‘ಅಮಿತ್ ಜೀ, ನೀವು ಕಾಶ್ಮೀರಿ ಪಂಡಿತರನ್ನು ವಾಪಸ್ ಕರೆತಂದಿರಾ?’-ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಪ್ರಶ್ನೆ
ನೀವು ಗಿಲ್ಗಿಟ್ ಬಲ್ಟಿಸ್ತಾನವನ್ನು ವಾಪಸ್ ತರುತ್ತೇವೆ ಎನ್ನುತ್ತಿದ್ದೀರಿ, ಆದರೆ ಅದಕ್ಕೂ ಮೊದಲು ಕಾಶ್ಮೀರ ವ್ಯಾಲಿಯಲ್ಲಿ ಪಡಬಾರದ ಕಷ್ಟ ಅನುಭವಿಸಿ, ಹೋದವರನ್ನು, ಸ್ಥಳಾಂತರ ಆದವರನ್ನು ಕರೆತನ್ನಿ ಎಂದು ಅಧೀರ್ ರಂಜನ್ ಚೌಧರಿ ಹೇಳಿದರು.
ದೆಹಲಿ: ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 (ವಿಶೇಷ ಸ್ಥಾನಮಾನ)ನ್ನು ರದ್ದುಗೊಳಿಸುವ ಮೊದಲು ನೀಡಿದ್ದ ಅಭಿವೃದ್ಧಿ ಭರವಸೆಗಳನ್ನೆಲ್ಲ ಈಡೇರಿಸಿದ್ದೀರಾ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿಯವರು, ಗೃಹ ಸಚಿವ ಅಮಿತ್ ಶಾ ಅವರನ್ನು ಪ್ರಶ್ನಿಸಿದರು. ಇಂದು ಲೋಕಸಭೆಯಲ್ಲಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಧೀರ್ ರಂಜನ್ ಚೌಧರಿ, ಜಮ್ಮುಕಾಶ್ಮೀರದಲ್ಲಿನ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಮೊದಲು ನೀವು ನೀಡಿದ್ದ ಭರವಸೆಯೆಲ್ಲ ಹಾಗೇ ಇದೆ. ಯಾವುದೂ ಪೂರ್ಣಗೊಂಡಿಲ್ಲ. ಅಷ್ಟೇ ಏಕೆ, ಇಂದಿಗೂ ಸಹ ಜಮ್ಮು-ಕಾಶ್ಮೀರ ಸಹಜ ಸ್ಥಿತಿಗೆ ಮರಳಿಲ್ಲ ಎಂದು ಹೇಳಿದರು.
ಕಾಶ್ಮೀರದಲ್ಲಿ ಸುಮಾರು 90 ಸಾವಿರ ಕೋಟಿ ರೂ.ಮೌಲ್ಯದ ಸ್ಥಳೀಯ ಉದ್ಯಮಗಳು ಸಂಪೂರ್ಣ ನೆಲಕಚ್ಚಿವೆ. ಜಮ್ಮು-ಕಾಶ್ಮೀರವನ್ನು ಇನ್ನು ಹೇಗೆ ಅಭಿವೃದ್ಧಿ ಮಾಡುತ್ತೀರಿ ಎಂದು ನೀವು ನಮಗೆ ಹೇಳಿ. ಅಮಿತ್ ಜೀ, ನೀವು ಕಾಶ್ಮೀರಿ ಪಂಡಿತರನ್ನು ವಾಪಸ್ ಕರೆತರುವುದಾಗಿ ಹೇಳಿದ್ದೀರಿ..ಅದು ಸಾಧ್ಯವಾಯಿತಾ? ಎಷ್ಟು ಜನ ಕಾಶ್ಮೀರಿ ಪಂಡಿತರನ್ನು, ಬ್ರಾಹ್ಮಣರನ್ನು ವಾಪಸ್ ಕರೆತಂದಿದ್ದೀರಿ? ಕಾಶ್ಮೀರಿ ಪಂಡಿತರಿಗೆ 200-300 ಎಕರೆ ಭೂಮಿ ಕೊಡಲು ನಿಮಗೆ ಸಾಧ್ಯವಾಗಲಿಲ್ಲ ಎಂದರು.
ನೀವು ಗಿಲ್ಗಿಟ್ ಬಲ್ಟಿಸ್ತಾನವನ್ನು ವಾಪಸ್ ತರುತ್ತೇವೆ ಎನ್ನುತ್ತಿದ್ದೀರಿ, ಆದರೆ ಅದಕ್ಕೂ ಮೊದಲು ಕಾಶ್ಮೀರ ವ್ಯಾಲಿಯಲ್ಲಿ ಪಡಬಾರದ ಕಷ್ಟ ಅನುಭವಿಸಿ, ಹೋದವರನ್ನು, ಸ್ಥಳಾಂತರ ಆದವರನ್ನು ಕರೆತನ್ನಿ ಎಂದು ಹೇಳಿದರು.