ಜಮ್ಮು-ಕಾಶ್ಮೀರಕ್ಕೆ ಸೂಕ್ತ ಸಮಯದಲ್ಲಿ ರಾಜ್ಯ ಸ್ಥಾನಮಾನ ಸಿಗುತ್ತದೆ: ಲೋಕಸಭೆಯಲ್ಲಿ ಅಮಿತ್ ಶಾ ಪ್ರತ್ಯುತ್ತರ

ಕೇವಲ 17 ತಿಂಗಳ ಹಿಂದಿನ ಭರವಸೆ ಈಡೇರಿಕೆಯ ಬಗ್ಗೆ ನೀವು ಕೇಳುತ್ತಿದ್ದೀರಿ. ಆದರೆ, 70 ವರ್ಷ ನೀವು ಏನು ಮಾಡಿದ್ದೀರಿ: ಲೋಕಸಭೆಯಲ್ಲಿ ಅಮಿತ್ ಶಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ.

ಜಮ್ಮು-ಕಾಶ್ಮೀರಕ್ಕೆ ಸೂಕ್ತ ಸಮಯದಲ್ಲಿ ರಾಜ್ಯ ಸ್ಥಾನಮಾನ ಸಿಗುತ್ತದೆ: ಲೋಕಸಭೆಯಲ್ಲಿ ಅಮಿತ್ ಶಾ ಪ್ರತ್ಯುತ್ತರ
ಲೋಕಸಭೆಯಲ್ಲಿ ಅಮಿತ್ ಶಾ
Follow us
TV9 Web
| Updated By: ganapathi bhat

Updated on:Apr 06, 2022 | 8:01 PM

ದೆಹಲಿ: ಜಮ್ಮು-ಕಾಶ್ಮೀರಕ್ಕೆ ಸೂಕ್ತ ಸಮಯದಲ್ಲಿ ರಾಜ್ಯ ಸ್ಥಾನಮಾನ ದೊರಕುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ, ಶನಿವಾರ (ಫೆ.13) ಹೇಳಿದರು. ‘ಕಾಂಗ್ರೆಸ್​ನವರು ನಾವು ಏನು ಮಾಡಿದ್ದೇವೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, 70 ವರ್ಷ ನೀವು ಏನು ಮಾಡಿದ್ದೀರಿ’ ಎಂದು ಜಮ್ಮು-ಕಾಶ್ಮೀರ ಜನರ ಭರವಸೆ ಈಡೇರಿಸುವ ವಿಚಾರದಲ್ಲಿ ಬಿಜೆಪಿ ಏನು ಕೆಲಸ ಮಾಡಿದೆ ಎಂಬ ಕಾಂಗ್ರೆಸ್ ಪ್ರಶ್ನೆಯ ವಿರುದ್ಧ ಅಮಿತ್ ಶಾ ವಾಗ್ದಾಳಿ ನಡೆಸಿದರು. 

70 ವರ್ಷ ನೀವು ಏನು ಮಾಡಿದ್ದೀರಿ.. ಕೇಂದ್ರ ಸಚಿವ ಅಮಿತ್ ಶಾ, ಆರ್ಟಿಕಲ್​ 370 ಹಾಗೂ ಜಮ್ಮು ಕಾಶ್ಮೀರಕ್ಕೆ ಸೂಕ್ತ ಸಮಯದಲ್ಲಿ ರಾಜ್ಯ ಸ್ಥಾನಮಾನ ನೀಡುವ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ, 370ನೇ ವಿಧಿಯನ್ನ ರದ್ದುಪಡಿಸುವಾಗ ನೀಡಿದ ಭರವಸೆಯನ್ನು ಇನ್ನೂ ಈಡೇರಿಸಿಲ್ಲ ಎಂಬ ಬಗ್ಗೆ ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ, ‘17 ತಿಂಗಳ ಹಿಂದಿನ ಭರವಸೆ ಈಡೇರಿಕೆಯ ಬಗ್ಗೆ ನೀವು ಕೇಳುತ್ತಿದ್ದೀರಿ. ಆದರೆ, 70 ವರ್ಷ ನೀವು ಏನು ಮಾಡಿದ್ದೀರಿ’ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ದೇಶದಲ್ಲಿ 70 ವರ್ಷ ಕಾಂಗ್ರೆಸ್​ ಪಕ್ಷ ಏನೂ ಮಾಡಿಲ್ಲ ಎಂದು ಆರೋಪಿಸಿದರು.

ಭರವಸೆಯನ್ನು ಈಡೇರಿಸುವ ಹಾಗೂ ಕೆಲಸ ನಿರ್ವಹಿಸುವ ಬಗ್ಗೆ ನಾನು ವರದಿ, ವಿವರ ನೀಡುತ್ತೇನೆ. ಆದರೆ, ವಿವರಣೆ ಕೇಳುವವರು ಎಂಥವರು ಎಂದು ಗೊತ್ತಿರಬೇಕು. ತಲೆಮಾರುಗಳ ಕಾಲ ಆಡಳಿತ ನಡೆಸುವ ಅವಕಾಶ ಪಡೆದವರು ಈ ಬಗ್ಗೆ ಕೇಳಲು ಯೋಗ್ಯರೇ ಎಂದು ಯೋಚಿಸಬೇಕು ಎಂದು ಟೀಕಿಸಿದರು. ಮುಂದುವರಿದು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ದೊರಕುವುದಿಲ್ಲ ಎಂದು ನೀವು ಹೇಗೆ ನಿರ್ಣಯ ಕೈಗೊಳ್ಳುತ್ತಿದ್ದೀರಿ, ಸೂಕ್ತ ಸಮಯದಲ್ಲಿ ಜಮ್ಮು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಸಿಕ್ಕೇ ಸಿಗುತ್ತದೆ ಎಂದು ಹೇಳಿದರು.

ಜಮ್ಮು-ಕಾಶ್ಮೀರಕ್ಕೆ ಮೊದಲು ಇದ್ದ ರಾಜ್ಯ ಸ್ಥಾನಮಾನ ತೆಗೆದು ಸಂವಿಧಾನ ವಿಧಿ 370 ರದ್ದುಗೊಳಿಸಿದ ನಂತರ, ಅಲ್ಲಿನ ಜನತೆಯ ಕನಸು ಈಡೇರಿಲ್ಲ. ಜಮ್ಮು-ಕಾಶ್ಮೀರದ ಸ್ಥಾನಮಾನ ತೆಗೆದು ಎರಡು ವರ್ಷವಾಗುತ್ತಾ ಬಂದಿದೆ. ಇನ್ನೂ ಅಲ್ಲಿನ ಸ್ಥಿತಿ ಸಹಜತೆಗೆ ಬಂದಿಲ್ಲ. 90 ಸಾವಿರ ಕೋಟಿಗೂ ಅಧಿಕ ಸ್ಥಳೀಯ ಉದ್ಯೋಗಗಳು ನಾಶವಾಗಿವೆ. ಇಂಥ ಪರಿಸ್ಥಿತಿಯಲ್ಲಿ ಜಮ್ಮು ಕಾಶ್ಮೀರದ ಸ್ಥಿತಿಯನ್ನು ಹೇಗೆ ಸಹಜತೆಗೆ ತರುತ್ತೀರಿ ಎಂದು ಕಾಂಗ್ರೆಸ್ ನಾಯಕ ಎ.ಆರ್. ಚೌಧರಿ ಲೋಕಸಭೆಯಲ್ಲಿ ಪ್ರಶ್ನಿಸಿದ್ದರು.

ಕಾಶ್ಮೀರಿ ಪಂಡಿತರನ್ನು ಹಿಂದೆ ಕರೆತರುತ್ತೇವೆ. ಪಂಡಿತರಿಗೆ 200ರಿಂದ 300 ಎಕರೆ ಭೂಮಿಯನ್ನು ನೀಡುತ್ತೇವೆ. ಜೊತೆಗೆ, ಗಿಲ್ಜಿತ್ ಬಲಿಸ್ತಾನಿಯವರನ್ನು ಕರೆತರುತ್ತೇವೆ ಎಂದು ಸಹ ಹೇಳಿದ್ದಿರಿ. ಆ ಭರವಸೆಗಳನ್ನು ಈಡೇರಿಸಿದ್ದೀರಾ? ಎಂದು ಚೌಧರಿ ಪ್ರಶ್ನೆ ಮಾಡಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ ಅಮಿತ್ ಶಾ, ನೀವು ಸರಿಯಾಗಿ ಕೆಲಸ ಮಾಡಿದ್ದಿದ್ದರೆ ನಮ್ಮನ್ನ ಕೇಳಬೇಕಿಲ್ಲ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ನಾವೆಲ್ಲಾ ಭಾರತ ಮಾತೆಯ ಮಕ್ಕಳು ಎಂದು ಜಮ್ಮು-ಕಾಶ್ಮೀರದ ಬಗ್ಗೆ ಮಾತನಾಡಿದರು. ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ರಾಜಕೀಯ ಪ್ರೇರಿತ ಎಂದೂ ಈ ವೇಳೆ ಕಾಂಗ್ರೆಸ್ ವಿರುದ್ಧ ಗುಡುಗಿದರು.

ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ (ತಿದ್ದುಪಡಿ) ಮಸೂದೆ ಲೋಕಸಭೆಯಲ್ಲಿ ಅಂಗೀಕಾರ: ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ (ತಿದ್ದುಪಡಿ) ಮಸೂದೆ ಲೋಕಸಭೆಯಲ್ಲಿ ಇಂದು (ಫೆ.13) ಅಂಗೀಕಾರವಾಗಿದೆ. ಅದರಂತೆ, ಜಮ್ಮು-ಕಾಶ್ಮೀರ ನಾಗರಿಕ ಸೇವಾ ಅಧಿಕಾರಿಗಳ ಕೇಡರ್, ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ ಕೇಂದ್ರಾಡಳಿತ ಪ್ರದೇಶಗಳ ಕೇಡರ್​ನೊಂದಿಗೆ (AGMUT) ಸೇರಿಕೊಂಡಿದೆ.

ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ (ತಿದ್ದುಪಡಿ) ಮಸೂದೆ (Jammu and Kashmir Reorganisation Amendment Bill, 2021) ಪರಿಚಯಿಸಿದ ಗೃಹ ಇಲಾಖೆಯ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ, ಜಮ್ಮು-ಕಾಶ್ಮೀರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸರ್ಕಾರ ಶ್ರಮಿಸುತ್ತಿದೆ. ಜಮ್ಮು-ಕಾಶ್ಮೀರದ ಉನ್ನತಿಗಾಗಿ ಸರ್ಕಾರ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಕೊರೊನಾ ಲಸಿಕೆ ಅಭಿಯಾನ ಮುಗಿದ ಬಳಿಕ CAA ಜಾರಿಯಾಗಲಿದೆ -ಕೇಂದ್ರ ಗೃಹ ಸಚಿವ ಅಮಿತ್ ಶಾ

ನಮಗೆ ಜನರ ಹಿತರಕ್ಷಣೆಯೇ ಮುಖ್ಯ, ಬಂಡವಾಳಶಾಹಿಗಳದ್ದಲ್ಲ: ಆರೋಪಗಳಿಗೆ ರೊಚ್ಚಿಗೆದ್ದು ಉತ್ತರಿಸಿದ ನಿರ್ಮಲಾ ಸೀತಾರಾಮನ್

Published On - 3:58 pm, Sat, 13 February 21