ISRO-MapmyIndia ಪ್ರಯತ್ನ; ಗೂಗಲ್ ಮ್ಯಾಪ್ಸ್, ಗೂಗಲ್ ಅರ್ಥ್ ಬದಲು ಸ್ವದೇಶಿ ಪೋರ್ಟಲ್ ನಿರ್ಮಾಣ
ISRO-MapmyIndia ಸಂಸ್ಥೆಯು ಜಂಟಿಯಾಗಿ ಸ್ವದೇಶಿ ಪೋರ್ಟಲ್ ಒಂದನ್ನು ಅಭಿವೃದ್ಧಿಪಡಿಸುತ್ತಿದೆ. ಗೂಗಲ್ ಮ್ಯಾಪ್ಸ್/ ಅರ್ಥ್ ಬದಲು ಭಾರತೀಯ ಮ್ಯಾಪಿಂಗ್ ಅಪ್ಲಿಕೇಷನ್ ಲಭ್ಯವಾಗುವ ಸೂಚನೆ ಲಭಿಸಿದೆ.
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO- Indian Space Research Organisation) ಮತ್ತು ಲೊಕೇಷನ್-ನೇವಿಗೇಷನ್ ಟೆಕ್ನಾಲಜಿ ಸೊಲ್ಯುಷನ್ಸ್ ಒದಗಿಸುವ ಮ್ಯಾಪ್ಮೈ ಇಂಡಿಯಾ (MapmyIndia) ಸಂಸ್ಥೆ ಜಂಟಿಯಾಗಿ ಹೊಸ ಮ್ಯಾಪಿಂಗ್ ಸಂಸ್ಥೆ ಆರಂಭಿಸಲು ಮೊದಲ ಹೆಜ್ಜೆ ಇಟ್ಟಿವೆ. ಭಾರತದ ಉತ್ತಮ ಮತ್ತು ಸ್ವದೇಶಿ ನಿರ್ಮಿತ ಮ್ಯಾಪಿಂಗ್ ಪೋರ್ಟಲ್ಗೆ (Mapping Portal) ಹಾಗೂ ಜಿಯೋಸ್ಪೇಷಿಯಲ್ ಸರ್ವೀಸ್ (Geospatial Service) ನೀಡಲು ಮುಂದಾಗಿದೆ. ಈ ವಿಚಾರ ಪ್ರಾಯೋಗಿಕವಾಗಿ ನಿಜವಾದರೆ, ಗೂಗಲ್ ಅರ್ಥ್ ಅಥವಾ ಗೂಗಲ್ ಮ್ಯಾಪ್ಸ್ (Google Earth/Google Maps) ಬಳಕೆ ಕಡಿಮೆ ಆಗುವ ಸಂಭಾವ್ಯತೆ ಊಹಿಸಲಾಗುತ್ತಿದೆ.
ಈ ಬಗ್ಗೆ MapmyIndia ಸಿಇಒ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ರೋಹನ್ ವರ್ಮಾ ಮಾತನಾಡಿದ್ದಾರೆ. ಈ ತಂತ್ರಜ್ಞಾನವು MapmyIndiaದ ಡಿಜಿಟಲ್ ಮ್ಯಾಪ್ ಹಾಗೂ ಇಸ್ರೋ ಸ್ಯಾಟಲೈಟ್ನ ಮಾಹಿತಿ ಪಡೆದು ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ. ಲಿಂಕ್ಡ್ಇನ್ ಅಪ್ಲಿಕೇಷನ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ವರ್ಮಾ, ನಿಮಗೆ ಇನ್ನು Goo*le Maps/Earth ಬೇಕಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಭಾರತದ ಮ್ಯಾಪ್ ಹಾಗೂ ಜಿಯೋಸ್ಪೇಷಿಯಲ್ ಸೇವೆಗಳಿಗೆ ಸ್ವದೇಶಿ ಅಪ್ಲಿಕೇಷನ್ಗಳೇ ಹೆಚ್ಚು ಉತ್ತಮ ಎನ್ನಲು ಹಲವು ಕಾರಣಗಳಿವೆ ಎಂದೂ ವರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದು ‘ಆತ್ಮನಿರ್ಭರ್ ಭಾರತ್’ ಹಾದಿಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ ಎಂದು ರೋಹನ್ ವರ್ಮಾ ತಿಳಿಸಿದ್ದಾರೆ. ಈ ಮೂಲಕ, ಭಾರತದ ಬಳಕೆದಾರರು ವಿದೇಶಿ ಸಂಸ್ಥೆಗಳನ್ನು ಅವಲಂಬಿಸಬೇಕಾಗಿ ಬರುವುದಿಲ್ಲ. ಮ್ಯಾಪ್, ನೇವಿಗೇಷನ್ ಮುಂತಾದ ಸಮಸ್ಯೆಗಳಿಗೆ ಭಾರತದ ಸಂಸ್ಥೆಯಿಂದಲೇ ಪರಿಹಾರ ಸಿಗುತ್ತದೆ ಎಂದು ಹೇಳಿದ್ದಾರೆ.
ಇಸ್ರೋ ಮಾಹಿತಿಯಂತೆ, ISRO ಅಡಿಯಲ್ಲಿ ಬರುವ ಡಿಪಾರ್ಟ್ಮೆಂಟ್ ಆಫ್ ಸ್ಪೇಸ್ (DoS), MapmyIndia ಜೊತೆ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಕೈಜೋಡಿಸಿದೆ. DoS ಹಾಗೂ MapmyIndia ಮಾತೃಸಂಸ್ಥೆ CE Info Systems Pvt Ltd ಜೊತೆಯಾಗಿ ಈ ವ್ಯವಸ್ಥೆ ಅಭಿವೃದ್ಧಿಪಡಿಸುತ್ತಿದೆ.
ಇದನ್ನೂ ಓದಿ: ದೇಶೀಯ ವಿಡಿಯೋ ಆ್ಯಪ್ಗಳಿಗೆ ವರವಾಯ್ತು ಟಿಕ್ ಟಾಕ್ ನಿಷೇಧ: ಮಾರುಕಟ್ಟೆಯಲ್ಲಿ ಶೇ. 40 ಪಾಲು ಗಳಿಕೆ
ಸ್ಥಗಿತಗೊಂಡ ಮೆಸೇಜಿಂಗ್ ಆ್ಯಪ್ ಹೈಕ್.. ದೇಶೀ ಆ್ಯಪ್ ನೇಪಥ್ಯಕ್ಕೆ
Published On - 7:52 pm, Sat, 13 February 21