ಚುನಾವಣಾ ಫಲಿತಾಂಶ ಪ್ರಕಟ ಬಳಿಕ ತೆಲಂಗಾಣದ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಸ್ಥಳಾಂತರ ಸಾಧ್ಯತೆ
ತೆಲಂಗಾಣದಲ್ಲಿ ಭಾನುವಾರ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಶಾಸಕರನ್ನು ಬೆಂಗಳೂರು ಅಥವಾ ಯಾವುದೇ ಕಾಂಗ್ರೆಸ್ ಆಡಳಿತದ ರಾಜ್ಯಕ್ಕೆ ಸ್ಥಳಾಂತರಿಸುವ ಬಗ್ಗೆ ತೀರ್ಮಾನಿಸುತ್ತದೆ .ಕಾಂಗ್ರೆಸ್‌ಗೆ 70 ಸ್ಥಾನಗಳಿಗಿಂತ ಕಡಿಮೆಯಾದರೆ, ಶಾಸಕರನ್ನು ಬೆಂಗಳೂರು ಅಥವಾ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸುವ ಪ್ರಸ್ತಾಪವಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಬೆಂಗಳೂರು ಡಿಸೆಂಬರ್ 1: ನಿನ್ನೆ(ಗುರುವಾರ) ಮುಕ್ತಾಯಗೊಂಡ ತೆಲಂಗಾಣ (Telangana) ವಿಧಾನಸಭಾ ಚುನಾವಣೆ ಬಗ್ಗೆ ಮತಗಟ್ಟೆ ಸಮೀಕ್ಷೆಗಳು ಆಡಳಿತಾರೂಢ ಭಾರತೀಯ ರಾಷ್ಟ್ರ ಸಮಿತಿ (BRS) ಸೇರಿದಂತೆ ಇತರ ಪಕ್ಷಗಳಿಗಿಂತ ಹೆಚ್ಚಿನ ಸ್ಥಾನ ಕಾಂಗ್ರೆಸ್‌ಗೆ ಲಭಿಸಲಿದೆ ಎಂದು ಭವಿಷ್ಯ ನುಡಿದಿರುವುದರಿಂದ ಕಾಂಗ್ರೆಸ್ (Congress) ಹೈಕಮಾಂಡ್ ತನ್ನ ಶಾಸಕರನ್ನು ಬೇರೆ ನಗರಕ್ಕೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಡಿಸೆಂಬರ್ 3ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು ‘ಶಾಸಕರ ಖರೀದಿ’ ಪ್ರಕ್ರಿಯೆ ತಡೆಯಲು ಈ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಭಾನುವಾರದ ಮತ ಎಣಿಕೆಯ ನಂತರ ಪಕ್ಷದ ಹೈಕಮಾಂಡ್ ಶಾಸಕರನ್ನು ಬೆಂಗಳೂರು ಅಥವಾ ಯಾವುದೇ ಕಾಂಗ್ರೆಸ್ ಆಡಳಿತದ ರಾಜ್ಯಕ್ಕೆ ಸ್ಥಳಾಂತರಿಸುವ ಬಗ್ಗೆ ತೀರ್ಮಾನಿಸುತ್ತದೆ.ಕಾಂಗ್ರೆಸ್‌ಗೆ 70 ಸ್ಥಾನಗಳಿಗಿಂತ ಕಡಿಮೆಯಾದರೆ, ಶಾಸಕರನ್ನು ಬೆಂಗಳೂರು ಅಥವಾ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸುವ ಪ್ರಸ್ತಾಪವಿದೆ, ಬಹುಶಃ ಅವರನ್ನು ಹೋಟೆಲ್ ಅಥವಾ ರೆಸಾರ್ಟ್‌ಗೆ ಸೀಮಿತಗೊಳಿಸಬಹುದು ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಕಾಂಗ್ರೆಸ್‌ಗೆ 2/3 ಬಹುಮತದ ವಿಶ್ವಾಸ
ಆದಾಗ್ಯೂ, ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಅವರು ‘ಮೂರನೇ ಎರಡು ಬಹುಮತದೊಂದಿಗೆ’ ಪಕ್ಷದ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಕಾಂಗ್ರೆಸ್ ಈ ಬಾರಿ ಪ್ರಚಂಡ ಗೆಲುವು ಸಾಧಿಸಲಿದೆ. ಅದೇ ವಿಷಯ ಮತಗಟ್ಟೆ ಸಮೀಕ್ಷೆಗಳಲ್ಲಿ ಪ್ರತಿಫಲಿಸುತ್ತದೆ. ನಾವು 80 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದ್ದೇವೆ.ಸ್ಕ್ರೀನಿಂಗ್ ಕಮಿಟಿ ಮತ್ತು ಆಯ್ಕೆ ಸಮಿತಿ ಇದೆ. ನಂತರ ಕಾಂಗ್ರೆಸ್ ವರ್ಕಿಂಗ್ ಕಮಿಟಿ (ಸಿಡಬ್ಲ್ಯೂಸಿ) ತೀರ್ಮಾನ ತೆಗೆದುಕೊಳ್ಳುತ್ತದೆ. ಕಾಂಗ್ರೆಸ್‌ನಲ್ಲಿ ಎಲ್ಲದಕ್ಕೂ ಒಂದು ಪ್ರಕ್ರಿಯೆ ಇದೆ. ಪಿಸಿಸಿ ಅಧ್ಯಕ್ಷನಾಗಿ ನಾನು ಹೈಕಮಾಂಡ್‌ನ ಪ್ರತಿಯೊಂದು ಆದೇಶವನ್ನು ಪಾಲಿಸಬೇಕಾಗುತ್ತದೆ ಎಂದು ಎಕ್ಸಿಟ್ ಪೋಲ್ ಭವಿಷ್ಯ ನುಡಿದ ನಂತರ ರೆಡ್ಡಿ ಹೇಳಿದ್ದಾರೆ. 119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು ಮ್ಯಾಜಿಕ್ ಫಿಗರ್ 60 ಆಗಿದೆ.
ಶಾಸಕರನ್ನು ಸ್ಥಳಾಂತರಿಸುವಲ್ಲಿ ಡಿಕೆಶಿಗೆ ಪ್ರಮುಖ ಪಾತ್ರ?
ಶಾಸಕರನ್ನು ಸ್ಥಳಾಂತರಿಸುವ ತಯಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಇರುವ ಪ್ರತಿ ಕ್ಷೇತ್ರಕ್ಕೆ ಇಬ್ಬರು ಸಂಯೋಜಕರನ್ನು ಕಳುಹಿಸಿದೆ ಎನ್ನಲಾಗಿದೆ. ಈ ಸಂಯೋಜಕರು ಚುನಾವಣಾ ಅಧಿಕಾರಿಗಳಿಂದ ತಮ್ಮ ಪ್ರಮಾಣಪತ್ರಗಳನ್ನು ಪಡೆದ ನಂತರ ವಿಜೇತ ಅಭ್ಯರ್ಥಿಗಳನ್ನು ಬಹಿರಂಗಪಡಿಸದ ಸ್ಥಳಗಳಿಗೆ ಸ್ಥಳಾಂತರಿಸಲು ಕಾರ್ಯ ನಿರ್ವಹಿಸುತ್ತಾರೆ. ನಂತರ ಎಲ್ಲಾ ಶಾಸಕರನ್ನು ಕಾರುಗಳ ಬೆಂಗಾವಲು ವಾಹನದಲ್ಲಿ ಬೆಂಗಳೂರಿಗೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ನೆರೆಯ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿರುವ ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶಾಸಕರನ್ನು ಸ್ಥಳಾಂತರಿಸಬೇಕಾದರೆ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಶಿವಕುಮಾರ್ ಈ ಹಿಂದೆ 2018 ರಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆಯಲ್ಲಿ ಕಾಂಗ್ರೆಸ್ ಮತ್ತು ಜನತಾ ದಳ (ಎಸ್) ಗೆ ಇದೇ ರೀತಿಯ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಇದನ್ನೂ ಓದಿ: Exit Poll: ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವ ಸಾಧ್ಯತೆ, ಬಿಆರ್‌ಎಸ್‌ಗೆ ಹೊಡೆತ
ಏನಂತಾರೆ ಡಿಕೆಶಿ?
ತೆಲಂಗಾಣದಲ್ಲೂ ಕೂಡ ನಮ್ಮ ಅಭ್ಯರ್ಥಿಗಳು ಫೋನ್ ಮಾಡಿ ಸಂಪರ್ಕಿಸುತ್ತಿದ್ದಾರೆ ಅಂತ ಮಾಹಿತಿ ಬಂದಿದೆ. ಅಲ್ಲೇ ಲೋಕಲ್‌ನಲ್ಲೇ ಮ್ಯಾನೇಜ್ ಮಾಡುತ್ತಾರೆ.ಪಕ್ಷ ಏನು ಹೇಳುತ್ತದೆಯೋ ಆ ಕೆಲಸ ಮಾಡುತ್ತೇನೆ.ನನಗೆ ನನ್ನದೇ ಆದ ಅಭಿಪ್ರಾಯ ಇದೆ.ಒಳಗಿರುವ ಓಟು ನಿನಗೂ ಗೊತ್ತಿಲ್ಲ ನನಗೂ ಗೊತ್ತಿಲ್ಲ.10 ಸಾವಿರ, ಮೂರು ಸಾವಿರ ಸ್ಯಾಂಪಲ್ ಮಾಡಬಹುದು.ಅದರ ಬಗ್ಗೆ ನನಗೆ ನಂಬಿಕೆ ಇಲ್ಲ. ನಾನು ಪ್ರತೀ ಕ್ಷೇತ್ರದಲ್ಲಿ ಒಂದು ಲಕ್ಷ ಸ್ಯಾಂಪಲ್ ಮಾಡುತ್ತಿದ್ದೇವೆ.ಇಲ್ಲಿ ನನಗೆ ಗೊತ್ತಿಲ್ಲ, ತೆಲಂಗಾಣದಲ್ಲಿ 20 ಕ್ಷೇತ್ರ ಓಡಾಡಿದ್ದೇನೆ, ಚೆನ್ನಾಗಿದೆ ಎಂದು ಡಿಕೆಶಿ ಹೇಳಿದ್ದಾರೆ.
ತೆಲಂಗಾಣ ಎಕ್ಸಿಟ್ ಪೋಲ್ ಭವಿಷ್ಯ
ಬಹುತೇಕ ಎಕ್ಸಿಟ್ ಪೋಲ್‌ಗಳು ತೆಲಂಗಾಣದಲ್ಲಿ ಕಾಂಗ್ರೆಸ್ ಮೇಲುಗೈ ಎಂದು ಭವಿಷ್ಯ ನುಡಿದಿವೆ. ಕೆಲವು ಸಮೀಕ್ಷೆಗಾರರು ಕಾಂಗ್ರೆಸ್‌ಗೆ ಕಡಿಮೆ ಬಹುಮತವನ್ನು ಮುಂಗಾಣಿದರೆ, ಇತರರು ಸ್ಪಷ್ಟವಾದ ಗೆಲುವನ್ನು ಊಹಿಸುತ್ತಾರೆ. ಇಂಡಿಯಾ ಟಿವಿ-ಸಿಎನ್‌ಎಕ್ಸ್ ಕಾಂಗ್ರೆಸ್‌ಗೆ 63-79, ಬಿಆರ್‌ಎಸ್‌ಗೆ 31-47, ಬಿಜೆಪಿಗೆ 2-4 ಮತ್ತು ಎಐಎಂಐಎಂಗೆ 5-7 ಸ್ಥಾನಗಳನ್ನು ನಿರೀಕ್ಷಿಸಿದರೆ, ಜನ್ ಕೀ ಬಾತ್ ಕಾಂಗ್ರೆಸ್‌ಗೆ 48-64, ಬಿಆರ್ ಎಸ್ 40-55, ಬಿಜೆಪಿ 7-13 ಮತ್ತು AIMIM 4-7 ಸ್ಥಾನಗಳನ್ನು ಪಡೆಯುತ್ತದೆ ಎಂದು ಭವಿಷ್ಯ ನುಡಿದಿದೆ.
ತೆಲಂಗಾಣದಲ್ಲಿ ಕಾಂಗ್ರೆಸ್ 58-68, ಬಿಆರ್‌ಎಸ್ 46-56, ಬಿಜೆಪಿ 4-9 ಮತ್ತು ಎಐಎಂಐಎಂ 5-7 ಸ್ಥಾನಗಳನ್ನು ಪಡೆಯಲಿದೆ ಎಂದು ರಿಪಬ್ಲಿಕ್ ಟಿವಿ-ಮ್ಯಾಟ್ರಿಜ್ ಭವಿಷ್ಯ ನುಡಿದಿದೆ. ಕಾಂಗ್ರೆಸ್ 49-59 ಸ್ಥಾನಗಳನ್ನು, ಬಿಆರ್‌ಎಸ್ 48-58, ಬಿಜೆಪಿ 5-10 ಮತ್ತು ಎಐಎಂಐಎಂ 6-8 ಸ್ಥಾನಗಳನ್ನು ಪಡೆಯಲಿದೆ ಎಂದು ಪೋಲ್‌ಸ್ಟ್ರಾಟ್ ಮತಗಟ್ಟೆಸಮೀಕ್ಷೆ ಹೇಳಿದೆ. ನ್ಯೂಸ್ 24-ಟುಡೇಸ್ ಚಾಣಕ್ಯ, ಬಿಆರ್‌ಎಸ್- 33, ಬಿಜೆಪಿ- 7 ಮತ್ತು ಕಾಂಗ್ರೆಸ್ ಪಕ್ಷಕ್ಕೆ- 71 ಸ್ಥಾನಗಳು ಲಭಿಸಲಿದೆ ಎಂದು ಭವಿಷ್ಯ ನುಡಿದಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ