Rinku Sharma Murder Case: ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ರಿಂಕು ಶರ್ಮಾ ತಾಯಿ ಬಿಚ್ಚಿಟ್ಟ ಸತ್ಯ..; ಸಹಾಯ ಪಡೆದವರೇ ಕೊಂದುಬಿಟ್ಟರು !
Rinku Sharma Murder Caseನ್ನು ಸದ್ಯ ದೆಹಲಿ ಕ್ರೈ ಬ್ರ್ಯಾಂಚ್ ಪೊಲೀಸರಿಗೆ ವರ್ಗಾಯಿಸಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ. ಒಟ್ಟು ಐವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ದೆಹಲಿ: ಬಿಜೆಪಿ ಕಾರ್ಯಕರ್ತ ರಿಂಕು ಶರ್ಮಾ ಹತ್ಯೆಗೆ ಸಂಬಂಧಪಟ್ಟಂತೆ ಐವರು ಆರೋಪಿಗಳಾದ ನಶ್ರುದ್ದೀನ್, ಇಸ್ಲಾಂ, ಮೆಹ್ತಾಬ್, ಜಾಹೀದ್, ತಾಜುದ್ದೀನ್ರನ್ನು ಪೊಲೀಸರು ಬಂಧಿಸಿದ್ದು, ಪ್ರಕರಣವನ್ನು ಇಂದು ಕ್ರೈಂ ಬ್ರ್ಯಾಂಚ್ಗೆ ವರ್ಗಾಯಿಸಲಾಗಿದೆ. ಬುಧವಾರ ರಾತ್ರಿ ರಿಂಕು ಶರ್ಮಾ ತನ್ನ ಸ್ನೇಹಿತ ಬಾಬು ಎಂಬಾತನ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದರು. ಬಾಬು ಮನೆ ಮಂಗೋಲ್ಪುರಿಯಲ್ಲಿ ರಿಂಕು ಶರ್ಮಾ ಮನೆ ಸಮೀಪವೇ ಇತ್ತು. ಅದೇ ಪಾರ್ಟಿಯಲ್ಲಿ ನಶ್ರುದ್ದೀನ್, ಇಸ್ಲಾಂ, ಮೆಹ್ತಾಬ್, ಜಾಹೀದ್, ತಾಜುದ್ದೀನ್ ಸಹ ಪಾಲ್ಗೊಂಡಿದ್ದರು. ಇವರೂ ಸಹ ಅದೇ ಏರಿಯಾದವರೇ. ಪಾರ್ಟಿಯಲ್ಲಿ ಯಾವುದೋ ಸಣ್ಣ ಕಾರಣಕ್ಕೆ ಶುರುವಾದ ಜಗಳ ರಿಂಕು ಶರ್ಮಾರ ಜೀವವನ್ನೇ ತೆಗೆದಿತ್ತು.
ಕೋಮುದ್ವೇಷವೆಂಬ ಆರೋಪ ಬರ್ತ್ ಡೇ ಪಾರ್ಟಿಯಲ್ಲಿ ಸಣ್ಣ ಕಾರಣಕ್ಕೆ ಜಗಳ ಶುರುವಾಗಿತ್ತು. ಆದರೆ ಅದನ್ನು ಅಲ್ಲಿಗೆ ಮುಗಿಸದೆ ಅರೋಪಿಗಳು ರಿಂಕು ಶರ್ಮಾನ ಬೆನ್ನತ್ತಿ ಬಂದು, ಆತನ ಮನೆಯ ಮುಂದೆಯೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು. ಹತ್ಯೆಯಾದ ರಿಂಕು ಶರ್ಮಾ, ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳೆಲ್ಲ ತುಂಬ ಸಮಯದಿಂದಲೂ ಪರಿಚಿತರು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಕುಟುಂಬದವರು ಬೇರೆಯದ್ದೇ ಆರೋಪ ಮಾಡಿದ್ದಾರೆ. ರಿಂಕು ಶರ್ಮಾ ಬಿಜೆಪಿ, ಆರ್ಎಸ್ಎಸ್, ಭಜರಂದಳದೊಂದಿಗೆ ಗುರುತಿಸಿಕೊಂಡಿದ್ದ. ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹವನ್ನೂ ಮಾಡುತ್ತಿದ್ದ. ಇದೇ ಕಾರಣಕ್ಕೆ ರಿಂಕುವನ್ನು ಹತ್ಯೆ ಮಾಡಿದ್ದಾರೆ. ಇದು ಕೋಮು ದ್ವೇಷ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ. ರಿಂಕು ಶರ್ಮಾ ಸೋದರ ಮನು ಶರ್ಮಾ ಪ್ರತಿಕ್ರಿಯೆ ನೀಡಿ, ನಾವು ಆಗಸ್ಟ್ 5ರಂದು ರಾಮಮಂದಿರ ನಿರ್ಮಾಣ ಸಂಬಂಧ ಮೆರವಣಿಗೆ ಹಮ್ಮಿಕೊಂಡಿದ್ದೆವು. ಆಗಲೂ ಸಹ ನಮ್ಮ ಮೇಲೆ ದೌರ್ಜನ್ಯ ಎಸಗಲಾಗಿತ್ತು ಎಂದು ತಿಳಿಸಿದ್ದಾರೆ. ಆದರೆ ಪೊಲೀಸರು , ನಾವು ಎಲ್ಲ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದೇವೆ. ಒಮ್ಮೆಲೇ ಕೋಮು ದ್ವೇಷ ಎಂಬ ತೀರ್ಮಾನಕ್ಕೆ ಬರುವುದಿಲ್ಲ ಎಂದಿದ್ದಾರೆ.
ತಾಯಿ ಹೇಳಿದ ಭಯಾನಕ ಘಟನೆ ರಿಂಕು ಶರ್ಮಾ ಓರ್ವ ಲ್ಯಾಬ್ ಟೆಕ್ನೀಶಿಯನ್ ಆಗಿದ್ದವರು. ಅಂದು ಪಾರ್ಟಿಯಲ್ಲಿ ಗಲಾಟೆ, ಹೊಡೆದಾಟ ನಡೆದ ಬಳಿಕ ತನ್ನ ಮನೆಗೆ ಬಂದ ರಿಂಕು ತನ್ನ ಸೋದರನೊಟ್ಟಿಗೆ ಮನೆಯ ಬಾಗಿಲಲ್ಲೇ ನಿಂತಿದ್ದರು. ಇವರ ಕೈಯಲ್ಲೂ ಕೋಲು ಇತ್ತು. ತನ್ನನ್ನು ಬೆನ್ನಟ್ಟಿ ಬರುತ್ತಿರುವವರನ್ನು ಎದುರಿಸಲು ಸಜ್ಜಾಗಿದ್ದರು ಎಂದು ಹೇಳಲಾಗಿದೆ. ಈ ಮಧ್ಯೆ ರಿಂಕು ತಾಯಿ ರಾಧಾ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ರಿಂಕು ಶರ್ಮಾನಿಗೆ ಸಾಯುವಷ್ಟು ಹೊಡೆದ ಮುಸ್ಲಿಂ ಗುಂಪು, ನಂತರ ನಮ್ಮ ಇಡೀ ಕುಟುಂಬವನ್ನು ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿತು. ಮೊದಲು ನನ್ನ ಮಗನ ಮೇಲೆ ಭೀಕರವಾಗಿ ಕೋಲಿನಿಂದ ಹೊಡೆದು, ಚಾಕುವಿನಿಂದ ಇರಿದರು. ನಂತರ ಇಡೀ ಮನೆಗೆ ಬೆಂಕಿ ಹಚ್ಚುವ ಸಲುವಾಗಿ, ನಮ್ಮ ಮನೆಯ ಅಡುಗೆ ಕೋಣೆಯಿಂದ ಗ್ಯಾಸ್ ಸಿಲಿಂಡರ್ನ್ನು ಎಳೆದುಕೊಂಡು ಬಂದರು. ಆದರೆ ನಾವೆಲ್ಲ ಸೇರಿ, ಸಿಲಿಂಡರ್ನ್ನು ಅವರ ಕೈಯಿಂದ ಎಳೆದು, ದೂರ ತೆಗೆದುಕೊಂಡು ಹೋದೆವು. ಹತ್ಯೆ ಮಾಡಿದ್ದಕ್ಕೆ ಯಾವುದೇ ಪುರಾವೆಯನ್ನೂ ಉಳಿಸಬಾರದು ಎಂಬುದು ದುಷ್ಕರ್ಮಿಗಳ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ರಿಂಕುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಿಡಲಿಲ್ಲ. ದಾರಿಯನ್ನು ಅಡ್ಡಗಟ್ಟಿದರು. ಅಷ್ಟಾಗಿಯೂ ಕರೆದುಕೊಂಡು ಹೋದೆವು. ಆದರೆ ಬದುಕಿಸಲು ಆಗಲಿಲ್ಲ ಎಂದು ರಾಧಾ ತಿಳಿಸಿದ್ದಾರೆ.
ಆರೋಪಿಯೊಬ್ಬನ ಪತ್ನಿಗೆ ರಕ್ತ ಕೊಟ್ಟಿದ್ದ ರಿಂಕು ಇನ್ನು ರಿಂಕು ಶರ್ಮಾ ಮತ್ತು ಆತನ ಮೇಲೆ ದಾಳಿ ಮಾಡಿದವರೆಲ್ಲ ಅಕ್ಕಪಕ್ಕದ ಮನೆಯವರೇ ಆಗಿದ್ದಾರೆ. ಹೀಗೆ ಹಲ್ಲೆ ಮಾಡಿದವನೊಬ್ಬನ ಪತ್ನಿಗೆ ಕಳೆದ ಒಂದೂವರೆ ವರ್ಷದ ಹಿಂದೆ ರಿಂಕು ರಕ್ತದಾನ ಮಾಡಿದ್ದ. ಆಕೆ ಗರ್ಭಿಣಿಯಾಗಿದ್ದರು..ಆರೋಗ್ಯ ಪರಿಸ್ಥಿತಿ ಹದಗೆಟ್ಟು, ಆಸ್ಪತ್ರೆಗೆ ಸೇರಿದ್ದಾಗ ರಿಂಕು ರಕ್ತ ಕೊಟ್ಟಿದ್ದರು. ಅಷ್ಟೇ ಅಲ್ಲ, ಇಸ್ಲಾಂ ಎಂಬುವನ ಸಹೋದರ ಕೊವಿಡ್-19ನಿಂದ ಆಸ್ಪತ್ರೆಗೆ ದಾಖಲಾಗಿದ್ದಾಗಲೂ, ನೆರವು ನೀಡಿದ್ದ ಎಂದು ಆತನ ಸ್ನೇಹಿತರು ತಿಳಿಸಿದ್ದಾರೆ.
ಹಾಗೇ, ರಿಂಕು ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ಹೊಸ ವಿಚಾರ ಹೊರಬೀಳುತ್ತಿದ್ದು, ದೆಹಲಿ ಪೊಲೀಸ್ ಕ್ರೈಂ ಬ್ರ್ಯಾಂಚ್ ಸದ್ಯ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಇದನ್ನೂ ಓದಿ: Hyderabad gang rape: ಯುವತಿಯೇ ಅತ್ಯಾಚಾರದ ಸುಳ್ಳು ಕತೆ ಸೃಷ್ಟಿಸಿದ್ದಾಳೆ ಎಂದ ರಾಚಕೊಂಡ ಪೊಲೀಸ್ ಕಮೀಷನರ್..!
Published On - 3:05 pm, Sat, 13 February 21