ಆಂಧ್ರ ಪ್ರದೇಶದ ಹೈಕೋರ್ಟ್ ಮಧ್ಯಪ್ರವೇಶದಿಂದಾಗಿ ಪಂಚಾಯತ್ ರಾಜ್ ಸಚಿವ ಪಿ.ರಾಮಚಂದ್ರ ರೆಡ್ಡಿ ಅವರು ಗೃಹಬಂಧನದಿಂದ ಪಾರಾದರು. ಆದರೆ ಪಂಚಾಯತ್ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ಅಂದರೆ ಫೆಬ್ರುವರಿ 21ರ ವರೆಗೆ ಮಾಧ್ಯಮಗಳ ಮುಂದೆ ಮಾತಾಡುವಂತಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಚುನಾವಣೆ ಮುಗಿಯುವರೆಗೆ ರೆಡ್ಡಿಯವರು ಮನೆಯಿಂದಾಚೆ ಹೋಗದಂತೆ ನಿಗಾ ಇರಿಸಿ ಎಂದು ರಾಜ್ಯ ಚುನಾವಣೆ ಆಯುಕ್ತ ಎನ್. ರಮೇಶ್ ಕುಮಾರ್ ಹೇಳಿರುವುದು ರಾಜಕೀಯ ವಲಯದಲ್ಲಿ ಕಿಡಿ ಹಚ್ಚಿದೆ.
ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಕುಮಾರ್ ಅವರನ್ನು ತೆಲುಗು ದೇಶಂ ಪಾರ್ಟಿಯ (ಟಿಡಿಪಿ) ಕೈಗೊಂಬೆ ಎಂದು ಕರೆದಿದೆ. 2019ರಲ್ಲಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಮುಖ್ಯಮಂತ್ರಿ ಆದಾಗ ಕುಮಾರ್ ಮತ್ತು ಸರ್ಕಾರದ ನಡುವೆ ಜಟಾಪಟಿಗಳು ನಡೆದಿತ್ತು. ಚುನಾವಣೆಯ ಉಸ್ತುವಾರಿ ವಹಿಸಿರುವ ರಾಮಚಂದ್ರ ರೆಡ್ಡಿ ಜಿಲ್ಲಾಧಿಕಾರಿ ಮತ್ತು ರಿಟರ್ನಿಂಗ್ ಅಧಿಕಾರಿಗಳಿಗೆ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಕುಮಾರ್ ಆಪಾದನೆ ಮಾಡಿದ್ದರು. ಇತ್ತ ಕುಮಾರ್ ಅವರು ಟಿಡಿಪಿ ಪರವಾಗಿದ್ದಾರೆ ಎಂದು ಆರೋಪಿಸಿರುವ ರಾಮಚಂದ್ರ ರೆಡ್ಡಿ, ಚುನಾವಣೆಯ ನಂತರ ಶಿಕ್ಷೆ ನೀಡಲು ಕುಮಾರ್ ಅಧಿಕಾರಿಗಳ ಪಟ್ಟಿಗಳನ್ನು ಸಿದ್ಧಪಡಿಸುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದೆ . ಸರ್ಕಾರ ಮತ್ತು ಚುನಾವಣಾ ಆಯೋಗದ ಈ ಜಟಾಪಟಿಯ ನಡುವೆಯೇ 22 ಜಿಲ್ಲಾ ಪಂಚಾಯತ್ ಮತ್ತು 21,807 ಪಂಚಾಯತ್ಗಳಿಗೆ ಚುನಾವಣೆ ನಡೆದಿದೆ.
ಮುಖ್ಯಮಂತ್ರಿ ಆಪ್ತರ ಪ್ರಕಾರ ಕುಮಾರ್ ಅವರನ್ನು ಪದಚ್ಯುತಗೊಳಿಸುವ ನಿರ್ಧಾರದ ಬಗ್ಗೆ ಆಡಳಿತಾರೂಢ ಪಕ್ಷಕ್ಕೆ ವಿಧಾನ ಪರಿಷತ್ತಿನಲ್ಲಿ ಬೆಂಬಲ ಸಿಗಲಿಲ್ಲ. ಕುಮಾರ್ ಅವರು ಮಾರ್ಚ್ 31ಕ್ಕೆ ನಿವೃತ್ತಿ ಹೊಂದಲಿದ್ದಾರೆ. ಹಾಗಾಗಿ ಮಾರ್ಚ್ ನಂತರವೇ ಪಂಚಾಯತ್ ಚುನಾವಣೆ ನಡೆಸಬೇಕೆಂದು ಸರ್ಕಾರ ಪಟ್ಟು ಹಿಡಿದಿತ್ತು. ಕೊವಿಡ್-19 ನಿಂದಾಗಿ ಚುನಾವಣೆ ವಿಳಂಬವಾಗುತ್ತದೆ ಎಂದು ಸರ್ಕಾರ ಹೇಳಿತ್ತು. ಆದರೆ ಕೇರಳ , ಕರ್ನಾಟಕ ಮತ್ತು ಜಮ್ಮು ಕಾಶ್ಮೀರದಲ್ಲಿ ಕೊವಿಡ್ ಸಂಕ್ರಾಮಿದ ನಡುವೆಯೇ ಚುನಾವಣೆ ನಡೆದಿತ್ತು ಎಂದು ಕುಮಾರ್ ಹೇಳಿದ್ದರು. ನಾನು ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿಲ್ಲ ಎಂಬ ಕಾರಣದಿಂದಲೇ ನನ್ನ ಅಧಿಕಾರವನ್ನು ದಮನಿಸುವ ಹುನ್ನಾರವನ್ನು ಸರ್ಕಾರ ಮಾಡುತ್ತಿದೆ ಎಂದು ಕುಮಾರ್ ಆರೋಪಿಸುತ್ತಿದ್ದಾರೆ.
ಭಾರತದ ಚುನಾವಣಾ ಆಯೋಗದಂತೆಯೇ ರಾಜ್ಯ ಚುನಾವಣಾ ಆಯೋಗವೂ ಸಂವಿಧಾನದಿಂದ ರಚಿಸಲ್ಪಟ್ಟಿದ್ದು. ಹಾಗಾಗಿ ಎರಡಕ್ಕೂ ಒಂದೇ ರೀತಿಯ ಭದ್ರತೆ ಇದೆ. ಭಾರತದ ಚುನಾವಣಾ ಆಯುಕ್ತರನ್ನು ಪದಚ್ಯುತಗೊಳಿಸಬೇಕಾದರೆ ಸಂಸತ್ತಿನಲ್ಲಿ ವಾಗ್ದಂಡನೆ ನಿಲುವಳಿ ಮಂಡನೆಯಾಗಿ ಮೂರನೇ ಎರಡರಷ್ಟು ಸದಸ್ಯರು ಇದಕ್ಕೆ ಅಂಗೀಕಾರ ನೀಡಬೇಕು. ಸಂವಿಧಾನದ 324ನೇ ವಿಧಿ ಪ್ರಕಾರ ಚುನಾವಣಾ ಆಯೋಗಕ್ಕೆ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣದ ಹಕ್ಕು ಇದೆ. ರಾಜ್ಯ ಚುನಾವಣಾ ಆಯೋಗಕ್ಕೆ ಈ ಅಧಿಕಾರವನ್ನು ಸಂವಿಧಾನದ 243 ವಿಧಿ ನೀಡುತ್ತದೆ. ರಾಜ್ಯದ ಆಡಳಿತ ಸಂಸ್ಥೆಗಳು ಕೇಂದ್ರ ಆಯೋಗದಡಿಯಲ್ಲಿ ಬರುವುದಿಲ್ಲ. ಕೇಂದ್ರ ಚುನಾವಣಾ ಆಯೋಗವು ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರರಿಗೆ ನೋಟಿಸ್ ನೀಡುವ ಅಧಿಕಾರ ಇದೆ. ಏತನ್ಮಧ್ಯೆ ರಾಜ್ಯ ಚುನಾವಣಾ ಆಯೋಗವು ಈ ರೀತಿ ಮಾಡಬೇಕಾದರೆ ನಿರ್ದಿಷ್ಟ ರಾಜ್ಯದ ಅನುಮತಿ ಪಡೆಯಬೇಕು.
ಛಲ ಬಿಡದ ಕುಮಾರ್
ಆಂಧ್ರ ಪ್ರದೇಶ ಚುನಾವಣಾ ಆಯೋಗದ ಆಯುಕ್ತ ಕುಮಾರ್ ಅವರ ಈ ಹೋರಾಟವು ಚುನಾವಣಾ ಆಯುಕ್ತರಾಗಿದ್ದ ಟಿ.ಎನ್. ಶೇಷನ್ ಅವರನ್ನು ನೆನಪಿಸುತ್ತದೆ. ಟಿ.ಎನ್.ಶೇಷನ್ ಚುನಾವಣಾ ಆಯುಕ್ತರಾಗಿದ್ದ ಕಾಲದಲ್ಲಿ ರಾಜ್ಯಪಾಲರೊಬ್ಬರು ಅವರ ಮಗನ ಚುನಾವಣಾ ಕ್ಷೇತ್ರಕ್ಕೆ ಹೋಗಿದ್ದಕ್ಕಾಗಿ ಆ ರಾಜ್ಯಪಾಲರನ್ನೇ ವಜಾ ಮಾಡಿದ್ದರು. ಜಗನ್ ಮೋಹನ್ ರೆಡ್ಡಿ ಅವರು ಏಪ್ರಿಲ್ 1ರಿಂದ ಹೊಸ ಚುನಾವಣಾ ಆಯುಕ್ತರನ್ನು ನೇಮಕ ಮಾಡಲಿದ್ದಾರೆ. ಅಷ್ಟರಲ್ಲಿ ಕುಮಾರ್ ಅವರು ಚುನಾವಣಾ ಪ್ರಕ್ರಿಯೆನ್ನು ಪೂರ್ಣಗೊಳಿಸಿರುತ್ತಾರೆ.
ಆಂಧ್ರ ಪ್ರದೇಶ ಪಂಚಾಯತ್ ಚುನಾವಣೆ
ಗ್ರಾಮ ಪಂಚಾಯತ್ ಚುನಾವಣೆ ಮೂರನೇ ಹಂತದ ಚುನಾವಣೆ ಬುಧವಾರ (ಫೆ.17) ನಡೆಯಿತು. 2,639 ಗ್ರಾಮ ಪಂಚಾಯ್ತಿಗಳ 19,553 ವಾರ್ಡ್ಗಳಲ್ಲಿ ಮತದಾನ ನಡೆಯಿತು. ಸಂಜೆ 4ರನಂತರ ಮತಎಣಿಕೆ ಪ್ರಕ್ರಿಯೆ ಆರಂಭವಾಗಿತ್ತು. ಸಂಜೆ 3.30ಕ್ಕೆ ಮತದಾನ ಪ್ರಕ್ರಿಯೆ ಮುಗಿದಿದ್ದು ಶೇ 80.64 ಮತದಾನ ಆಗಿದೆ.
2ನೇ ಹಂತದ ಚುನಾವಣೆಯಲ್ಲಿ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್ ಸಿಪಿ ಬಹುಮತದೊಂದಿಗೆ ಗೆದ್ದು ಬೀಗಿತ್ತು. ವೈಎಸ್ಆರ್ಸಿಪಿ 2635 ಸೀಟುಗಳಿಸಿಕೊಂಡಿದ್ದು ಟಿಡಿಪಿ ಬೆಂಬಲಿತ ಅಭ್ಯರ್ಥಿಗಳು 558 ಸೀಟುಗಳಿಸಿತ್ತು. ಮೊದಲನೇ ಹಂತದಲ್ಲಿ ಜಗನ್ ಅವರ ವೈಸಿಪಿ 3,249 ಪಂಚಾಯತ್ ಸೀಟುಗಳ ಪೈಕಿ 2657 ಸೀಟು ಗಳಿಸಿತ್ತು . ಟಿಡಿಪಿ 501 ಸೀಟುಗಳೊಂದಿಗೆ ಎರಡನೇ ಸ್ಥಾನಗಳಿಸಿದ್ದು ಬಿಜೆಪಿ ಬೆಂಬಲಿತ ಪವನ್ ಕಲ್ಯಾಣ್ ಅವರ ಜನ ಸೇನಾ ಪಕ್ಷ 46 ಸೀಟುಗಳನ್ನು ಗಳಿಸಿತ್ತು.
ಇದನ್ನೂ ಓದಿ: ಅಕ್ರಮ ಆಸ್ತಿ ಪ್ರಕರಣ: ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಗೆ ಜಾರಿ ನಿರ್ದೇಶನಾಲಯ ಕೋರ್ಟ್ ಸಮನ್ಸ್