ಹರ್ಯಾಣದ ಕರ್ನಾಲ್ನಲ್ಲಿ ಆಗಸ್ಟ್ 28ರಂದು ರೈತರ ಮೇಲೆ ನಡೆದ ಲಾಠಿ ಚಾರ್ಜ್ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ರೈತರು ಕರ್ನಾಲ ಜಿಲ್ಲಾ ಪಂಚಾಯತ್ ಕಚೇರಿಯ ಗೇಟ್ ಬಳಿ ಧರಣಿ ನಡೆಸುತ್ತಿದ್ದಾರೆ. ಈ ಸಂಬಂಧ ಸ್ಥಳೀಯ ಆಡಳಿತದ ಅಧಿಕಾರಿಗಳು ನಿನ್ನೆ ಪ್ರತಿಭಟನಾನಿರತರೊಂದಿಗೆ ಮಾತುಕತೆ ನಡೆಸಿದ್ದರೂ ಅದು ವಿಫಲವಾಗಿದೆ. ಈ ನಿಟ್ಟಿನಲ್ಲಿ ಇನ್ನೊಂದು ಬಾರಿ ಇಂದು ಸರ್ಕಾರ ರೈತರೊಟ್ಟಿಗೆ ಮಾತುಕತೆಗೆ ಮುಂದಾಗಿದೆ.
ಆಗಸ್ಟ್ 28ರಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಬಿಜೆಪಿ ಕಾರ್ಯಕಾರಿಣಿ ಸಭೆಗಾಗಿ ಕರ್ನಾಲ್ಗೆ ಭೇಟಿ ಕೊಟ್ಟಿದ್ದರು. ಆದರೆ ಅವರ ಭೇಟಿಯನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದ್ದರು. ಆಗ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಪರಿಣಾಮ ಹಲವು ರೈತರು ಗಾಯಗೊಂಡಿದ್ದರು. ಈ ಮಧ್ಯೆ ಜಿಲ್ಲಾಧಿಕಾರಿ ಆಯುಷ್ ಸಿನ್ಹಾ, ಪ್ರತಿಭಟನಾ ನಿರತರ ತಲೆ ಒಡಿಯಿರಿ ಎಂದು ಪೊಲೀಸರಿಗೆ ಆದೇಶ ನೀಡಿದ ವಿಡಿಯೋ ವೈರಲ್ ಆಗಿತ್ತು.
ಪೊಲೀಸರ ಲಾಠಿ ಚಾರ್ಜ್ ಮತ್ತು ಐಎಎಸ್ ಅಧಿಕಾರಿಯ ವಿರುದ್ಧ ಕಳೆದ ನಾಲ್ಕು ದಿನಗಳಿಂದ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುತ್ತಿದ್ದಾರೆ. ಲಾಠಿ ಏಟು ನೀಡಿದ ಪೊಲೀಸರು ಮತ್ತು ಐಎಎಸ್ ಅಧಿಕಾರಿ ಆಯುಷ್ರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇನ್ನು ಈ ಘಟನೆಯಲ್ಲಿ ಮೃತಪಟ್ಟ ರೈತನ ಕುಟುಂಬಕ್ಕೆ 25 ಲಕ್ಷ ರೂ.ಪರಿಹಾರ ನೀಡಬೇಕು.ಹಾಗೇ, ಹತ್ತಿರದ ಸಂಬಂಧಿಗೆ ಸರ್ಕಾರಿ ಉದ್ಯೋಗ ನೀಡಬೇಕು ಮತ್ತು ಗಾಯಗೊಂಡ ರೈತರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಕೊಡಬೇಕು ಎಂದೂ ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಕೇಂದ್ರ ಸರ್ಕಾರದ ಮಾತುಕತೆ ಕೂಡ ವಿಫಲವಾಗಿದೆ.
ಇದನ್ನೂ ಓದಿ: ವಿಜಯಪುರದಲ್ಲಿ ಮತ್ತೆ ನಡುಗಿದ ಭೂಮಿ; ಒಂದು ವಾರದಲ್ಲಿ ಎರಡನೇ ಬಾರಿಗೆ ಭೂಕಂಪನದ ಅನುಭವ