ಕುಡಿಯುವ ನೀರು ವಿಚಾರವಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವೆ ಜಗಳ; ಕೇಂದ್ರ ಮಧ್ಯಪ್ರವೇಶ

ತೆಲಂಗಾಣ ಮತ್ತು ಆಂಧ್ರಪ್ರದೇಶ ನಡುವ ಉದ್ವಿಗ್ನತೆ ಭುಗಿಲೆದ್ದ ಕಾರಣ, ಕೇಂದ್ರವು ಮಧ್ಯಪ್ರವೇಶಿಸಿದ್ದು ನವೆಂಬರ್ 28 ರಂತೆ ನಾಗಾರ್ಜುನ ಸಾಗರ್ ನೀರನ್ನು ಬಿಡುಗಡೆ ಮಾಡಲು ಎರಡೂ ರಾಜ್ಯಗಳನ್ನು ಒತ್ತಾಯಿಸಿದೆ. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ತೆಲಂಗಾಣ ಮತ್ತು ಆಂಧ್ರಪ್ರದೇಶದೊಂದಿಗೆ ವಿಡಿಯೊ ಸಂವಾದ ನಡೆಸಿ ಇದನ್ನು ಹೇಳಿದ್ದು ಎರಡೂ ರಾಜ್ಯಗಳು ಯೋಜನೆಗೆ ಒಪ್ಪಿಗೆ ಸೂಚಿಸಿವೆ.

ಕುಡಿಯುವ ನೀರು ವಿಚಾರವಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವೆ ಜಗಳ; ಕೇಂದ್ರ ಮಧ್ಯಪ್ರವೇಶ
ತೆಲಂಗಾಣ- ಆಂಧ್ರಪ್ರದೇಶ ನಡುವೆ ನೀರಿಗಾಗಿ ಜಗಳ

Updated on: Dec 02, 2023 | 2:32 PM

ಹೈದರಾಬಾದ್ ಡಿಸೆಂಬರ್ 02: ತೆಲಂಗಾಣ ಚುನಾವಣೆ  (Telangana Assembly Election) ಫಲಿತಾಂಶ ಡಿಸೆಂಬರ್ 3 ಅಂದರೆ ನಾಳೆ ಪ್ರಕಟವಾಗಲಿದೆ. ಇದಕ್ಕಿಂತ ಮುನ್ನ ಆಂಧ್ರಪ್ರದೇಶ (Andhra Pradesh) ನಾಗಾರ್ಜುನ ಸಾಗರ ಅಣೆಕಟ್ಟಿನ (Nagarjuna Sagar Dam) ಉಸ್ತುವಾರಿ ವಹಿಸಿಕೊಂಡಿದ್ದು ನೀರು ಬಿಡುಗಡೆ ಮಾಡಲು ಪ್ರಾರಂಭಿಸಿದೆ. ಆಂಧ್ರ ಪ್ರದೇಶದ ಈ ನಡೆ ಎರಡು ರಾಜ್ಯಗಳ ನಡುವೆ ಉದ್ವಿಗ್ನತೆಗೆ ಕಾರಣವಾಯಿತು. ಗುರುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ತೆಲಂಗಾಣದ ಬಹುತೇಕ ಅಧಿಕಾರಿಗಳು ಮತದಾನದಲ್ಲಿ ನಿರತರಾಗಿದ್ದಾಗ ಸುಮಾರು 700 ಆಂಧ್ರ ಪೊಲೀಸರು ಯೋಜನೆಗೆ ನುಗ್ಗಿ ಬಲಭಾಗದ ಕಾಲುವೆ ತೆರೆದು ಗಂಟೆಗೆ 500 ಕ್ಯೂಸೆಕ್ ಕೃಷ್ಣಾ ನೀರನ್ನು ಬಿಡುಗಡೆ ಮಾಡಿದರು.

“ನಾವು ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೃಷ್ಣಾ ನದಿಯ ನಾಗಾರ್ಜುನಸಾಗರ ಬಲಭಾಗದ  ಕಾಲುವೆಯಿಂದ ನೀರು ಬಿಡುತ್ತಿದ್ದೇವೆ” ಎಂದು ಆಂಧ್ರಪ್ರದೇಶ ರಾಜ್ಯದ ನೀರಾವರಿ ಸಚಿವ ಅಂಬಟಿ ರಾಂಬಾಬು ಗುರುವಾರ ಬೆಳಿಗ್ಗೆ ಎಕ್ಸ್‌ನಲ್ಲಿ ರಹಸ್ಯ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಅದೇ ವೇಳೆ ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವಿನ ಒಪ್ಪಂದದ ಪ್ರಕಾರ ರಾಜ್ಯಕ್ಕೆ ಸೇರಿದ ನೀರನ್ನು ಮಾತ್ರ ತೆಗೆದುಕೊಂಡಿದ್ದೇವೆ ಎಂದು ಸಚಿವರು ಸ್ಪಷ್ಟಪಡಿಸಿದರು.


ನಾವು ಯಾವುದೇ ಒಪ್ಪಂದವನ್ನು ಉಲ್ಲಂಘಿಸಿಲ್ಲ, ಕೃಷ್ಣಾ ನೀರಿನಲ್ಲಿ 66% ಆಂಧ್ರಪ್ರದೇಶಕ್ಕೆ ಮತ್ತು 34% ತೆಲಂಗಾಣಕ್ಕೆ ಸೇರಿದೆ, ನಮಗೆ ಸೇರದ ಒಂದು ಹನಿ ನೀರನ್ನು ಸಹ ನಾವು ಬಳಸಿಲ್ಲ, ನಮ್ಮ ಸೀಮೆಯಲ್ಲಿ ನಮ್ಮ ಕಾಲುವೆಯನ್ನು ತೆರೆಯಲು ನಾವು ಪ್ರಯತ್ನಿಸಿದ್ದೇವೆ. ಈ ನೀರು ನಮ್ಮದು ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ ರಾಂಬಾಬು ಹೇಳಿದ್ದಾರೆ.

ಉದ್ವಿಗ್ನತೆ ಭುಗಿಲೆದ್ದ ಕಾರಣ, ಕೇಂದ್ರವು ಮಧ್ಯಪ್ರವೇಶಿಸಿದ್ದು ನವೆಂಬರ್ 28 ರಂತೆ ನಾಗಾರ್ಜುನ ಸಾಗರ್ ನೀರನ್ನು ಬಿಡುಗಡೆ ಮಾಡಲು ಎರಡೂ ರಾಜ್ಯಗಳನ್ನು ಒತ್ತಾಯಿಸಿದೆ. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ತೆಲಂಗಾಣ ಮತ್ತು ಆಂಧ್ರಪ್ರದೇಶದೊಂದಿಗೆ ವಿಡಿಯೊ ಸಂವಾದ ನಡೆಸಿ ಇದನ್ನು ಹೇಳಿದ್ದು ಎರಡೂ ರಾಜ್ಯಗಳು ಯೋಜನೆಗೆ ಒಪ್ಪಿಗೆ ಸೂಚಿಸಿವೆ.

ಹೆಚ್ಚಿನ ಘರ್ಷಣೆಯನ್ನು ತಪ್ಪಿಸಲು, ಅಣೆಕಟ್ಟನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮೇಲ್ವಿಚಾರಣೆ ಮಾಡುತ್ತದೆ, ಇದು ಒಪ್ಪಂದದ ಪ್ರಕಾರ ಎರಡೂ ಕಡೆ ನೀರು ಪಡೆಯುತ್ತಿದೆ ಎಂದು ನೋಡುತ್ತದೆ.

ಆಂಧ್ರಪ್ರದೇಶದ ಸುಮಾರು 500 ಶಸ್ತ್ರಸಜ್ಜಿತ ಪೊಲೀಸರು ನಾಗಾರ್ಜುನ ಸಾಗರ್ ಅಣೆಕಟ್ಟಿಗೆ ಬಂದು ಸಿಸಿಟಿವಿ ಕ್ಯಾಮೆರಾಗಳನ್ನು ಹಾನಿಗೊಳಿಸಿದ್ದಾರೆ ಮತ್ತು ಗೇಟ್ ಸಂಖ್ಯೆ 5 ಮತ್ತು7ನಲ್ಲಿರಿಸಿದ್ದ ಹೆಡ್ ರೆಗ್ಯುಲೇಟರ್‌ಗಳನ್ನು ತೆರೆದು ಸುಮಾರು 5,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದ್ದಾರೆ ಎಂದು ತೆಲಂಗಾಣ ಮುಖ್ಯ ಕಾರ್ಯದರ್ಶಿ ಶಾಂತಿ ಕುಮಾರಿ ಗುರುವಾರ ಆರೋಪಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಚುನಾವಣಾ ಫಲಿತಾಂಶ ಪ್ರಕಟ ಬಳಿಕ ತೆಲಂಗಾಣದ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಸ್ಥಳಾಂತರ ಸಾಧ್ಯತೆ

ಆಂಧ್ರಪ್ರದೇಶದ ಈ ಕ್ರಮವು ತರುವಾಯ ತೆಲಂಗಾಣದಲ್ಲಿ “ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು” ಸೃಷ್ಟಿಸಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿರುವಾಗ, ಇದು ಹೈದರಾಬಾದ್ ಮತ್ತು ಸುತ್ತಮುತ್ತಲಿನ ಎರಡು ಕೋಟಿ ಜನರಿಗೆ ಕುಡಿಯುವ ನೀರಿನ ಪೂರೈಕೆಯನ್ನು ಗಂಭೀರವಾಗಿ ಅಡ್ಡಿಪಡಿಸುತ್ತದೆ ಎಂದು ಶಾಂತಿ ಕುಮಾರಿ ಆತಂಕ ವ್ಯಕ್ತಪಡಿಸಿದರು.

ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಆಂಧ್ರ ಪೊಲೀಸರ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. 2015 ರಲ್ಲಿ, ಆಂಧ್ರ ಪೊಲೀಸರು ಅಣೆಕಟ್ಟಿಗೆ ನುಗ್ಗಲು ಇದೇ ರೀತಿಯ ಪ್ರಯತ್ನವನ್ನು ಮಾಡಿದ್ದರು, ಆದರೆ ತೆಲಂಗಾಣ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಪ್ರಯತ್ನವನ್ನು ತಡೆದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ