ಅಯೋಧ್ಯೆ: ಉತ್ತರಪ್ರದೇಶದ ಸಾಕೇತ್ ಡಿಗ್ರಿ ಕಾಲೇಜಿನಲ್ಲಿ ನಡೆದ ಪ್ರತಿಭಟನೆ ವೇಳೆ ದೇಶ ವಿರೋಧಿ ಘೋಷಣೆ ಕೂಗಿದ ಆರೋಪದಲ್ಲಿ 6 ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ.
ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘಟನೆಯ ಚುನಾವಣೆ ನಡೆಸದೆ ಇರುವುದನ್ನು ಪ್ರಶ್ನಿಸಿ ಡಿ.16ರಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಆಜಾದಿ ಲೇ ಕೆ ರಹೇಂಗೆ (ಸ್ವಾತಂತ್ರ್ಯ ಪಡೆದೇ ತೀರುತ್ತೇವೆ) ಎಂಬ ಘೋಷಣೆ ಕೂಗಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲ ಎನ್.ಡಿ. ಪಾಂಡೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ರೀತಿ ಘೋಷಣೆ ಕೂಗಿದ ವಿದ್ಯಾರ್ಥಿಗಳ ಹೆಸರನ್ನು ಪ್ರಾಂಶುಪಾಲರು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಆರೋಪವನ್ನು ತಳ್ಳಿ ಹಾಕಿದ ವಿದ್ಯಾರ್ಥಿಗಳು ನಾವು ಭ್ರಷ್ಟ ಪ್ರಾಂಶುಪಾಲ ಮತ್ತು ಕಾಲೇಜಿನ ವಿದ್ಯಾರ್ಥಿ ವಿರೋಧಿ ವ್ಯವಸ್ಥೆಯಿಂದ ಆಜಾದಿ (ಸ್ವಾತಂತ್ರ್ಯ) ಬೇಕು ಎಂದು ಒತ್ತಾಯಿಸಿದ್ದೆವು ಎಂದಿದ್ದಾರೆ.
ಪ್ರಾಂಶುಪಾಲರ ದೂರಿನ ಮೇರೆಗೆ ಪೊಲೀಸರು ಸುಮಿತ್ ತಿವಾರಿ, ಶೇಷ್ ನಾರಾಯಣ್ ಪಾಂಡೆ, ಇಮ್ರಾನ್ ಹಾಶ್ಮಿ, ಸಾತ್ವಿಕ್ ಪಾಂಡೆ, ಮೋಹಿತ್ ಯಾದವ್ ಮತ್ತು ಮನೋಜ್ ಮಿಶ್ರಾ ಎಂಬ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ 124 ಎ (ದೇಶದ್ರೋಹ), 147( ಗಲಭೆ) , 188 (ಆದೇಶದ ಉಲ್ಲಂಘನೆ ), 332 (ಸಾರ್ವಜನಿಕ ಸೇವಾ ನಿರತ ಸಿಬ್ಬಂದಿಗೆ ಕರ್ತವ್ಯ ಮಾಡದಂತೆ ಅಡ್ಡಿಪಡಿಸುವುದು), 427 (ಆಸ್ತಿ ಹಾನಿ), 435 (ಬೆಂಕಿ ಅಥವಾ ಸ್ಫೋಟಕ ವಸ್ತು ಬಳಸಿ ಹಾನಿ) ಮತ್ತು 506 ( ಅಪರಾಧ ಕೃತ್ಯದ ಬೆದರಿಕೆ) ಸೆಕ್ಷನ್ ಅಡಿಯಲ್ಲಿ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Published On - 4:48 pm, Mon, 28 December 20