯಾರಿಕೆಗೆ ಆನಂದಯ್ಯ ಆಸಕ್ತಿ ಹೊಂದಿದ್ದರು ಆದರೆ ಅಧಿಕಾರಿಗಳು ಇದಕ್ಕೆ ಒಪ್ಪದ ಕಾರಣ ಕೃಷ್ಣಪಟ್ಟಣಂನ ಸಿವಿಆರ್ ಕಾಂಪ್ಲೆಕ್ಸ್‌ನಲ್ಲಿ ಔಷಧ ವಿತರಣೆ ಮಾಡಲಿದ್ದಾರೆ. ಹೀಗಾಗಿ ಆನಂದಯ್ಯ ಬೆಂಬಲಿಗರು ಔಷಧಿ ಸಾಮಾಗ್ರಿ, ತಯಾರಿಕೆ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದಾರೆ.
ಆನಂದಯ್ಯ ಔಷಧ ಫೇಮಸ್ ಮಾಡಿದ್ದ ಕೋಟಯ್ಯ ಮೃತ
ಒಂದೆಡೆ ಆನಂದಯ್ಯ ಔಷಧಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ರೆ, ಈ ಆನಂದಯ್ಯನವರ ಔಷಧ ಫೇಮಸ್ ಆಗಲು ಕಾರಣರಾಗಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಕೋಟಯ್ಯ, ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಆನಂದಯ್ಯ ಔಷಧ ತೆಗೆದುಕೊಂಡ ಬಳಿಕ ತಮಗೆ ಉಸಿರಾಟದ ತೊಂದರೆ ನಿವಾರಣೆಯಾಗಿದೆ. ಈಗ ನಾನು ಆರಾಮಾಗಿದ್ದೇನೆ ಅಂತಾ ಕೋಟಯ್ಯ ಹೇಳಿಕೊಂಡಿದ್ರು. ಆದ್ರೆ, ಕಳೆದ 10 ದಿನಗಳ ಹಿಂದೆ ಅವರಿಗೆ ಮತ್ತೆ ಮಹಾಮಾರಿ ಕೊರೊನಾ ಅಟ್ಯಾಕ್ ಆಗಿತ್ತು. 3 ದಿನಗಳ ಹಿಂದೆ ವೆಂಟಿಲೇಟರ್ ಸಪೋರ್ಟ್ ಮೂಲಕ ಉಸಿರಾಡ್ತಿದ್ರು. ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಕೋಟಯ್ಯ ಮೃತಪಟ್ಟಿದ್ದಾರೆ.
ಆಯುರ್ವೇದಿಕ್ ಔಷಧ ತಯಾರಕ ಆನಂದಯ್ಯ ಔಷಧ ವಿತರಣೆಗೆ ಇದ್ದ ಅಡೆತಡೆ ನಿವಾರಣೆಯಾಗಿದೆ. ಹೀಗಾಗಿ ಮತ್ತೆ ಕೃಷ್ಣಪಟ್ನಂಗೆ ಸಾವಿರಾರು ಸಂಖ್ಯೆಯ ಜನ ಆಗಮಿಸೋ ನಿರೀಕ್ಷೆ ಇದೆ. ಇದೇ ಕಾರಣಕ್ಕೆ ಆನಂದಯ್ಯ ಈಗಾಗಲೇ ಔಷಧ ತಯಾರಿಯಲ್ಲಿ ತೊಡಗಿದ್ದು.. ಜನರಿಗೆ ಎಷ್ಟು ಅನುಕೂಲವಾಗಲಿದೆ ಅಂತಾ ಕಾದು ನೋಡಬೇಕಿದೆ.
ಇದನ್ನೂ ಓದಿ: Anandayya Medicine : ಆನಂದಯ್ಯನ ಔಷಧಿ ಅಂತ ಬೇರೆಯವರಿಂದಲೂ ವಿತರಣೆ, ಮುಗಿಬಿದ್ದ ಜನ