ನಿರಂಕಾರಿ ಮೈದಾನವೀಗ ‘ಕಿಸಾನ್ ಪುರ’! Delhi Chalo ಚಳುವಳಿಕಾರರಿಂದ ಮರು ನಾಮಕರಣ
ಕಳೆದ 33 ದಿನಗಳಿಂದ ತಮ್ಮ ಚಳುವಳಿಗೆ ಆಶ್ರಯ ನೀಡಿದ ಬುರಾರಿ ನಿರಂಕಾರಿ ಮೈದಾನಕ್ಕೆ ‘ಕಿಸಾನ್ಪುರ’ ಎಂದು ಪಂಜಾಬ್ ರೈತರು ಮರು ನಾಮಕರಣ ಮಾಡಿದ್ದಾರೆ
ದೆಹಲಿ: ಕಳೆದ 33 ದಿನಗಳಿಂದ ಸತತ ಚಳುವಳಿ ನಡೆಸುತ್ತಿದ್ದ ಪಂಜಾಬ್ ರೈತರು ತಾವು ಠಿಕಾಣಿ ಹೂಡಿದ್ದ ಬುರಾರಿಯ ನಿರಂಕಾರಿ ಮೈದಾನದ ಹೆಸರನ್ನೇ ಬದಲಿಸಿದ್ದಾರೆ. ತಮ್ಮ ಹೋರಾಟಕ್ಕೆ ಆಶ್ರಯ ನೀಡಿದ ಮೈದಾನಕ್ಕೆ ‘ಕಿಸಾನ್ ಪುರ’ ಎಂದು ನಾಮಕರಣ ಮಾಡಿದ್ದಾರೆ. ‘ಊರು ತೊರೆದು ಹೋರಾಟಕ್ಕೆ ಬಂದ ನಮಗೆ ಈ ಮೈದಾನ ಆಶ್ರಯ ನೀಡಿದೆ. ನಮ್ಮ ಗ್ರಾಮದಂತೆಯೇ ಒಂದು ವ್ಯವಸ್ಥೆ ಇಲ್ಲಿ ರೂಪುಗೊಂಡಿದೆ. ಹೀಗಾಗಿ, ಈ ಮೈದಾನಕ್ಕೆ ಮರು ನಾಮಕರಣ ಮಾಡಿದ್ದೇವೆ’ ಎಂದು ಚಳುವಳಿಗಾರರು ತಿಳಿಸಿದ್ದಾರೆ.
ಅರುಣ್ ಜೇಟ್ಲಿ ಇದ್ದಿದ್ದರೆ.. ಬಿಜೆಪಿಯ ದಿವಂಗತ ನಾಯಕ ಅರುಣ್ ಜೇಟ್ಲಿಯವರು ದೆಹಲಿ ಚಲೋ ಹಿನ್ನೆಲೆಯಲ್ಲಿ ಪ್ರಸ್ತಾಪಿಸಲ್ಪಟ್ಟಿದ್ದಾರೆ. ಬಿಜೆಪಿಯ ಸಂಕಷ್ಟಕರ ಸನ್ನಿವೇಷಗಳಲ್ಲಿ ನೆರವಾಗುತ್ತಿದ್ದ ಅರುಣ್ ಜೇಟ್ಲಿಯವರು ಈಗ ಜೀವಂತವಿದ್ದರೆ ಪಂಜಾಬ್ ರೈತರ ಚಳುವಳಿ ಇಷ್ಟೊಂದು ಕಾಲ ಮುಂದುವರೆಯುತ್ತಿರಲಿಲ್ಲ’ ಎಂದು ರಾಜ್ಯಸಭಾ ಸಂಸದ ಸುಶಿಲ್ ಕುಮಾರ್ ಮೋದಿ ಹೇಳಿದ್ದಾರೆ. ಈ ಮೂಲಕ ಅವರು ತಮ್ಮ ಸರ್ಕಾರದ ಕೆಲ ಸಚಿವರ ಕಾಲೆಳೆದಿದ್ದಾರೆ ಎಂಬ ವಿಶ್ಲೇಷಣೆ ಕೇಳಿಬಂದಿದೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ರನ್ನು ಭೇಟಿಯಾದ 25 ರೈತ ನಾಯಕರು ನೂತನ ಕೃಷಿ ಕಾಯ್ದೆಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇತ್ತ, ಪಂಜಾಬ್ ಪ್ರದೇಶ್ ಕಾಂಗ್ರೆಸ್ ಸೇವಾದಳದ ಕಾರ್ಯಕರ್ತರು ಹರಿಯಾಣ ಮುಖ್ಯಮಂತ್ರಿ ಮೋಹರ್ ಲಾಲ್ ಖಟ್ಟರ್ರ ಮನೆಯ ಮುಂದೆ ಇಂದು ಪ್ರತಿಭಟನೆ ನಡೆಸಿದ್ದಾರೆ. ಪಂಜಾಬ್ ರೈತರ ಚಳುವಳಿ ಕುರಿತು ಸ್ವಾಯತ್ತ ಸಮಿತಿಯೊಂದನ್ನು ರಚಿಸುವಂತೆ ಸರ್ವೋಚ್ಛ ನ್ಯಾಯಾಲಯ ಈಗಾಗಲೇ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
Published On - 4:59 pm, Mon, 28 December 20