ದೇಶೀಯ ವಿಡಿಯೋ ಆ್ಯಪ್​ಗಳಿಗೆ ವರವಾಯ್ತು ಟಿಕ್​ ಟಾಕ್ ನಿಷೇಧ: ಮಾರುಕಟ್ಟೆಯಲ್ಲಿ ಶೇ. 40 ಪಾಲು ಗಳಿಕೆ

ಟಿಕ್​ಟಾಕ್ ನಿಷೇಧದ ನಂತರ ದೇಶೀಯ ಕಿರು ವಿಡಿಯೋ ಆ್ಯಪ್​ಗಳು ಗಮನಾರ್ಹ ಬೆಳವಣಿಗೆ ಕಂಡಿವೆ. ಮಾರುಕಟ್ಟೆಯ ಶೇ.40 ಭಾಗವನ್ನು ದೇಶಿ ಆ್ಯಪ್​ಗಳೇ ಪಡೆದುಕೊಂಡಿವೆ.

ದೇಶೀಯ ವಿಡಿಯೋ ಆ್ಯಪ್​ಗಳಿಗೆ ವರವಾಯ್ತು ಟಿಕ್​ ಟಾಕ್ ನಿಷೇಧ: ಮಾರುಕಟ್ಟೆಯಲ್ಲಿ ಶೇ. 40 ಪಾಲು ಗಳಿಕೆ
ಸಾಂಕೇತಿಕ ಚಿತ್ರ
guruganesh bhat

| Edited By: sadhu srinath

Jan 01, 2021 | 2:07 PM

ಬೆಂಗಳೂರು: ಕಳೆದ ಜೂನ್​ನಲ್ಲಿ ಟಿಕ್​ ಟಾಕ್ ನಿಷೇಧದ ನಂತರ ದೇಶೀಯ ಕಿರು ವಿಡಿಯೋ ಆ್ಯಪ್​ಗಳು ಮುಂಚೂಣಿಗೆ ಬಂದಿವೆ. ದೇಶೀಯ ಆ್ಯಪ್​ಗಳೇ ಕಿರು ವಿಡಿಯೋ ಮಾರುಕಟ್ಟೆಯ ಶೇ. 40 ಭಾಗ ಹೊಂದಿವೆ ಎಂದು ಬೆಂಗಳೂರಿನ ರೆಡ್​ಸೀರ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.

ದೇಶದಲ್ಲಿ ಟಿಕ್ ಟಾಕ್ ನಿಷೇಧದ ನಂತರ 17 ಕೋಟಿ ಬಳಕೆದಾರರು ಇತರ ಆ್ಯಪ್​ಗಳತ್ತ ಮುಖಮಾಡಿದ್ದರು. ಈ ಅವಕಾಶವನ್ನು ದೇಶೀಯ ಕಿರು ವಿಡಿಯೋ ಆ್ಯಪ್​ಗಳು ಸದ್ಬಳಕೆ ಮಾಡಿಕೊಂಡವು. ಡೈಲಿ ಹಂಟ್ ಒಡೆತನದ ಜೋಶ್ ಕಿರು ವಿಡಿಯೋ ಆ್ಯಪ್​ ವಿನೂತನ ಸೌಲಭ್ಯಗಳನ್ನು ಒದಗಿಸುವ ಎಂಎಕ್ಸ್ ಟಕಾಟಕ್ ಎಂಬ ಆ್ಯಪ್​ನ್ನು ಬಿಡುಗಡೆಗೊಳಿಸಿತು.

ರೋಪ್ಸೋ, ಚಿಂಗಾರಿ, ಮೋಜ್ ಮಿತ್ರೋನ್, ಟ್ರೆಲ್ ಮುಂತಾದ ಆ್ಯಪ್​ಗಳು ಟಿಕ್ ಟಾಕ್ ನಿಷೇಧದ ನಂತರವೇ ಜನಪ್ರಿಯವಾದವು. ಕಿರು ವಿಡಿಯೋ ಆ್ಯಪ್​ಗಳು ಮುನ್ನೆಲೆಗೆ ಬರುತ್ತಿರುವುದನ್ನು ಗಮನಿಸಿದ ಫೇಸ್​ಬುಕ್ ‘ಫೇಸ್​ಬುಕ್ ರೀಲ್ಸ್’, ಮತ್ತು ಯೂಟ್ಯೂಬ್ ‘ಯೂಟ್ಯೂಬ್ ಶಾರ್ಟ್’ ಎಂಬ ಸೌಲಭ್ಯಗಳನ್ನು ಬಿಡುಗಡೆಗೊಳಿಸಿವೆ.

ಭಾರತೀಯ ಕಿರು ವಿಡಿಯೋ ಆ್ಯಪ್​ಗಳು ಹೊಸ ನಮೂನೆಯ ವಿಷಯಗಳನ್ನು ಬಿತ್ತರಿಸುತ್ತಿವೆ. ಈ ಕಾರಣದಿಂದಲೇ ಹೆಚ್ಚು ಬಳಕೆದಾರರನ್ನು ಸೆಳೆಯಲು ಸಾಧ್ಯವಾಗುತ್ತಿದೆ. ಮುಂದಿನ 5 ವರ್ಷಗಳಲ್ಲಿ ದೇಶಿ ಕಿರು ವಿಡಿಯೋ ಆ್ಯಪ್​ಗಳು ನಾಲ್ಕು ಪಟ್ಟು ಹೆಚ್ಚು ಬೆಳೆಯಲಿವೆ ಎಂದು ರೆಡ್​ಸೀರ್ ಸಂಸ್ಥೆಯ ಸಿಇಒ ಅನಿಲ್ ಕುಮಾರ್ ತಿಳಿಸಿದ್ದಾರೆ.

10 ಭಾರತೀಯ ಭಾಷೆಗಳಲ್ಲಿ ಸೇವೆ ಒದಗಿಸುತ್ತಿರುವ ರೋಪ್ಸೋ ಕೃತಕ ಬುದ್ಧಿಮತ್ತೆಯ ಪ್ರಮಾಣವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ಹೂಡಿಕೆ ಮಾಡಲಿದೆ. ಸದ್ಯ ಭಾರತದಲ್ಲಿ 60 ಕೋಟಿ ಅಂತರ್ಜಾಲ ಬಳಕೆದಾರರಿದ್ದ ಮುಂದಿನ 5 ವರ್ಷದೊಳಗೆ ಈ ಸಂಖ್ಯೆ 97 ಕೋಟಿಗೆ ಏರುವ ಸಾಧ್ಯತೆಯಿದೆ. ಈ ಅವಕಾಶವನ್ನು ಬಳಸಿಕೊಳ್ಳಲು ದೇಶಿ ಕಿರು ವಿಡಿಯೋ ಆ್ಯಪ್​ಗಳು ಯೋಜನೆ ರೂಪಿಸುತ್ತಿವೆ.

ಇರಲಿ ಎಚ್ಚರ, ಬೇಡ ಆತುರ.. Dating App ಬಳಸುವ ಮುನ್ನ ನೀವು ಓದಲೇಬೇಕಾದ ಸ್ಟೋರಿ ಇದು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada