Deep Sidhu: ಬಂಧಿತ ದೀಪ್ ಸಿಧು, ಇಕ್ಬಾಲ್ ಸಿಂಗ್ರನ್ನು ಕೆಂಪುಕೋಟೆಗೆ ಕರೆದುಕೊಂಡು ಹೋದ ದೆಹಲಿ ಪೊಲೀಸರು
ಪ್ರಕರಣದ ತನಿಖೆ ನಡೆಸುತ್ತಿರುವ ಅಪರಾಧ ವಿಭಾಗದ ಪೊಲೀಸರು ಇಂದು ( Deep Sidhu), ಇಕ್ಬಾಲ್ ಸಿಂಗ್ರನ್ನು ಕೆಂಪುಕೋಟೆ ಬಳಿ ಕರೆದುಕೊಂಡು ಹೋಗಿ, ಅಂದು ನಡೆದ ಘಟನೆಯನ್ನು ಮರುಸೃಷ್ಟಿಸಿದ್ದಾರೆ.
ದೆಹಲಿ: ಗಣರಾಜ್ಯೋತ್ಸವದಂದು ನಡೆದ ಹಿಂಸಾಚಾರದ ತನಿಖೆ ನಡೆಸುತ್ತಿರುವ ಕ್ರೈಂ ಬ್ರ್ಯಾಂಚ್ ಪೊಲೀಸರು ಇಂದು ಆರೋಪಿಗಳಾದ ನಟ ದೀಪ್ ಸಿಧು(Deep Sidhu) ಹಾಗೂ ಇಕ್ಬಾಲ್ ಸಿಂಗ್ರನ್ನು ಕೆಂಪುಕೋಟೆಯ ಬಳಿ ಕರೆದೊಯ್ದಿದ್ದಾರೆ. ಅಂದು ಗಣರಾಜ್ಯೋತ್ಸವದಂದು ರೈತರ ಹೋರಾಟ ಹಿಂಸಾಚಾರವಾಗಿ ಬದಲಾಗಿತ್ತು. ಕೆಂಪುಕೋಟೆಯ ಬಳಿ ಗಲಭೆ ನಡೆಯುತ್ತಿರುವ ಬೆನ್ನಲ್ಲೇ, ಒಳನುಗ್ಗಿ ರಾಷ್ಟ್ರಧ್ವಜದ ಪಕ್ಕದಲ್ಲೇ, ಸಿಖ್ ಧ್ವಜ ಹಾರಿಸಲಾಗಿತ್ತು. ಇದರಲ್ಲಿ ದೀಪ್ ಸಿಧು ಪ್ರಮುಖ ಆರೋಪಿಯಾಗಿದ್ದರು. ಅಂದಿನಿಂದಲೂ ನಾಪತ್ತೆಯಾಗಿದ್ದ ದೀಪ್ರನ್ನು ಫೆಬ್ರವರಿ 9ರಂದು ಹರ್ಯಾಣಾದ ಕರ್ನಲ್ ಬೈಪಾಸ್ ಬಳಿ ಬಂಧಿಸಲಾಗಿತ್ತು.
ಪ್ರಕರಣದ ವಿಚಾರಣೆ, ತನಿಖೆ ನಡೆಸುತ್ತಿರುವ ಅಪರಾಧ ವಿಭಾಗದ ಪೊಲೀಸರು ಇಂದು ದೀಪ್ ಸಿಧು, ಇಕ್ಬಾಲ್ ಸಿಂಗ್ರನ್ನು ಕೆಂಪುಕೋಟೆ ಬಳಿ ಕರೆದುಕೊಂಡು ಹೋಗಿ, ಅಂದು ನಡೆದ ಘಟನೆಯನ್ನು ಮರುಸೃಷ್ಟಿಸಿದ್ದಾರೆ. ಇನ್ನು ದೀಪ್ ಸಿಧು ಮತ್ತು ಇಕ್ಬಾಲ್ ಸಿಂಗ್ ತಾವು ಗಣರಾಜ್ಯೋತ್ಸವದಂದು ಕೆಂಪುಕೋಟೆ ಪ್ರವೇಶಿಸಿದ ಮಾರ್ಗವನ್ನು ಪೊಲೀಸರಿಗೆ ತೋರಿಸಿದ್ದಾರೆ.
ಜನವರಿ 26ರಂದು ಹಿಂಸಾಚಾರ ನಡೆದ ಬೆನ್ನಲ್ಲೇ ದೀಪ್ ಸಿಧು ಮತ್ತು ಆತನ ಸಹಚರರಾದ ಜುಗ್ರಾಜ್ ಸಿಂಗ್, ಗುರ್ಜೋತ್ ಸಿಂಗ್, ಗುರ್ಜಂತ್ ಸಿಂಗ್, ಜಗ್ಬೀರ್ ಸಿಂಗ್, ಬುಟಾ ಸಿಂಗ್, ಸುಖ್ದೇವ್ ಸಿಂಗ್ ಮತ್ತು ಇಕ್ಬಾಲ್ ಸಿಂಗ್ ನಾಪತ್ತೆಯಾಗಿದ್ದರು. ಇವರೆಲ್ಲರೂ ಹಿಂಸಾಚಾರ ನಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದವರ ಪಟ್ಟಿಯಲ್ಲಿ ಸೇರಿದ್ದು, ಸುಳಿವು ಕೊಟ್ಟವರಿಗೆ ನಗದು ಬಹುಮಾನವನ್ನೂ ಪೊಲೀಸರು ಘೋಷಿಸಿದ್ದರು.
ಇದನ್ನೂ ಓದಿ: Delhi violence ನಟ ದೀಪ್ ಸಿಧು ಪತ್ತೆಗೆ ಸಹಾಯ ಮಾಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ ದೆಹಲಿ ಪೊಲೀಸರು
Published On - 4:08 pm, Sat, 13 February 21