ಮುಂಬೈ:ನಖಶಿಖಾಂತ ಸಾಲದ ಹೊರೆಯಲ್ಲಿ ಮುಳುಗಿರುವ ಅನಿಲ್ ಅಂಬಾನಿ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ತೆಗೆದುಕೊಂಡ ಸಾಲವನ್ನು ಹಿಂತಿರುಗಿಸಲು ವಿಫಲರಾದ ಕಾರಣ ಯೆಸ್ ಬ್ಯಾಂಕ್, ಅನಿಲ್ಗೆ ಸೇರಿದ ಮೂರು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಬ್ಯಾಂಕ್ ಮೂಲಗಳ ಪ್ರಕಾರ, ಅನಿಲ್ ಧೀರುಭಾಯಿ ಅಂಬಾನಿ ಗ್ರೂಪ್ (ಎಡಿಎಜಿ), 2,892 ಕೋಟಿ ರೂಪಾಯಿಗಳನ್ನು ಮರುಪಾವತಿಸಬೇಕಿದೆ. ಮೇ ತಿಂಗಳ ಮೊದಲ ವಾರದಲ್ಲೇ ಬ್ಯಾಂಕು ಆನಿಲ್ಗೆ ನೊಟೀಸೊಂದನ್ನು ಜಾರಿ ಮಾಡಿ 60 ದಿನದೊಳಗಾಗಿ ಬಾಕಿ ಚುಕ್ತಾ ಮಾಡುವಂತೆ ಹೇಳಿತ್ತು. ಆದರೆ ಡೆಡ್ಲೈನ್ ಮುಗಿದರೂ ಅನಿಲ್ ಹಣ ಹಿಂತಿರುಗಿಸುವ ಪ್ರಯತ್ನ ಮಾಡಲಿಲ್ಲ, ಹಾಗಾಗಿ ಅವರ ಆಸ್ತಿಗಳನ್ನು ಜಪ್ತಿ ಮಾಡಬೇಕಾಯಿತೆಂದು ಬ್ಯಾಂಕ್ ತಿಳಿಸಿದೆ.
ಮುಟ್ಟುಗೋಲು ಹಾಕಿಕೊಂಡಿರುವ ಎಡಿಎಜಿ ಆಸ್ತಿಗಳಲ್ಲಿ, ಸಾಂತಾಕ್ರೂಜ್ನಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿ (ರಿಲಯನ್ಸ್ ಸೆಂಟರ್), ದಕ್ಷಿಣ ಮುಂಬೈಯಲ್ಲಿರುವ ಎರಡು ಫ್ಲ್ಯಾಟುಗಳು ಸೇರಿವೆ. ಎಡಿಎಜಿ ಸಂಸ್ಥೆಗೆ ಸೇರಿದ ಎಲ್ಲಾ ಕಂಪನಿಗಳ ವಹಿವಾಟು ರಿಲಯನ್ಸ್ ಸೆಂಟರ್ನಿಂದಲೇ ನಡೆಯುತ್ತಿದ್ದವು. ಸಾಲದ ಸುಳಿಯಿಂದ ಹೊರಬರಲು ಅನಿಲ್ ಈ ಕಚೇರಿಯನ್ನು ಬೋಗ್ಯಕ್ಕೆ ನೀಡಲು ನಿರ್ಧರಿಸಿದ್ದು ಇತ್ತೀಚೆಗೆ ವರದಿಯಾಗಿತ್ತು.
ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಯೆಸ್ ಬ್ಯಾಂಕ್, ಸದರಿ ಆಸ್ತಿಗಳೊಂದಿಗೆ ಸಾರ್ವಜನಿಕರು ವ್ಯವಹಾರ ವಿಟ್ಟುಕೊಳ್ಳಬಾರದೆಂದು ಎಚ್ಚರಿಸಿದೆ.
ವಿಶ್ವದ ಐದನೇ ಅತಿದೊಡ್ಡ ಶ್ರೀಮಂತರೆನಿಸಿಕೊಂಡಿರುವ ಅನಿಲ್ ಅಂಬಾನಿಯ ಅಣ್ಣ ಮುಕೇಶ್ ಅಂಬಾನಿ ಹಿಂದೊಮ್ಮೆ ಸಹೋದರನ ನೆರವಿಗೆ ಧಾವಿಸಿ 5,000 ಕೋಟಿ ರೂಪಾಯಿಗಳಿಗೂ ಮೀರಿದ ಸಾಲವನ್ನು ತಾವೇ ತೀರಿಸಿದ್ದರು. ಮುಳುಗುತ್ತಿರುವ ತಮ್ಮನ ರಕ್ಷಣೆಗೆ ಅವರು ಪುನಃ ಹೋಗುವರೇ?